Advertisement

ಬರ ಎದುರಿಸಲು ಪ್ರತೀ ಜಿಲ್ಲೆಗೂ ಕಾರ್ಯಪಡೆ; ಡಿಸಿ, ಸಿಇಒ ಜತೆಗೆ ಸಿದ್ದರಾಮಯ್ಯ ವಿಡಿಯೋ ಸಂವಾದ

01:19 AM Mar 06, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮೂರು ತಿಂಗಳಲ್ಲಿ ಎದುರಾಗಬಹುದಾದ ಬರ ಹಾಗೂ ಕುಡಿಯುವ ನೀರಿನ ಸಮ ಸ್ಯೆ ನಿಭಾಯಿಸಲು ರಾಜ್ಯ ಸರಕಾರ ಸಂಪೂರ್ಣ ಸಿದ್ಧತೆ ನಡೆಸಿ ದ್ದು, ಪ್ರತಿ ಜಿಲ್ಲೆಯಲ್ಲಿ ಟಾಸ್ಕ್ ಪೋರ್ಸ್‌ ಹಾಗೂ ಸಹಾಯವಾಣಿ ತೆರೆ ಯಲು ಸೂಚಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಹಾಗೂ ಸಿಇಓಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ನಂತರ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ಅನಿವಾರ್ಯವಾದಾಗ ಮಾತ್ರ ಹೊಸ ಕೊಳವೆ ಬಾವಿಗಳನ್ನು ಕೊರೆ ಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.

ಈಗಾಗಲೇ ಬಿಡುಗಡೆ ಮಾಡಿರುವ 140 ಕೋಟಿ ರೂ.ಗಳ ಜೊತೆಗೆ 70 ಕೋಟಿ ರೂ.ಗಳನ್ನು ನೀಡುವುದಾಗಿ ತಿಳಿಸಿದರು.

ರಾಜ್ಯದ 223 ತಾಲೂಕುಗಳು ಬರಪೀಡಿತವಾಗಿದ್ದು, 194 ತೀವ್ರ ಬರಪೀಡಿತ ಎಂದು ಪರಿಗಣಿಸಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 854 ಕೋಟಿ ರೂ.ಲಭ್ಯವಿದ್ದು, ಜಿಲ್ಲೆಗಳಲ್ಲಿ ಈವರೆಗೆ 646 ಟಾಸ್ಕ್ ಪೋರ್ಸ್‌ ಸಭೆಗಳನ್ನು ನಡೆಸಲಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ 307 ಸಭೆಗಳಾಗಿವೆ. ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಿದೆ ಎಂದರು.

98 ತಾಲೂಕುಗಳ 412 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. 175 ಗ್ರಾಮಗಳಿಗೆ 204 ಟ್ಯಾಂಕರ್‌ ಮೂಲಕ, 596 ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದರು.

Advertisement

ಬಿಬಿಎಂಪಿಯ 120 ಹಾಗೂ ಜಲಮಂಡಳಿಯಲ್ಲಿ 232 ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆಯಾಗುತ್ತಿದೆ. ಒಟ್ಟು 96 ವಾರ್ಡುಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕಾದ ಪರಿಸ್ಥಿತಿ ಇದೆ. ಅಗತ್ಯ ಇರುವ ಕಡೆಗಳಲ್ಲಿ ಮಾತ್ರ ಕೊಳವೆ ಬಾವಿ ಕೊರೆಯಿರಿ ಎಂದು ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

33.25 ಲಕ್ಷ ರೈತರಿಗೆ ತಲಾ 2000 ರೂ.ನಂತೆ 631 ಕೋಟಿ ರೂ.ಗಳ ತಾತ್ಕಾಲಿಕ ಪರಿಹಾರವನ್ನು ನೀಡಲಾಗಿದೆ. ಸರಕಾರ 600 ಕೋಟಿ ರೂ.ಗಳ ಬೆಳೆ ವಿಮೆ ಪರಿಹಾರ ಒದಗಿಸಲಾಗಿದೆ. ಇನ್ನೂ 800 ಕೋಟಿ ರೂ.ಗಳನ್ನು ಪಾವತಿಯಾಗುವ ನಿರೀಕ್ಷೆ ಇದೆ. ಮೇವಿಗೆ ಸಮಸ್ಯೆಯಾಗಬಾರದು ಎಂದು ಮುಂಜಾಗ್ರತಾ ಕ್ರಮವಾಗಿ ಪಶುಸಂಗೋಪನೆ ಇಲಾಖೆಗೆ 40 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ತಲಾ 4ರಿಂದ 5 ಸಾವಿರ ರೂ. ಹಣ, 1.20 ಕೋಟಿ ಕುಟುಂಬಗಳಿಗೆ ಲಭಿಸುತ್ತಿದೆ. ಸುಮಾರು 4.50 ಕೋಟಿ ಜನರಿಗೆ ಇದರ ಲಾಭ ಸಿಕ್ಕಿದ್ದು, ಈ ಕಾರಣಕ್ಕಾಗಿ ಗುಳೆ ಹೋಗುವುದು ನಿಂತಿದೆ ಎಂದು ಹೇಳಿದರು.

