ಬೆಂಗಳೂರು/ನೆಲಮಂಗಲ: ಸ್ವಯಂ ಸೇವಾ ಸಂಸ್ಥೆ (ಎನ್‌ಜಿಓ) ಹೆಸರಿನಲ್ಲಿ ನಕಲಿ ಬ್ಯಾಂಕ್ ಚೆಕ್ ಸೃಷ್ಟಿಸಿ 3.90 ಕೋಟಿ ರೂ. ದೋಚಿದ ವಂಚಕರ ತಂಡವೊಂದು, ಹಣವನ್ನು ಮತ್ತೂಂದು ಬ್ಯಾಂಕ್‌ನಲ್ಲಿ ಡೆಪಾಸಿಟ್ (ಠೇವಣಿ) ಇಡುವಾಗ ಪೊಲೀಸರಿಗೆ ಸಿಕ್ಕಿಬಿದ್ದಿರುವ ಪ್ರಕರಣ ನೆಲಮಂಗಲದಲ್ಲಿ ನಡೆದಿದೆ.
ಪ್ರಕರಣ ಸಂಬಂಧ ದಾವಣಗೆರೆ ಜಿಲ್ಲೆ ಹರಿಹರ ಮೂಲದ ಪರೀಕ್ಷಿತ್‌ನಾಯ್ಡು, ಗುರುಪ್ರಸಾದ್ ಮತ್ತು ರಂಗಸ್ವಾಮಿ ಎಂಬುವವರನ್ನು ಬಂಧಿಸಿ ತನಿಖೆ ಮುಂದುವರಿಸಿರುವ ರಾಮಮೂರ್ತಿನಗರ ಠಾಣೆ ಪೊಲೀಸರು, ವಂಚನೆಯ ಸೂತ್ರಧಾರ ಹರೀಶ್ ಎಂಬಾತನ ಬಂಧನಕ್ಕೆ ಬಲೆಬೀಸಿದ್ದಾರೆ.
ರಟ್ಟಿನ ಬಾಕ್ಸ್‌ಗಳಲ್ಲಿ ಕಂತೆ ಕಂತೆ ನೋಟುಗಳನ್ನು ತುಂಬಿಕೊಂಡು ಗುರುವಾರ ನೆಲಮಂಗಲದ ಐಸಿಐಸಿಐ ಬ್ಯಾಂಕ್‌ಗೆ ಆಗಮಿಸಿದ್ದ ಮೂವರು ಆರೋಪಿಗಳು 1.90 ಕೋಟಿ ರೂ.ಗಳನ್ನು ಬ್ಯಾಂಕ್ ಖಾತೆಯೊಂದಕ್ಕೆ ಜಮಾವಣೆ ಮಾಡಲು ಬ್ಯಾಂಕ್ ಸಿಬ್ಬಂದಿಗೆ ಕೇಳಿದ್ದರು. ಆರೋಪಿಗಳು ತಂದಿದ್ದ ಹಣವನ್ನು ಕಂಡು ಬ್ಯಾಂಕ್ ಸಿಬ್ಬಂದಿಯೇ ಕ್ಷಣಕಾಲ ದಂಗಾಗಿಬಿಟ್ಟಿದ್ದರು. ಹಣದ ಮೂಲದ ಬಗ್ಗೆ ಮಾಹಿತಿ ನೀಡಲು ಆರೋಪಿಗಳು ತಡಬಡಿಸುತ್ತಿದ್ದರು. ಕೆಲ ಸಮಯದ ಬಳಿಕ ಬ್ಯಾಂಕ್ ಸಿಬ್ಬಂದಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕೂಡಲೇ ನೆಲಮಂಗಲ ಠಾಣೆಯ ಪೊಲೀಸರು ಬ್ಯಾಂಕ್‌ಗೆ ಭೇಟಿ ನೀಡಿ ಆರೋಪಿಗಳನ್ನು ಹಲವು ಸುತ್ತು ವಿಚಾರಣೆಗೊಳಪಡಿಸಿದಾಗ ರಾಮಮೂರ್ತಿ ನಗರದ ಐಸಿಐಸಿಐ ಬ್ಯಾಂಕ್‌ನಿಂದ ಅಕ್ರಮವಾಗಿ ಡ್ರಾ ಮಾಡಿಕೊಂಡಿದ್ದ 3.90 ಕೋಟಿ ರೂ. ವಂಚನೆಯ ರಹಸ್ಯದ ಬಗ್ಗೆ ಬಾಯ್ಬಿಟ್ಟಿದ್ದಾರೆ.
