ಉಡುಪಿ: ಕಾರ್ಮಿಕ ಇಲಾಖೆ, ಆರ್‌ಟಿಒ ಹಾಗೂ ಸಂಚಾರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಗುರುವಾರ ಬೆಳಗ್ಗೆ ನಗರದ ಸಿಟಿ ಬಸ್ ನಿಲ್ದಾಣ ಸಮೀಪದಲ್ಲಿ ಕಾರ್ಮಿಕರನ್ನು ತುಂಬಿಸಿಕೊಂಡು ಹೋಗುತ್ತಿದ್ದ ಗೂಡ್ಸ್ ವಾಹನಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅವರ ಸೂಚನೆಯ ಮೇರೆಗೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಕಾರ್ಮಿಕರನ್ನು ತುಂಬಿಸಿ ಕೊಂಡು ಹೋಗುತ್ತಿದ್ದ ಗೂಡ್ಸ್ ಟೆಂಪೊಗಳನ್ನು ತಡೆದು ಪ್ರಕರಣ ದಾಖಲಿಸಿದ್ದಾರೆ.
ಇನ್ನು ಮುಂದೆ ಯಾವುದೇ ಕಾರಣಕ್ಕೂ ರೀತಿಯಲ್ಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುವಂತಿಲ್ಲ. ಗೂಡ್ಸ್ ವಾಹನದಲ್ಲಿ ಕಾರ್ಮಿಕರನ್ನು ತುಂಬಿಸಿಕೊಂಡು ಹೋಗುವುದು ಶಿಕ್ಷಾರ್ಹ ಅಪರಾಧ ಎಂದರು.
ಕಾರ್ಮಿಕರಿಗೂ ಈ ಬಗ್ಗೆ ಅರಿವು ಮೂಡಿಸಲಾಗಿದೆ. ಈ ರೀತಿಯ ಕಾರ್ಯಾಚರಣೆಯನ್ನು ನಿರಂತರವಾಗಿ ಮಾಡಲಿದ್ದೇವೆ ಮತ್ತು ಕಠಿನ ಕಾನೂನು ಕ್ರಮ ತೆಗೆದು ಕೊಳ್ಳಲಿದ್ದೇವೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಎಚ್ಚರಿಸಿದರು.
ಕಾರ್ಮಿಕ ನಿರೀಕ್ಷಕರಾದ ವಿಜಯೇಂದ್ರ, ಸಂಜಯ್, ಆರ್‌ಟಿಒ ಅಧಿಕಾರಿ ಮಾರುತಿ ನಾಯ್ಕ, ಟ್ರಾಫಿಕ್ ಇನ್‌ಸ್ಪೆಕ್ಟರ್ ಶೇಖರ್, ಕಾರ್ಮಿಕ ಇಲಾಖೆಯ ಸಿಬಂದಿಗಳಾದ ಶಿವಪ್ರಸಾದ್, ಸಂಗಯ್ಯ ಹಿರೇಮಠ ಕಾರ್ಯಚರಣೆಯಲ್ಲಿದ್ದರು.