ಕಲಬುರಗಿ: ಪತ್ರಕರ್ತರದ್ದು ಕತ್ತಿಯ ಅಲುಗಿನ ಮೇಲಿನ ನಡಿಗೆಯಾಗಿದ್ದು, ಪತ್ರಿಕಾ ಸ್ವಾತಂತ್ರ್ಯ ಉಳಿವಿಗೆ ಒತ್ತಾಸೆಯಾಗಿ ಬಗ್ಗದೇ, ಕುಗ್ಗದೇ ನಿಲ್ಲಬೇಕು ಎಂದು ಹಿರಿಯ ಪತ್ರಕರ್ತ ಪಿ.ಎಂ. ಮಣ್ಣೂರ ಹೇಳಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಬಸವೇಶ್ವರ ನಗರದ ತಮ್ಮ ನಿವಾಸದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿರುವ “ಮನೆ ಅಂಗಳದಲ್ಲಿ ಗೌರವಿಸುವ’ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
1968-19ರಲ್ಲಿ ನಾನು “ಸತ್ಯಕಾಮ’ ಎನ್ನುವ ವಾರಪತ್ರಿಕೆ ಆರಂಭಿಸಿದೆ. 1972ರಲ್ಲಿ ಜರುಗಿದ ಲೋಕಸಭೆ ಚುನಾವಣೆ ವೇಳೆ ಧರ್ಮರಾವ್ ಅಫಜಲಪುರಕರ್ ಕಾಂಗ್ರೆಸ್ (ಐ) ಅಭ್ಯರ್ಥಿಯಾಗಿದ್ದರು. ತಮ್ಮ ಸುದ್ದಿ ಕವರೇಜ್ ಮಾಡಲು ಅವರು 10ಸಾವಿರ ರೂ. ಕೊಟ್ಟಿದ್ದರು. ಹಣ ತೆಗೆದುಕೊಳ್ಳುವ ವೇಳೆಯಲ್ಲೇ ಡಾ| ಶರಣಬಸವಪ್ಪ ಅಪ್ಪ ಸ್ಪರ್ಧಿಸಿದ್ದು ನಾನು ಅವರ ಬಗ್ಗೆಯೂ ಬರೆಯಬೇಕಾಗುತ್ತದೆ ಎಂದು ಹೇಳಿದ್ದರಿಂದ ಪ್ರಿಂಟ್ ಆದ ಪತ್ರಿಕೆ ಅವರಿಗೆ ಕೊಟ್ಟು, ಉಳಿದ ಹಣ ವಾಪಸ್ ಕೊಡಲು ಹೋಗಿದ್ದೆ. ಅವರು ನನ್ನ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಂತರ “ಸತ್ಯಕಾಮ’ ಪತ್ರಿಕೆ ದಿನಪತ್ರಿಕೆಯಾಗಿ ಪರಿವರ್ತಿಸಿದೆ ಎಂದು ತಮ್ಮ ಪತ್ರಿಕಾಲೋಕದ ಪದಾರ್ಪಣೆ ಕುರಿತು ಮೆಲುಕು ಹಾಕಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬರಾವ್ ಯಡ್ರಾಮಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ|ಶಿವರಂಜನ ಸತ್ಯಂಪೇಟೆ, ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಉಪಾಧ್ಯಕ್ಷ ದೇವಿಂದ್ರಪ್ಪ ಆವಂಟಿ, ಕಾರ್ಯಕಾರಿ ಸಮಿತಿ ಸದಸ್ಯ ರಾಜು ಕೋಷ್ಠಿ, ಪತ್ರಕರ್ತ ಜಗದೀಶ ಕುಂಬಾರ ಮತ್ತು ಪದಾಧಿಕಾರಿಗಳು ಈ ಸಂದರ್ಭದಲ್ಲಿದ್ದರು.
ಸ್ಥಳೀಯ ಸಣ್ಣ ಪತ್ರಿಕೆಗಳ ಉಳಿವಿಗಾಗಿ ಪ್ಯಾಕೇಜ್ ಘೋಷಣೆ ಮಾಡಬೇಕು. ನಿವೃತ್ತ ಪತ್ರಕರ್ತರಿಗೆ 10 ಸಾವಿರ ರೂ. ಮಾಸಾಶನ ನೀಡಬೇಕು. ಸ್ಥಳೀಯ ಮತ್ತು ಪ್ರಾದೇಶಿಕ ಪತ್ರಿಕೆಗಳಿಂದ ಮಾತ್ರ ಅಸ್ಮಿತೆ ಉಳಿದಿದೆ ಎನ್ನುವುದು ಸರ್ಕಾರ ಮತ್ತು ಆಯಾ ಭಾಗದ ಜನಪ್ರತಿನಿಧಿಗಳು ತಿಳಿಯಬೇಕು.
–ಪಿ.ಎಂ. ಮಣ್ಣೂರ, ಹಿರಿಯ ಪತ್ರಕರ್ತ