Advertisement

ಕೋವಿಡ್‌-19 ಬಗ್ಗೆ ಭಾರತೀಯರಿಗೆ ಎಷ್ಟಿದೆ ಭಯ?

08:12 AM May 11, 2020 | Hari Prasad |

ಕೋವಿಡ್ ಜನರಲ್ಲಿ ಸೃಷ್ಟಿಸಿರುವ ಆತಂಕವು ಅಷ್ಟಿಷ್ಟಲ್ಲ. ಆದರೆ ಈ ಆತಂಕ ಕೂಡ ಎಲ್ಲಾ ವಯೋಮಾನದವರಲ್ಲೂ ಏಕ ರೀತಿಯಲ್ಲಿ ಇಲ್ಲ.

Advertisement

ಭಾರತದಲ್ಲಿ, ಇತರ ವಯೋಮಾನದವರಿಗೆ ಹೋಲಿಸಿದರೆ ಮಿಲೇನಿಯಲ್ಸ್‌ಗೆ (ಅಂದರೆ 23-38 ವರ್ಷದವರಿಗೆ) ಕೋವಿಡ್ ಬಗ್ಗೆ ಹೆಚ್ಚು ಭಯವಿದೆ ಎನ್ನುತ್ತದೆ ಮಿಂಟ್‌ ಜಾಲತಾಣದ ವರದಿ.

ಈ ವರದಿಯು ‘ಯೂಗವ್‌’ ಮಾರುಕಟ್ಟೆ ಸಂಶೋಧನಾ ಸಂಸ್ಥೆಯ ಜಾಗತಿಕ ಸಮೀಕ್ಷೆಯನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ಭಾರತ ಸೇರಿದಂತೆ 26 ರಾಷ್ಟ್ರಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ.

ಭಾರತದಲ್ಲಿ ಸುಮಾರು ಏಳು ವಾರಗಳವರೆಗೆ ಯೂಗವ್‌ನ ಸಮೀಕ್ಷೆ ನಡೆದಿದೆ. ಮಿಲೇನಿಯಲ್‌ಗಳಲ್ಲಿ ಪುರುಷರಿಗಿಂತ ಮಹಿಳೆಯರಲ್ಲೇ ಕೋವಿಡ್ ಪರಿಣಾಮಗಳ ಬಗ್ಗೆ ಆತಂಕ ಅಧಿಕವಿರುವುದು ಕಂಡುಬಂದಿದೆ. ಇವರಿಗೆ ಹೋಲಿಸಿದರೆ, ಹದಿಹರೆಯದವರು ಮತ್ತು ಹಿರಿಯ ತಲೆಮಾರಿಗೂ ಕೂಡ ಕೋವಿಡ್‌-19 ಬಗ್ಗೆ ಅಷ್ಟು ಆತಂಕವಿಲ್ಲ ಎನ್ನಲಾಗಿದೆ.

ವಿವಿಧ ಕಾರಣಗಳಿಗಾಗಿ ಚಿಂತೆ
ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕ ಅನೇಕ ಕಾರಣಗಳಿಗಾಗಿ ಆತಂಕ ಹುಟ್ಟಿಸುತ್ತಿದೆ.  ಭಾರತದಲ್ಲಿ ಅನೇಕರಿಗೆ ರೋಗಕ್ಕೆ ತುತ್ತಾಗುತ್ತೇವೆ ಎನ್ನುವುದಕ್ಕಿಂತ ಅಧಿಕವಾಗಿ ಅಗತ್ಯ ವಸ್ತುಗಳು (ಆಹಾರ, ಔಷಧಿ, ಇತ್ಯಾದಿ) ಎಲ್ಲಿ ಕೈಗೆಟುಕದೇ ಹೋಗುತ್ತವೋ ಎನ್ನುವ ಆತಂಕ ಅಧಿಕವಿದೆ ಎನ್ನುತ್ತದೆ ಈ ಸಮೀಕ್ಷೆ.

Advertisement

ಈ ಆನ್‌ಲೈನ್‌ ಸಮೀಕ್ಷೆಯಲ್ಲಿ ಪಾಲ್ಗೊಂಡ 7 ಸಾವಿರಕ್ಕೂ ಅಧಿಕ ವಿವಿಧ ಕ್ಷೇತ್ರಗಳ ಜನರಲ್ಲಿ ಸರಾಸರಿ 37  ಪ್ರತಿಶತ ಜನರು ಆಹಾರ ಪದಾರ್ಥಗಳ ಅಭಾವ ಎದುರಾಗುತ್ತದೇನೋ  ಎಂಬ ಭಯ ವ್ಯಕ್ತಪಡಿಸಿದರೆ, 20 ಪ್ರತಿಶತ ಜನರು ಕೆಲಸ  ಕಳೆದುಕೊಳ್ಳುವ, 16 ಪ್ರತಿಶತ ಜನರು ಸಂಬಳದಲ್ಲಿ  ಕಡಿತವಾಗುತ್ತದೆ ಎನ್ನುವ ಭಯ ಎದುರಿಸುತ್ತಿದ್ದಾರೆ,  ಆರೋಗ್ಯ ಸೇವೆಗಳಿಂದ ವಂಚಿತವಾಗುವ ಭಯ 25 ಪ್ರತಿಶತ ಜನರಿಗಿದೆ.

