Advertisement

ವೇದಿಕೆಯಲ್ಲೇ ಕುಸಿದ ವಿದ್ಯಾರ್ಥಿನಿ

12:36 AM Oct 20, 2019 | Team Udayavani |

ಟಿ.ದಾಸರಹಳ್ಳಿ: ಕಾಲೇಜಿಗೆ ಬಂದ ಹೊಸ ವಿದ್ಯಾರ್ಥಿಗಳ ಸ್ವಾಗತ ದಿನ ಕಾರ್ಯಕ್ರಮಕ್ಕೆ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳುವ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

Advertisement

ಶ್ರೀರಾಂಪುರ ನಿವಾಸಿ ಶಾಲಿನಿ (21) ಮೃತ ವಿದ್ಯಾರ್ಥಿನಿ. ಶುಕ್ರವಾರ ಸಂಜೆ ಐದು ಗಂಟೆ ಸುಮಾರಿಗೆ ಆಚಾರ್ಯ ಎಂಬಿಎ ಕಾಲೇಜಿನ ಆವರಣದಲ್ಲೇ ದುರ್ಘ‌ಟನೆ ನಡೆದಿದ್ದು, ಕೂಡಲೇ ಇತರೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ನೀಡಿದ ವೈದ್ಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ.

ಮರಣೋತ್ತರ ಪರೀಕ್ಷೆ ಬಳಿಕ ವಿದ್ಯಾರ್ಥಿನಿಯ ದೇಹದ ಭಾಗಗಳನ್ನು ವಿಧಿ ವಿಜ್ಞಾನ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ಸ್ಪಷ್ಟ ಕಾರಣ ಸಿಗಲಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಹೃದಯಘಾತದಿಂದ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಶ್ರೀರಾಂಪುರ ನಿವಾಸಿ, ಬಟ್ಟೆ ವ್ಯಾಪಾರಿ ರಾಜನ್‌ ಮತ್ತು ಅಂಬಿಕಾ ದಂಪತಿಯ ಪುತ್ರಿ ಶಾಲಿನಿ, ಪೀಣ್ಯದಲ್ಲಿರುವ ಆಚಾರ್ಯ ಎಂಬಿಎ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅ.21ರಂದು ಕಾಲೇಜಿನಲ್ಲಿ ಹೊಸ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿದೆ.

ಅದಕ್ಕೆ ಪೂರ್ವಭಾವಿಯಾಗಿ ಕಳೆದ ಕೆಲ ದಿನಗಳಿಂದ ಕಾಲೇಜು ಆವರಣದಲ್ಲಿರುವ ವೇದಿಕೆಯಲ್ಲಿಯೇ ಫ್ಯಾಷನ್‌ ಶೋ ಅಭ್ಯಾಸ ಮಾಡಲಾಗುತ್ತಿದೆ. ಶುಕ್ರವಾರ ಸಂಜೆ ಅಭ್ಯಾಸ ಮಾಡುವಾಗ ರ್‍ಯಾಂಪ್‌ ವಾಕ್‌ ಮಾಡಿದ ಬಳಿಕ ವೇದಿಕೆ ಪಕ್ಕಕ್ಕೆ ಹೋದ ಶಾಲಿನಿ ಇದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ.

Advertisement

ಆತಂಕಗೊಂಡ ಇತರೆ ವಿದ್ಯಾರ್ಥಿಗಳು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ಪೀಣ್ಯ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು. ಅನಿರೀಕ್ಷಿತ ಅವಘಡದಲ್ಲಿ ಮೃತಪಟ್ಟ ಪುತ್ರಿ ಶಾಲಿನಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

Advertisement

Udayavani is now on Telegram. Click here to join our channel and stay updated with the latest news.