Advertisement

ಇತಿಹಾಸ ನಿರ್ಮಿಸಿದ ವಿದ್ಯಾರ್ಥಿ

03:00 PM May 08, 2018 | |

ಮೈಸೂರು: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೈಸೂರಿನ ಹಲವು ಶಾಲೆಗಳು ಒಳ್ಳೆಯ ಫ‌ಲಿತಾಂಶ ಪಡೆದಿದ್ದು, ಇದೇ ಮೊದಲ ಬಾರಿಗೆ ಜಿಲ್ಲೆಯ ವಿದ್ಯಾರ್ಥಿಯೊಬ್ಬ 625ಕ್ಕೆ 625 ಅಂಕಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಮೈಸೂರಿನ ಕೀರ್ತಿಯನ್ನು ಹೆಚ್ಚಿಸುವ ಜತೆಗೆ ಇತಿಹಾಸ ನಿರ್ಮಿಸಿದ್ದಾನೆ.

Advertisement

ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಸದ್ವಿದ್ಯ ಪ್ರೌಢಶಾಲೆಯ ಎಂ.ಎಸ್‌.ಯಶಸ್‌ ಎಂಬ ವಿದ್ಯಾರ್ಥಿ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ. ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನ ಪ್ರಥಮ ದರ್ಜೆ ಗುಮಾಸ್ತರಾದ ಎಂ.ಎಸ್‌.ಶಿವಮಲ್ಲಪ್ಪ ಹಾಗೂ ಕೆ.ಆರ್‌.ಚಂದ್ರಕಲಾ ಅವರ ಪುತ್ರ ಯಶಸ್‌ ಸಾಧನೆಯಿಂದ ಸದ್ವಿದ್ಯಾ ಶಾಲೆಯಲ್ಲಿ ಸಂಭ್ರಮ ಮನೆ ಮಾಡಿತ್ತು.

ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರಸ್ಪರ ಶುಭಾಶಯ ಕೋರುವುದು ಹಾಗೂ ಸಿಹಿ ಹಂಚಿ ಸಂಭ್ರಮಿಸಿದರು. ಇವರೊಂದಿಗೆ ಇದೇ ಶಾಲೆಯ ಅದಿತಿ ಎ.ರಾವ್‌ ಹಾಗೂ ಆರ್‌. ಕೀರ್ತನ 624 ಅಂಕಗಳನ್ನು ಪಡೆದು ರಾಜ್ಯದಲ್ಲಿ ಎರಡನೇ ಸ್ಥಾನಪಡೆಯುವ ಮೂಲಕ ಜಿಲ್ಲೆಯ ಹಾಗೂ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಮರಿಮಲ್ಲಪ್ಪ ಶಾಲೆ: ಇನ್ನು ನಗರದ ಮರಿಮಲ್ಲಪ್ಪ ಶಾಲೆಯ ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶವನ್ನು ಪಡೆಯುವ ಮೂಲಕ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದುಕೊಟ್ಟಿದ್ದಾರೆ. ಶಾಲೆಯ ವಿದ್ಯಾರ್ಥಿನಿ ಶಿವಾನಿ ಎಂ.ಭಟ್‌ 625 ಅಂಕಗಳಿಗೆ 624 ಅಂಕಗಳನ್ನು ಪಡೆದು ರಾಜ್ಯ ಹಾಗೂ ಜಿಲ್ಲೆಗೆ 2ನೇ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಇದೇ ಶಾಲೆಯ ವಿದ್ಯಾರ್ಥಿನಿ ಕವನಾ ಸಿ.ರಾಜ್‌ 621 ಅಂಕಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಉಳಿದಂತೆ ಶಾಲೆಯ 468 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಶೇ.95 ಫ‌ಲಿತಾಂಶವನ್ನು ಪಡೆದುಕೊಂಡಿದೆ. 40 ಮಂದಿ 600ಕ್ಕೂ ಹೆಚ್ಚು ಅಂಕಗಳಿಸಿದ್ದು, 190 ಮಂದಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. 60-74 ಮಂದಿ ಪ್ರಥಮ ಹಾಗೂ 64 ಮಂದಿ ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

