Advertisement

ದಾಳಿಂಬೆ ಬೆಳೆದು ಯಶಸ್ಸು ಸಾಧಿಸಿದ ರೈತ

05:34 PM Mar 13, 2020 | Suhan S |

ತಾವರಗೇರಾ: ಸಾಂಪ್ರದಾಯಿಕ ಜೋಳ, ಸಜ್ಜೆ, ಹೆಸರು, ತೊಗರಿ ಬೆಳೆದು ಕೈ ಸುಟ್ಟುಕೊಂಡಿದ್ದ ತಾವರಗೇರಾ ಗ್ರಾಮದ ರೈತನಿಗೆ ಕೆಂಪು ಬಣ್ಣದ (ಕೇಸರ್‌) ತಳಿಯ ದಾಳಿಂಬೆ ಕೈ ಹಿಡಿದಿದೆ.

Advertisement

ತಾವರಗೇರಾ ಗ್ರಾಮದ ನಾದಿರ್‌ ಪಾಷಾ ಎಂಬ ರೈತರು ತಮ್ಮ 11 ಎಕರೆ ಜಮೀನಿನಲ್ಲಿ ಜೋಳ, ಸಜ್ಜೆ, ಹೆಸರು, ತೊಗರೆ ಬೆಳೆಯುತ್ತಿದ್ದರು. ಮಳೆಯಾದರೆ ಇಳುವರಿ ಉತ್ತಮವಾಗಿ ಬರುತ್ತಿತ್ತು, ವರುಣ ದೇವ ಕೈಕೊಟ್ಟರೆ ಹಾಕಿದ ಬೀಜದ ಖರ್ಚು ಸಹ ಬರುತ್ತಿರಲಿಲ್ಲ. ಬೀಜ, ಔಷಧಕ್ಕೆ ಮಾಡಿದ ಖರ್ಚು ಸಹ ಮೈಮೇಲೆ ಬೀಳುತ್ತಿತ್ತು. ಇದರಿಂದ ಬೇಸತ್ತಿದ್ದ ನಾದಿರ್‌ ಪಾಷಾ 9 ವರ್ಷಗಳ ಹಿಂದೆ ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದರು. ಮುಂದೆ ಒಂದೂವರೆ ವರ್ಷಗಳ ಕಾಲ ಮೆಕ್ಕೆಜೋಳ, ಶೇಂಗಾ ಬೆಳೆದರು. ನಂತರ ತಮ್ಮ ಸ್ನೇಹಿತರಾದ ಆಂಧ್ರಪ್ರದೇಶ ಮೂಲದ ಪ್ರಗತಿಪರ ರೈತ ರಾಮಬಾಬು, ಕುಷ್ಟಗಿಯ ಜಗನ್ನಾಥ, ಬಯ್ನಾಪೂರದ ಶರಣೇಗೌಡ ಅವರ ಸಲಹೆ ಪಡೆದು 8 ಎಕರೆಯಲ್ಲಿ ದಾಳಿಂಬೆ ಬೆಳೆಯಲು ಮುಂದಾದರು.

ಮಹಾರಾಷ್ಟ್ರದಿಂದ ಕೇಸರ್‌ ತಳಿಯ ದಾಳಿಂಬೆ ಸಸಿಗಳನ್ನು ಹಾಕಿ ಒಂದೂವರೆ ವರ್ಷದವರೆಗೆ ಲಕ್ಷಾಂತರ ರೂ. ಖರ್ಚು ಮಾಡಿ ದಾಳಿಂಬೆಯ ಗಿಡಗಳನ್ನು ಆರೋಗ್ಯಕರವಾಗಿ ಬೆಳೆಸಿದರು. ಮೊದಲನೇ ಬೆಳೆಯಲ್ಲೇ 12 ಲಕ್ಷ ರೂ. ಹಣ್ಣುಗಳನ್ನು ಮಾರಾಟ ಮಾಡಿ, ಸಾಲ ತೀರಿಸಿದರು. ಎರಡನೇ ವರ್ಷ ಬೆಂಗಳೂರು, ಚೆನ್ನೈನಲ್ಲಿ ಸುಮಾರು 19 ಲಕ್ಷ  ರೂ. ಗಳವರೆಗೆ ದಾಳಿಂಬೆ ಮಾರಾಟ ಮಾಡಿದ್ದಾರೆ.