ದೇಶದಲ್ಲಿ ಹೇಗಿದೆ ಸ್ಥಿತಿ?
ಭಾರತದಲ್ಲಿ ಕೋವಿಡ್ ವೈರಸ್ ನಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ವೃದ್ಧಿಸುತ್ತಿದ್ದು ದೇಶದಲ್ಲಿ 52,952 ಕೇಸುಗಳಿದ್ದಾಗ, 15,260 ಜನ ಚೇತರಿಸಿಕೊಂಡಿದ್ದಾರೆ. ಇದರರ್ಥ ನಮ್ಮಲ್ಲಿ ಬಹುಬೇಗನೇ ಕಾಲುಭಾಗಕ್ಕೂ ಅಧಿಕ ಸೋಂಕಿತರು ಚೇತರಿಸಿಕೊಂಡಿದ್ದಾರೆ.

ಭಾರತದ 736 ಜಿಲ್ಲೆಗಳಲ್ಲಿ 130 ಜಿಲ್ಲೆಗಳು (17 ಪ್ರತಿಶತ) ಕೆಂಪು ವಲಯದಲ್ಲಿದ್ದರೆ, 284 ಜಿಲ್ಲೆಗಳು (38 ಪ್ರತಿಶತ) ಕಿತ್ತಳೆ ವಲಯದಲ್ಲಿ ಹಾಗೂ 319 ಜಿಲ್ಲೆಗಳು (43 ಪ್ರತಿಶತ) ಹಸಿರುವ ವಲಯದಲ್ಲಿವೆ.

ಇನ್ನು ಲಾಕ್‌ಡೌನ್‌ ಘೋಷಣೆಯಾಗುವ ಮುನ್ನ ದೇಶದಲ್ಲಿ ಸೋಂಕಿತರ ಸಂಖ್ಯೆ 3.4 ದಿನಗಳಿಗೇ ದ್ವಿಗುಣಗೊಳ್ಳುತ್ತಿತ್ತು. ಈಗ 12 ದಿನಗಳಿಗೆ ದ್ವಿಗುಣಗೊಳ್ಳುತ್ತಿದೆ. ಅಂದರೆ, ಸೋಂಕು ಹರಡುವಿಕೆ ವೇಗ ತಗ್ಗಿದೆ ಎಂದರ್ಥ.

ಇದೇ ದರದಲ್ಲಿ ಮುಂದುವರಿದರೆ ಭಾರತದಲ್ಲಿ ಮೇ ಅಂತ್ಯದ ವೇಳೆಗೆ 1.86 ಲಕ್ಷ ಕೇಸುಗಳು ದಾಖಲಾಗುತ್ತವೆ ಎಂಬ ಅಂದಾಜಿದೆ. ಒಂದು ವೇಳೆ ಲಾಕ್‌ಡೌನ್‌ ತರದೇ ಹೋಗಿದ್ದರೆ, ಎಪ್ರಿಲ್‌ 24ರೊಳಗೇ 1.50 ಲಕ್ಷ ಸೋಂಕಿತರು ಇರುತ್ತಿದ್ದರು ಎನ್ನಲಾಗುತ್ತದೆ.

ಸ್ವಚ್ಛತೆಯ ಪಾಲನೆಯಲ್ಲಿ  ಹಿಂದುಳಿದ ಭಾರತ
ಕೋವಿಡ್ ನಿಂದ ದೂರವಿರಲು ಸಾಮಾಜಿಕ ಅಂತರದ ಜತೆ ಜತೆಗೆ ಸ್ವಚ್ಛತೆಯ ಪಾಲನೆಯೂ ಬಹಳ ಮುಖ್ಯ ಎಂದು ಸರಕಾರಗಳು, ಆರೋಗ್ಯ ವಲಯಗಳು ಎಷ್ಟೇ ಎಚ್ಚರಿಸುತ್ತಾ ಬಂದಿದ್ದರೂ ಭಾರತದಲ್ಲಿ ಈ ವಿಷಯ ಅಷ್ಟಾಗಿ ಪಾಲನೆಯಾಗುತ್ತಿಲ್ಲ.

ಗಂಟೆಗೊಮ್ಮೆ ಕೈ ಸ್ವಚ್ಛಗೊಳಿಸುವ ಹಾಗೂ ಸ್ಯಾನಿಟೈಸರ್‌ಗಳನ್ನು ಬಳಸುವುದರಲ್ಲಿ ಭಾರತೀಯರು ಹಿಂದಿದ್ದಾರೆ. ಆದರೆ ಇದು ನಿಷ್ಕಾಳಜಿಯ ಫ‌ಲವಷ್ಟೇ ಅಲ್ಲದೆ, ಇದಕ್ಕೆ ಬಡತನವೂ ಬಹುದೊಡ್ಡ ಕಾರಣವಿರಬಹುದು ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next