Advertisement

ಇತರೆ ಶಾಲೆಗಳ ಸಾಧನೆ: ನಗರದ ನಾಚನಹಳ್ಳಿಪಾಳ್ಯದಲ್ಲಿರುವ ಜೆಎಸ್‌ಎಸ್‌ ಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಈ ಬಾರಿ ಪರೀಕ್ಷೆಗೆ ಹಾಜರಾಗಿದ್ದ 55 ವಿದ್ಯಾರ್ಥಿಗಳಲ್ಲಿ, 53 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಆ ಮೂಲಕ ಶಾಲೆಗೆ ಶೇ.96.36 ಫ‌ಲಿತಾಂಶ ತಂದುಕೊಟ್ಟಿದ್ದಾರೆ. ಶಾಲೆಯ ವಿ.ರಕ್ಷಿತ 625ಕ್ಕೆ 529 ಅಂಕಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಇನ್ನು ರಾಜೇಂದ್ರನಗರದಲ್ಲಿರುವ ಶ್ರೀಛಾಯಾದೇವಿ ವಿದ್ಯಾನಿಕೇತನ ಪ್ರೌಢಶಾಲೆಯ ಮೂರುವ ವಿದ್ಯಾರ್ಥಿಗಳು ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದು ತೇರ್ಗಡೆಯಾಗಿದ್ದಾರೆ. ಶಾಲೆಯ ವಿದ್ಯಾರ್ಥಿಗಳಾದ ಎಂ.ಆರ್‌.ರಶ್ಮಿ-535, ಎಂ. ಇಂಧುಶ್ರೀ-517 ಹಾಗೂ ವಿ.ಅಮೂಲ್ಯ-509 ಅಂಕಗಳನ್ನು ಪಡೆದು ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಬಿ.ಸುಜಾತ ತಿಳಿಸಿದ್ದಾರೆ.

ಕಿವುಡ ಮಕ್ಕಳ ಸಾಧನೆ: ನಗರದ ಬನ್ನಿಮಂಟಪದಲ್ಲಿರುವ ಸಾಯಿರಂಗ ವಿದ್ಯಾಸಂಸ್ಥೆ(ರಿ) ಕಿವುಡು ಗಂಡು ಮಕ್ಕಳ ವಸತಿಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮತ್ತೂಮ್ಮೆ ಸಾಧನೆ ಮಾಡಿದ್ದಾರೆ.

ಶಾಲೆಯ ಕಿವುಡ ಮಕ್ಕಳು ಸಾಮಾನ್ಯ ಮಕ್ಕಳೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿ, ಕಳದೆ 15 ವರ್ಷಗಳಿಂದ ಸತತವಾಗಿ ಶೇ.100 ಫ‌ಲಿತಾಂಶ ತಂದುಕೊಟ್ಟಿದ್ದಾರೆ. ಅದೇ ರೀತಿಯಾಗಿ ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ಬರೆದಿದ್ದ 21 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಶೇ.100 ಫ‌ಲಿತಾಂಶ ಬರುವಂತೆ ಮಾಡಿದ್ದಾರೆ ಎಂದು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಎಂ.ಜಿ.ಶಂಕರ್‌ ತಿಳಿಸಿದ್ದಾರೆ.

ಅಂಧ ಬಾಲಕಿಯರ ಸಾಧನೆ: ಮೈಸೂರಿನ ರಂಗರಾವ್‌ ಸ್ಮಾರಕ ಅಂಗವಿಕಲರ (ಅಂಧ ಬಾಲಕಿಯರ ಉಚಿತ ವಸತಿ ಶಾಲೆ) ಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.93.33ರಷ್ಟು ಫ‌ಲಿತಾಂಶ ದೊರೆತಿದೆ. ಲಕ್ಷ್ಮೀ ಎನ್‌.ಎಸ್‌ ಶೇ.88 ಅಂಕಗಳೊಂದಿಗೆ ಪ್ರಥಮ ಸ್ಥಾನಗಳಿಸಿದ್ದಾರೆ.

ಪರೀಕ್ಷೆಗೆ ಹಾಜರಾಗಿದ್ದ 15 ವಿದ್ಯಾರ್ಥಿಗಳಲ್ಲಿ ಮೂವರು ವಿದ್ಯಾರ್ಥಿಗಳು ಶೇ.80ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 9 ಜನ ಪ್ರಥಮ ದರ್ಜೆ, ಇಬ್ಬರು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next