Advertisement

ಇನ್ನೂ ನಡೆಯದ ಹಳೆ ಮನೆಗಳ ಸಮೀಕ್ಷೆ

01:16 PM Aug 04, 2019 | Suhan S |

ಬೀದರ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಸುಮಾರು 100 ವರ್ಷಕ್ಕೂ ಹೆಚ್ಚು ಹಳೆಯದಾದ ಮಣ್ಣಿನ ಮನೆಗಳು, ಶಿಥಿಲಾವಸ್ಥೆ ಮನೆಗಳ ಕುರಿತು ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ಕಳುಹಿಸುವಂತೆ ನಿಕಟಪೂರ್ವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದು, ಇಂದಿಗೂ ಕೂಡ ಜಿಲ್ಲೆಯಲ್ಲಿನ ಹಳೆ ಮನೆಗಳ ಸರ್ವೇ ಕಾರ್ಯ ನಡೆದಿಲ್ಲ ಎಂದು ಗ್ರಾಮೀಣ ಭಾಗದ ಜನರು ಆರೋಪಿಸುತ್ತಿದ್ದಾರೆ.

Advertisement

ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿನ ಆಯಾ ಇಲಾಖೆಗಳ ಅಧಿಕಾರಿಗಳು ಸೂಕ್ತವಾಗಿ ತಮ್ಮ ಕರ್ತವ್ಯ ನಿರ್ವಹಿಸಿದರೆ ಇಂದು ಬಸವಕಲ್ಯಾಣ ತಾಲೂಕಿನ ಧನ್ನೂರ(ಕೆ) ವಾಡಿಯಲ್ಲಿ ಮನೆಗೋಡೆ ಕುಸಿದು ವ್ಯಕ್ತಿಯೊಬ್ಬ ಸಾವಿಗೀಡಾಗುತ್ತಿರಲಿಲ್ಲ ಎಂಬ ಅಭಿಪ್ರಾಯಗಳು ಜನರಿಂದ ವ್ಯಕ್ತವಾಗುತ್ತಿವೆ. ಒಂದು ವಾರದಿಂದ ಜಿಲ್ಲೆಯ ವಿವಿಧೆಡೆ ನಿರಂತರ ಮಳೆಯಾಗುತ್ತಿದ್ದು, ಮಣ್ಣಿನ ಗೋಡೆಗಳು ನೆನೆದು ಬೀಳುವ ಹಂತಕ್ಕೆ ಬರುತ್ತಿವೆ. ಆದರೆ, ಅಧಿಕಾರಿಗಳು ಮಾತ್ರ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂದಾಗುತ್ತಿಲ್ಲ ಎಂದು ಗ್ರಾಮೀಣ ಭಾಗದ ಜನರು ಹೇಳುತ್ತಿದ್ದಾರೆ.

ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಜೂನ್‌ ತಿಂಗಳಲ್ಲಿ ಮಳೆಯಿಂದಾಗಿ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ 6 ಜನರು ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಗಳ ಮನೆಗೆ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿ 24 ಲಕ್ಷ ರೂ. ಪರಿಹಾರ ಚೆಕ್‌ ವಿತರಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ, ಬೀದರ ಜಿಲ್ಲೆಯ ವಿವಿಧೆಡೆ ಮಣ್ಣಿನ ಮನೆಗಳ ಕುರಿತು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ, ಇಂದಿಗೂ ಕೂಡ ಮಣ್ಣಿನ ಮನೆಗಳ ಕುರಿತು ಸರ್ವೇ ಕಾರ್ಯ ನಡೆದಿಲ್ಲ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಅಲ್ಲದೆ, ವಿವಿಧ ವಸತಿ ಯೋಜನೆಗಳಡಿ ಮನೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. 2,500 ಮನೆಗಳ ನಿರ್ಮಾಣಕ್ಕೆ ಆದೇಶ ನೀಡಿದ್ದು, ಸದ್ಯ ಮಣ್ಣಿನ ಮನೆಯಲ್ಲಿ ವಾಸ ಇರುವ ಕುಟುಂಬಸ್ಥರನ್ನು ಗುರುತಿಸಿ, ಮನೆಯ ಮಾಲೀಕರ ಹೆಸರಲ್ಲಿ ನಿವೇಶ ಇದ್ದರೆ ಕೂಡಲೆ ಮನೆ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸಾರ್ವಜನಿಕರು. ಮುಖ್ಯಮಂತ್ರಿಗಳ ಆದೇಶಕ್ಕೆ ಅಧಿಕಾರಿಗಳು ಬೆಲೆ ನೀಡದಿದ್ದರೆ ಏನು ಗತಿ? ಎಂಬ ಮಾತುಗಳು ಕೇಳಿಬರುತ್ತಿವೆ.