ನಕಲಿ ಚೆಕ್, ಐದಾರು ಬ್ಯಾಂಕ್ ವ್ಯವಹಾರ ತಂದ ಉರುಳು!: ವಿಷಯ ತಿಳಿದ ಕೂಡಲೇ ರಾಮಮೂರ್ತಿ ನಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಹಣ ಜಪ್ತಿ ಮಾಡಿಕೊಂಡಿದ್ದಾರೆ. ಬೆಳಗಾವಿ ಮೂಲದ ದಮ್ಮನಗಿ ವಿಶನ್ ಫೌಂಡೇಶನ್ ಬ್ಯಾಂಕ್ ಖಾತೆ ರಾಮಮೂರ್ತಿನಗರದ ಐಸಿಐಸಿಐ ಬ್ಯಾಂಕ್‌ನಲ್ಲಿದೆ. ಪ್ರಮುಖ ಆರೋಪಿ ಹರೀಶ್, ಫೌಂಡೇಶನ್ ಹೆಸರಿನ ಬ್ಯಾಂಕ್ ಖಾತೆಯ ಹೆಸರು ಬಳಸಿಕೊಂಡು ನಕಲಿ ಚೆಕ್ ತಯಾರಿಸಿದ್ದು, 3.90 ಕೋಟಿ ರೂ. ನಮೂದಿಸಿದ್ದಾನೆ. ಜತೆಗೆ, ಫೌಂಡೇಶನ್ ಮುಖ್ಯಸ್ಥರಿಗೆ ಡ್ರಾ ಆಗುವ ಬಗ್ಗೆ ಮಾಹಿತಿ ಹೋಗದಂತೆ ಅವರ ಮೊಬೈಲ್ ಹ್ಯಾಕ್ ಮಾಡಿದ್ದಾನೆ. ಜುಲೈ 3ರಂದು ಐಸಿಐಸಿಐ ಬ್ಯಾಂಕ್‌ನಿಂದ ನಕಲಿ ಚೆಕ್ ನೀಡಿ 3.90 ಕೋಟಿ ರೂ. ಡ್ರಾ ಮಾಡಿಕೊಂಡ ಹರೀಶ್ ಅದನ್ನು ಪರೀಕ್ಷಿತ್ ನಾಯ್ಡು ಅಕೌಂಟ್‌ಗೆ ಜಮಾ ಮಾಡಿ ದ್ದಾನೆ. ಅದೇ ಹಣದಲ್ಲಿ ನಾಲ್ವರು ಆರೋಪಿಗಳು ಸೇರಿ ಸ್ಕೋಡಾ ಕಾರು ಖರೀದಿ ಸಿದ್ದಾರೆ. ಹಣವನ್ನು ಸಂರಕ್ಷಿಸುವ ಸಲುವಾಗಿ ಐದಾರು ಬ್ಯಾಂಕ್‌ಗಳಲ್ಲಿ ಹಣ ಡೆಪಾಸಿಟ್ ಮಾಡಿ ದ್ದಾರೆ. ಇದಾದ ಬಳಿಕ ಹರೀಶ್ ಸೂಚನೆ ಮೇರೆಗೆ ಮೂವರು ಆರೋಪಿಗಳು 1.90 ಕೋಟಿ ರೂ.ಗಳನ್ನು ನೆಲಮಂಗಲ ಬ್ಯಾಂಕ್‌ನಲ್ಲಿ ಡೆಪಾಸಿಟ್ ಮಾಡಲು ಹೋದಾಗ ಸಿಕ್ಕಿಬಿದ್ದಿದ್ದಾರೆ. ಪರೀಕ್ಷಿತ್ ನಾಯ್ಡು ಹರಿಹರದಲ್ಲಿ ಆಟೋಮೊಬೈಲ್ ಶಾಪ್ ಇಟ್ಟುಕೊಂಡಿದ್ದಾನೆ. ಗುರುಪ್ರಸಾದ್ ಗ್ಯಾರೇಜ್ ನಡೆಸುತ್ತಾನೆ. ರಂಗಸ್ವಾಮಿ ಸಣ್ಣ ಪುಟ್ಟ ಹಣಕಾಸಿನ ವ್ಯವಹಾರ ನಡೆಸುತ್ತಿದ್ದಾನೆ. ದಮ್ಮನಗಿ ಫೌಂಡೇಶನ್ ಹೆಸರಿನ ಅಕೌಂಟ್‌ನಲ್ಲಿ ಹಣವಿರುವ ಬಗ್ಗೆ ಆರೋಪಿಗಳಿಗೆ ಮಾಹಿತಿ ನೀಡಿದ್ದು ಹಾಗೂ ಆರೋಪಿಗಳಿಗೂ ಫೌಂಡೇಶನ್‌ಗೆ ಏನಾದರೂ ಸಂಬಂಧವಿದೆಯಾ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ. ಪ್ರಮುಖ ಆರೋಪಿ ಹರೀಶ್ ಬಂಧನದ ಬಳಿಕ ಪ್ರಕರಣಕ್ಕೆ ಮತ್ತಷ್ಟು ಸ್ಪಷ್ಟತೆ ಸಿಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಮ್ಮನಗಿ ಫೌಂಡೇಶನ್ ಹೆಸರಿನಲ್ಲಿ ನಕಲಿ ಚೆಕ್ ಬಳಸಿ 3.90 ಕೋಟಿ ರೂ.ಗಳನ್ನು ಆರೋಪಿಗಳು ಹಣ ಡ್ರಾ ಮಾಡಿದ್ದಾರೆ. ವಂಚನೆಯಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಸಾಧ್ಯತೆಯಿದೆ. ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.
● ರಾಹುಲ್‌ಕುಮಾರ್ ಶಹಾಪುರವಾಡ್, ಡಿಸಿಪಿ, ಪೂರ್ವ ವಿಭಾಗ