Advertisement

ರಂಗಭೂಮಿ ಭಾರತೀಯ ಸಂಸ್ಕೃತಿಯ ಪ್ರತೀಕ; ಡಾ|ಪ್ರೇಮಪಲ್ಲವಿ

06:08 PM Jan 12, 2022 | Team Udayavani |

ಚಿತ್ರದುರ್ಗ: ರಂಗಭೂಮಿ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಸರ್ಕಾರಿ ಕಲಾ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಡಾ| ಪ್ರೇಮಪಲ್ಲವಿ ಹೇಳಿದರು. ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಆರಂಭವಾದ ಮೂರು ದಿನಗಳ ಯುವರಂಗ ಜಿಲ್ಲಾ ಕಾಲೇಜು ರಂಗೋತ್ಸವದಲ್ಲಿ ಅವರು ಮಾತನಾಡಿದರು.

Advertisement

ಮನುಷ್ಯ ಹುಟ್ಟಿದಾಗಲೇ ರಂಗಭೂಮಿ ಉದಯವಾಗಿದೆ. ಜನಸಾಮಾನ್ಯರ ಜೀವನ ಚಿತ್ರಣವನ್ನು ರಂಗಭೂಮಿ, ನಾಟಕ ಒಳಗೊಂಡಿದೆ. ಆದರೆ ಸಾಹಿತ್ಯಕ್ಕೆ ದೊರೆತಷ್ಟು ಆದ್ಯತೆ ರಂಗಭೂಮಿಗೆ ಸಿಗುತ್ತಿಲ್ಲ ಎಂದು ವಿಷಾದಿಸಿದರು.

ನಾಟಕ ಸೃಜನಶೀಲ ಕಲೆಯಾಗಿ ಹೊರಹೊಮ್ಮಿದ್ದು, 20ನೇ ಶತಮಾನದಲ್ಲಿ. ರಂಗಭೂಮಿಯನ್ನು ಜಾನಪದ, ಅಭಿಜಾತ ಎಂದು ಎರಡು ಭಾಗವಾಗಿ ವಿಂಗಡಿಸಬಹುದಾಗಿದೆ. ಬೆಳ್ಳಿತೆರೆ ನಡುವೆ ರಂಗಭೂಮಿ ಅಸ್ತಿತ್ವ ಕಳೆದುಕೊಳ್ಳಬಾರದು. ಯುವ ಸಮೂಹ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ದೇಸಿ ಕಲೆ ರಂಗಭೂಮಿ ಉಳಿದು ನಾಟಕಕಾರರನ್ನು ಬೆಳೆಸಿ ಪ್ರೋತ್ಸಾಹಿಸಿದಂತಾಗುತ್ತದೆ. ಶಿಕ್ಷಣದ ಜೊತೆ ರಂಗ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಒಲವು ತೋರಿದಾಗ ಜೀವನ ಪರಿಪೂರ್ಣವಾಗಲಿದೆ ಎಂದರು.

ಹಿರಿಯೂರಿನ ಜ್ಞಾನಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಡಾ| ವಿ. ಬಸವರಾಜ್‌ ಮಾತನಾಡಿ, ಎಲ್ಲಾ ಕಾಲಕ್ಕೂ ಮೌಲ್ಯಗಳನ್ನು ಎತ್ತಿಹಿಡಿಯುವ ರಂಗಭೂಮಿ ಜನಾಶಯ, ಸಮುದಾಯದ ಪರವಾಗಿದೆ.

ಮಾಧ್ಯಮಗಳ ಆರ್ಭಟ, ರಾಜಕೀಯ ಮೇಲಾಟಗಳನ್ನು ನೋಡಿ ಎಲ್ಲದರಿಂದಲೂ ದೂರವಿರಬೇಕು ಅನ್ನಿಸುತ್ತದೆ. ರಂಗಭೂಮಿ ಮೂಲಕ ಸಾಂಸ್ಕೃತಿಕ, ಸೃಜನಶೀಲತೆ, ಜೀವನ ಕೌಶಲ್ಯಕ್ಕೆ ತೆರೆದುಕೊಂಡರೆ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಬದುಕಿನ ಸತ್ಯಗಳನ್ನು ರಂಗಭೂಮಿ ತಿಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.

Advertisement

ವಿದ್ಯಾರ್ಥಿಗಳು ಪಠ್ಯಕ್ರಮಗಳಿಗಷ್ಟೆ ಜೋತು ಬಿದ್ದಿರುವ ಇಂದಿನ ಕಾಲದಲ್ಲಿ ಮೊಬೈಲ್‌, ಟಿವಿಯಿಂದ ನಾಶವಾಗುತ್ತಾರಾ ಎನ್ನುವ ಭಯ ಕಾಡುತ್ತಿದೆ. ಪಠ್ಯದ ಆಚೆಗೂ ರಂಗಭೂಮಿ ಮಹತ್ವದ ಪಾತ್ರ ವಹಿಸುತ್ತಿದೆ. ತರಗತಿಗಳಿಂದ ಕಲಿಯಲಾರದ ಅನೇಕ ವಿಚಾರಗಳನ್ನು ರಂಗಭೂಮಿ ಕಲಿಸುತ್ತದೆ ಎಂದು ತಿಳಿಸಿದರು.

ಬೆಂಗಳೂರಿನ ರಂಗ ಸಮಾಜದ ಸದಸ್ಯ ಶಿವೇಶ್ವರ ಗೌಡ, ಎಸ್‌ಜೆಎಂ ಕಾಲೇಜು ಪ್ರಾಚಾರ್ಯ ಡಾ| ಕೆ.ಸಿ. ರಮೇಶ್‌ ಮಾತನಾಡಿದರು. ಡಾನ್‌ಬೋಸ್ಕೋ ಪದವಿ ಕಾಲೇಜು ಪ್ರಾಚಾರ್ಯ ಡಾ| ಜೋ, ಧನಕೋಟಿ ವೇದಿಕೆಯಲ್ಲಿದ್ದರು.

ರಂಗಕಲೆಗೆ ಆಧುನಿಕ ಸ್ಪರ್ಶ ದೊರೆಯಲಿ
ನಾಟಕಗಳ ಮೂಲಕ ಸಮಾಜವನ್ನು ತಿದ್ದಬಹುದು. ರಂಗಕಲೆ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಅಂದುಕೊಂಡಿರಬಹುದು, ಆದರೆ ಕಡಿಮೆಯಾಗಿಲ್ಲ. ರಂಗಕಲೆಗೆ ಆಧುನಿಕ ಸ್ಪರ್ಶ ನೀಡಬೇಕಾಗಿದೆ. ನಾಟಕ ಮತ್ತು ಯುವ ಪೀಳಿಗೆ ನಡುವೆ ಸಾಕಷ್ಟು ಅಂತರವಿದೆ. ಅದಕ್ಕೆ ಕಾರಣ ಹುಡುಕಿ ಯುವ ಸಮುದಾಯವನ್ನು ರಂಗಭೂಮಿಯತ್ತ ಸೆಳೆಯಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಧನಂಜಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next