ಸದ್ಯ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಣ್ಣಿನ ಹಳೆ ಮನೆಗಳು ಇವೆ. ನಿರಂತರ ಮಳೆಯಿಂದ ನೆನೆದು ಯಾವ ಸಂದರ್ಭದಲ್ಲಿ ಬೇಕಾದರೂ ಕುಸಿಯಬಹುದಾಗಿದ್ದು, ಅಧಿಕಾರಿಗಳು ಎಚ್ಚೆತ್ತುಕೊಂಡು ಶಿಥಿಲಗೊಂಡ ಮನೆಗಳ ಮಾಲೀಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಮೂಲಕ ಪ್ರಾಣ ಹಾನಿ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕಾಗಿದೆ.

ಸೋರುವ ಮನೆಯಲ್ಲಿ ಇರಬೇಡಿ: ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಕೆಲವು ದಿನಗಳಿಂದ ನಿರಂತವಾಗಿ ಮಳೆ ಸುರಿಯುತ್ತಿದೆ. ಈ ರೀತಿ ಜಿಟಿಜಿಟಿ ಮಳೆ ಸುರಿಯುವಾಗ ಹಳೆ ಮನೆಗಳ ಗೋಡೆಗೆ ನೀರಿಳಿದು ಗೋಡೆ ಕುಸಿದು ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಬೀದರ ಜಿಲ್ಲೆಯ ಜನರು ಈ ಬಗ್ಗೆ ಗಮನ ಹರಿಸಬೇಕು. ತಾವು ಹಳೆಯ ಮನೆಗಳಲ್ಲಿ ವಾಸಿಸುತ್ತಿದ್ದರೆ ಕೂಡಲೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ| ಎಚ್.ಆರ್‌. ಮಹಾದೇವ ತಿಳಿಸಿದ್ದಾರೆ. ಈಗಾಗಲೇ ಬಸವಕಲ್ಯಾಣ ತಾಲೂಕಿನಲ್ಲಿ ಹಳೆ ಮನೆ ಕುಸಿದು ಅನಾಹುತ ಸಂಭವಿಸಿದೆ. ಇಂತಹ ಘಟನೆಗಳು ಜಿಲ್ಲೆಯಲ್ಲಿ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು. ಇಂತಹದ್ದೇ ಘಟನೆಗಳು ಜಿಲ್ಲೆಯಲ್ಲಿ ಇನ್ನೂ ಕೆಲವು ಕಡೆಗಳಲ್ಲಿ ಸಂಭವಿಸಿವೆ ಎಂದು ವರದಿಯಾಗಿದೆ. ಆದ್ದರಿಂದ ಜನರು ಹಳೆಯ ಮನೆಯಲ್ಲಿ ವಾಸಿಸಬಾರದು. ಮನೆಯ ಗೋಡೆಗೆ ನೀರು ಇಳಿಯುತ್ತಿದ್ದರೆ ಕೂಡಲೇ ಆ ಮನೆಯನ್ನು ಬಿಡಬೇಕು. ಮನೆಯ ಛಾವಣಿ ಸೋರುತ್ತಿದ್ದರೆ ಕೂಡಲೇ ಎಚ್ಚೆತುಕೊಂಡು ಜಿಲ್ಲಾಡಳಿತಕ್ಕೆ ವರದಿ ಮಾಡಬೇಕು. ಅಂತಹವರಿಗೆ ಜಿಲ್ಲಾಡಳಿತ ಬೇರೆ ವ್ಯವಸ್ಥೆ ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರಂಜಾಕ್ಕೆ 173.61 ಕ್ಯೂಸೆಕ್‌ ಒಳ ಹರಿವು: ಗಡಿ ಜಿಲ್ಲೆಯಲ್ಲಿ ಕೇವಲ ಒಂದು ದಿನದಲ್ಲಿ ಸುರಿದ ಮಳೆ, ಕೊರತೆಯಾಗಿದ್ದ ಮಳೆಯ ಅರ್ಧದಷ್ಟುನ್ನು ನೀಗಿಸಿದೆ. ಆ.2ರಂದು ಜಿಲ್ಲೆಯಲ್ಲಿ ಸರಾಸರಿ 42 ಮಿ.ಮೀ. ಮಳೆ ಸುರಿದಿದೆ. ಅಲ್ಲದೆ, ಕಾರಂಜಾ ಜಲಾಶಯಕ್ಕೆ ಒಂದೇ ದಿನ 173.61 ಕ್ಯೂಸೆಕ್‌ ನೀರು ಒಳ ಹರಿವು ಬಂದಿದೆ. ಆ.2ರಿಂದ ಆ.3ರ ಬೆಳಗ್ಗೆ 8 ಗಂಟೆಯ ವರೆಗೆ ಜಿಲ್ಲೆಯಲ್ಲಿ 42 ಮಿ.ಮೀ. ಮಳೆಯಾಗಿದೆ. ಔರಾದ ತಾಲೂಕಿನಲ್ಲಿ 42 ಮಿ.ಮೀ., ಬೀದರ ತಾಲೂಕಿನಲ್ಲಿ 41 ಮಿ.ಮೀ., ಭಾಲ್ಕಿ ತಾಲೂಕಿನಲ್ಲಿ 39 ಮಿ.ಮೀ., ಬಸವಕಲ್ಯಾಣ ತಾಲೂಕಿನಲ್ಲಿ 41 ಮಿ.ಮೀ., ಹುಮನಾಬಾದ ತಾಲೂಕಿನಲ್ಲಿ 45 ಮಿ.ಮೀ. ಮಳೆಯಾಗಿದೆ. ನಿರಂತರ ಮಳೆ ಸುರಿದ ಪರಿಣಾಮ ಜಿಲ್ಲೆಯ ಜನರಲ್ಲಿ ಸಂತಸ ಮನೆ ಮಾಡಿದೆ. ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಎರಡು ದಿನಗಳಿಂದ ಇಲ್ಲಿನ ಜನರಿಗೆ ಸೂರ್ಯನ ದರ್ಶನವಾಗಿಲ್ಲ. ಸಧ್ಯ ಕಾರಂಜಾ ಜಲಾಶಯದಲ್ಲಿ 1.272 ಟಿಎಂಸಿ ನೀರಿದೆ. ಈ ಪೈಕಿ 0.375 ಟಿಎಂಸಿ (ಡೆಡ್‌ ಸ್ಟೋರೆಜ್‌) ಬಳಕೆಗೆ ಯೋಗ್ಯವಲ್ಲದ ನೀರಿದೆ. 0.897 ಟಿಎಂಸಿ ನೀರು ಬಳಕ್ಕೆಗೆ ಯೋಗ್ಯವಾಗಿದೆ. ಈ ವರೆಗೆ ಒಟ್ಟಾರೆ ಜಲಾಶಯಕ್ಕೆ 0.108 ಟಿಎಂಸಿ ನೀರು ಒಳ ಹರಿವು ಬಂದಿದೆ.
ಸರ್ಕಾರದ ಆದೇಶದಂತೆ ನಗರ ಪ್ರದೇಶಗಳಲ್ಲಿನ ಹಳೆ ಮಣ್ಣಿನ ಮನೆಗಳ ಕುರಿತು ಸರ್ವೇ ಕಾರ್ಯ ನಡೆಸಲಾಗುತ್ತಿದ್ದು, ಶೀಘ್ರದಲ್ಲಿ ವರದಿ ಬರುವ ನಿರೀಕ್ಷೆ ಇದೆ. ವರದಿ ಬಂದ ಕೂಡಲೇ ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು.• ಬಲಭೀಮ ಕಾಂಬಳೆ, ಯೋಜನಾ ಅಧಿಕಾರಿ
Advertisement

 

•ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next