ಸುಮಾರು 7408 ಹಳ್ಳಿಗಳಲ್ಲಿ , 1115 ವಾರ್ಡುಗಳಲ್ಲಿ ನೀರಿನ ತೊಂದರೆಯಾಗಬಹುದು ಎಂದು ಅಂದಾಜಿಸಲಾಗಿದೆ. ಅಷ್ಟೂ ಕಡೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಯೋಜನೆ ಸಿದ್ಧವಾಗಿದೆ. ಖಾಸಗಿ ಕೊಳವೆಬಾವಿಗಳೊಂದಿಗೆ ಒಪ್ಪಂದವಾಗಿದ್ದು, ಟ್ಯಾಂಕರ್‌ ಮೂಲಕ ನೀರು ಒದಗಿಸಲು ಕ್ರಮ ವಹಿಸಲಾಗಿದೆ. ಬರಗಾಲ ಬಂದಾಗ ನರೇಗಾ ಕೂಲಿಯನ್ನು 100 ರಿಂದ 150 ಮಾನವ ದಿನಗಳಿಗೆ ಹೆಚ್ಚಿಸುವುದು ಕಡ್ಡಾಯ. ಈ ಬಗ್ಗೆ ನಾವು ಕೇಂದ್ರ ಸರಕಾರಕ್ಕೆ ಎರಡು ಬಾರಿ ಮನವಿ ಸಲ್ಲಿಸಿದರೂ ಪರಿಷ್ಕರಣೆ ಮಾಡಿಲ್ಲ. 18,172 ಕೋಟಿ ರೂ.ಗಳ ಪರಿಹಾರ ಕೋರಿದ್ದರೂ, ಒಂದು ಬಿಡಿಗಾಸೂ ಸಹ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ನೇತೃತ್ವದಲ್ಲಿಯೇ ನಿಯೋಗ ಹೋಗೋಣವೆಂದರೆ, ಅದಕ್ಕೆ ಉತ್ತರವಿಲ್ಲ. ನಮ್ಮ ಹಕ್ಕು ನಮಗೆ ಕೊಡಿ ಎಂದು ಕೇಳುವುದಕ್ಕೂ ಸ್ವಾತಂತ್ರ್ಯವಿಲ್ಲವೇ? ಈಗ ಜೆಡಿಎಸ್‌ನವರು ಬೇರೆ ಬಿಜೆಪಿ ಜತೆ ಸೇರಿದ್ದಾರೆ. ಕೇಳುವ ರೀತಿ ಕೇಳಬೇಕು ಎಂದು ಪಾಠ ಹೇಳುತ್ತಾರೆ. ಇದ್ದದ್ದನ್ನು ಇದ್ದಂತೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರು ಎಂಬಂತೆ ಬಿಜೆಪಿಯವರು ಆಡುತ್ತಿದ್ದಾರೆ ಎಂದು ಟೀಕಿಸಿದರು.

ಮುಖ್ಯಮಂತ್ರಿಗಳ ಮನೆಗೇ ಟ್ಯಾಂಕರ್‌ ನೀರು!
ಕುಮಾರಕೃಪಾ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಗೃಹ ಕಚೇರಿಗೂ ನೀರಿನ ಕೊರತೆಯ ಬಿಸಿ ಮುಟ್ಟಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಜಲಮಂಡಳಿಯು ಟ್ಯಾಂಕರ್‌ನಲ್ಲಿ ನೀರು ಪೂರೈಸಿದೆ ಎನ್ನಲಾಗಿದೆ. ಸದ್ಯ ನಗರದಾದ್ಯಂತ ಜನರ ಬೇಡಿಕೆಗೆ ತಕ್ಕಂತೆ ನೀರು ಒದಗಿಸಲು ಜಲಮಂಡಳಿ ಹರಸಾಹಸ ಪಡುತ್ತಿದೆ. ನಗರದ ಬಹುತೇಕ ಅಪಾರ್ಟ್‌ಮೆಂಟ್‌ ನಿವಾಸಿಗಳು ಬೇರೆಡೆಯಿಂದ ನೀರನ್ನು ಖರೀದಿಸಿ ಸಂಪ್‌ನಲ್ಲಿ ಶೇಖರಿಸಿಕೊಂಡು ಮಿತವಾಗಿ ಬಳಸುತ್ತಿದ್ದಾರೆ. ಅಪಾರ್ಟ್‌ಮೆಂಟ್‌ಗಳಲ್ಲಿ ಮೊದಲು ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲು ಜಲಮಂಡಳಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

ನಿರ್ಧಾರಗಳೇನು?
-7340 ಬೋರ್‌ವೆಲ್‌ಗ‌ಳನ್ನು ಬಾಡಿಗೆಗೆ ಪಡೆಯಲುಸೂಚನೆ
-ಎಲ್ಲ ಟ್ಯಾಂಕರ್‌ಗಳ ನೋಂದಣಿ ಕಡ್ಡಾಯ
-ಕೊಳವೆ ಬಾವಿ ದುರಸ್ತಿಗೆ 46 ಕೋಟಿ ರೂ. ಬಿಡುಗಡೆ
-ಸಮಸ್ಯೆ ಇರುವ 7408 ಗ್ರಾಮಗಳತ್ತ ಆದ್ಯತೆ ನೀಡಲು ನಿರ್ದೇಶನ
-ಒಂದು ವಾರದೊಳಗೆ ಟ್ಯಾಂಕರ್‌ಗಳನ್ನು ಸಿದ್ಧ ಪಡಿ ಸಲು ಸೂಚನೆ
-ಬೆಂಗಳೂರಿನಲ್ಲಿ ಖಾಸಗಿ ಬೋರ್‌ವೆಲ್‌ಗ‌ಳನ್ನು ವಶಪಡಿಸಿಕೊಳ್ಳಲು ಆದೇಶ

Advertisement

Udayavani is now on Telegram. Click here to join our channel and stay updated with the latest news.

Next