ಪ್ರೋನಿಂಗ್‌: ತೋಟದಲ್ಲಿ ದಾಳಿಂಬೆ ಗಿಡಗಳು 1 ವರ್ಷ 4 ತಿಂಗಳು ಬೆಳೆದು ಇನ್ನೇನು ಹೂವು ಬಿಡುವ ವೇಳೆ ಗಿಡದ ತುದಿಯನ್ನು ಕತ್ತರಿಸುವುದಕ್ಕೆ ಪ್ರೋನಿಂಗ್‌ ಎನ್ನುವರು. ಪ್ರೋನಿಂಗ್‌ ಕಾರ್ಯವನ್ನು ಜೂನ್‌ ತಿಂಗಳಲ್ಲಿ ಮಾಡಬೇಕು. ಈ ಪದ್ಧತಿ ಅಳವಡಿಸಿಕೊಳ್ಳುವುದರಿಂದ ದಾಳಿಂಬೆ ಹಣ್ಣಿನ ಕಟಾವು ಸಮಯವನ್ನು ಮಳೆಗಾಲದಿಂದ ತಪ್ಪಿಸಬಹುದಲ್ಲದೇ, ಹಲವಾರು ಕೀಟಬಾಧೆ, ದುಂಡಾಣು ರೋಗ ತಪ್ಪಿಸಬಹುದು ಎನ್ನುತ್ತಾರೆ ನಾದಿರ್‌ ಪಾಷಾ. ಇವರು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಕೆಲವು ರೈತರು ದಾಳಿಂಬೆ ಹಾಕಿ ಅವುಗಳಿಗೆ ಸರಿಯಾದ ಪ್ರಮಾಣದಲ್ಲಿ ಔಷಧವನ್ನು ಮತ್ತು ನೀರನ್ನು ಕೊಡದೆ ಬೆಳೆದ ಹಣ್ಣುಗಳು ಅಂಗಮಾರಿ ದುಂಡಾಣು ರೋಗಕ್ಕೆ ಬಲಿಯಾಗಿವೆ.

ಈ ವರ್ಷ ಕುಷ್ಟಗಿ ತಾಲೂಕಿನಲ್ಲಿ ಕೇವಲ 500 ಎಕರೆ ಮಾತ್ರ ದಾಳಿಂಬೆ ಬೆಳೆಯಲಾಗುತ್ತಿದೆ. 10 ವರ್ಷಗಳ ಹಿಂದೆ 6-8 ಸಾವಿರ ಎಕರೆ ಜಮೀನು ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಆಗ ಹಣ್ಣುಗಳ ಬೆಲೆ ಕಡಿಮೆ ಇತ್ತು. ನಂತರ ಹಣ್ಣುಗಳಿಗೆ ಅಂಗಮಾರಿ ಅಂಟುರೋಗ ಬಂದಿರುವುದರಿಂದ ಬಹಳಷ್ಟು ರೈತರು ದಾಳಿಂಬೆ ಬೆಳೆಯಲು ಮುಂದೆ ಬಂದಿಲ್ಲ. ಈ ವರ್ಷ ದಾಳಿಂಬೆಗೆ ಹೆಚ್ಚಿನ ಬೆಲೆ ಇದೆ.

Advertisement

ದಾಳಿಂಬೆ ಗಿಡಗಳ ನಿರ್ವಹಣೆಗೆ ಕೂಲಿಕಾರ್ಮಿಕರ ಕೊರತೆ ಇದ್ದು, ಹಣ್ಣುಗಳ ಕಟಾವು ಬಂದಾಗ ಮಾತ್ರ ದಿನಗೂಲಿ ಕಾರ್ಮಿಕರನ್ನು ಅವರು ಕೇಳಿದಷ್ಟು ಹಣ ನೀಡಿ ಕೆಲಸ ಮಾಡಿಸಿಕೊಳ್ಳುತ್ತೇವೆ. ಉಳಿದಂತೆ ಪ್ರತಿದಿನ ಗಿಡಗಳ ನಿರ್ವಹಣೆಗೆ ನಾನು ಮತ್ತು ಸಹೋದರರ ಮಕ್ಕಳು ದುಡಿಯುತ್ತೇವೆ. ವ್ಯಾಪಾರಿಗಳು ಈಗೀಗ ಸ್ಥಳದಲ್ಲೇ ಬಂದು ಹಣ್ಣಿಗೆ ಬೆಲೆ ನಿಗದಿಗೊಳಿಸಿ ಖರೀದಿಸುತ್ತಾರೆ ಎಂದು ನಾದಿರ್‌ ಪಾಷಾ ತಿಳಿಸುತ್ತಾರೆ.

 

-ಎನ್‌. ಶ್ಯಾಮೀದ್‌

Advertisement

Udayavani is now on Telegram. Click here to join our channel and stay updated with the latest news.

Next