ಶಿರ್ವ: ಕನ್ನಡ ನಶಿಸುವ ಭಾಷೆಯಲ್ಲ. ಅದಕ್ಕೆ ವಿಶ್ವಮಟ್ಟದಲ್ಲಿ ಎದ್ದು ನಿಲ್ಲುವ ತಾಕತ್ತು ಇದೆ ಕನ್ನಡದ ಸೊಗಸುಗಳನ್ನು ಪರಿಚಯಿಸಿ, ಪ್ರೇರೇಪಿಸುವ ವಿದ್ಯಾರ್ಥಿ ಕೇಂದ್ರಿತ ಸಾಹಿತ್ಯ ಸಮ್ಮೇಳನ ಭವಿಷ್ಯದಲ್ಲಿ ಕನ್ನಡ ಕಟ್ಟುವ ಬಗೆಗಿನ ಸೂಕ್ಷ್ಮಸಂವೇದಿ ದೂರದೃಷ್ಟಿಯಿರುವ ಶ್ಲಾಘನಾರ್ಹ ಕಾರ್ಯಕ್ರಮ. ಕಾಪು ತಾ| ಕನ್ನಡ ಸಾಹಿತ್ಯ ಪರಿಷತ್ತಿನ ನಡೆ ಇತರರಿಗೆ ಮಾದರಿಯಾಗಲಿ ಎಂದು ಕಾಪು ತಾ| 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಕೆ.ಎಸ್. ಶ್ರೀಧರಮೂರ್ತಿ ಹೇಳಿದರು.
ಅವರು ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನ. 4ರಂದು ಜರಗಿದ ಕಾಪು ತಾ| 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಸಾಧಕರನ್ನು ಸಮ್ಮಾನಿಸಿ ಮಾತನಾಡಿ ಕನ್ನಡ ಶಾಲೆಗಳ ಉಳಿವಿಗಾಗಿ ವ್ಯವಸ್ಥಿತ ಕಾರ್ಯಯೋಜನೆಯನ್ನು ಮಾಡಬೇಕಾದ ಅಗತ್ಯವಿದೆ ಎಂದರು.
ಸಾಧಕರಿಗೆ ಸಮ್ಮಾನ: ವಿವಿಧ ಕ್ಷೇತ್ರಗಳ ಸಾಧಕರಾದ ಶೀನ ಪಾತ್ರಿ ನಂದಿಕೂರು (ದೈವಾರಾಧನೆ), ಹೇಮನಾಥ ಪಡುಬಿದ್ರಿ (ಪತ್ರಿಕೋದ್ಯಮ), ರಾಮಚಂದ್ರ ಭಟ್ ಎಲ್ಲೂರು (ಯಕ್ಷಗಾನ ), ರಘುರಾಮ ನಾಯಕ್ ಸಡಂಬೈಲು (ಕೃಷಿ), ಬಂಟಕಲ್ಲು ನಾಗರಿಕ ಸೇವಾ ಸಮಿತಿ (ಸೇವಾ ಸಂಘ ಸಂಸ್ಥೆ) ಅವರನ್ನು ಸಮ್ಮಾನಿಸಲಾಯಿತು.
ಸಮ್ಮೇಳನ ಗೌರವಾಧ್ಯಕ್ಷ ಡಾ| ತಿರುಮಲೇಶ್ವರ ಭಟ್, ಕಾರ್ಯಾಧ್ಯಕ್ಷ ಕೆ.ಆರ್. ಪಾಟ್ಕರ್, ಪ್ರ.ಕಾರ್ಯದರ್ಶಿ ಸತ್ಯಸಾಯಿ ಪ್ರಸಾದ್ ಅವರನ್ನು ಅಭಿನಂದಿಸಲಾಯಿತು.
ಕಸಾಪ ಕಾಪು ತಾ| ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಅದಾನಿ ಯುಪಿಸಿಎಲ್ ಸಂಸ್ಥೆಯ ಅಧ್ಯಕ್ಷ ಡಾ| ಕಿಶೋರ್ ಆಳ್ವ,ಕರ್ನಾಟಕ ಹಾಲು ಮಹಾಮಂಡಲದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ,ಕಾಪು ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ, ಶಿರ್ವ ವ್ಯವಸಾಯಿಕ ಸಹಕಾರಿ ಸಂಘದ ಅದ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ, ಶಿರ್ವ ಗ್ರಾಮ ಆಡಳಿತಾಧಿಕಾರಿ ಅರುಣ್ ಕುಮಾರ್, ಕಸಾಪ ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನವೀನ್ ಅಮೀನ್ ಶಂಕರಪುರ, ಬೆಳ್ಳೆ ಗ್ರಾ.ಪಂ. ಮಾಜಿ ಅಧ್ಯಕ್ಷ ಸುಧಾಕರ ಪೂಜಾರಿ, ತಾ| ಕಸಾಪ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಕಾಪು ತಾ|ಗೌ|ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಸ್ವಾಗತಿಸಿದರು. ಅನಂತ ಮೂಡಿತ್ತಾಯ ನಿರೂಪಿಸಿ, ದೇವದಾಸ್ ಪಾಟ್ಕರ್ ವಂದಿಸಿದರು.
ಕನ್ನಡ ಮಾಧ್ಯಮದಲ್ಲಿ ಕಡ್ಡಾಯ ಶಿಕ್ಷಣ ಇಂದು ಕನ್ನಡ ಶಾಲೆಗಳಲ್ಲಿ ಆರ್ಥಿಕ ಅನನುಕೂಲತೆ ಇರುವ ಹಾಗೂ ವಲಸೆ ಕಾರ್ಮಿಕರ ಮಕ್ಕಳು ಮಾತ್ರವೇ ಅನಿವಾರ್ಯಕಾರಣಕ್ಕೆ ಕಲಿಯುವಂತಾಗುತ್ತಿದ್ದಾರೆ. ಈ ವ್ಯವಸ್ಥೆ ಬದಲಾಗಿ ಎಲ್ಲರಿಗೂ ಪ್ರಾಥಮಿಕವಾಗಿ ಕನ್ನಡ ಮಾಧ್ಯಮದಲ್ಲಿ ಕಡ್ಡಾಯವಾಗಿ ಸಮಾನ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು. –
ಮಟ್ಟಾರು ರತ್ನಾಕರ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ.
ಸೈನ್ಯದಲ್ಲಿನ ಭಾಷಾ ರೋಮಾಂಚಕತೆ —! ಭಾರತೀಯ ಸೇನೆಯಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಇಥಿಯೋಪಿಯಾದಲ್ಲಿ ಕಾರ್ಯನಿರ್ವಹಿಸುವಾಗ, ದೇಶದಿಂದ ದೂರವಾಗಿರುವ ಸಂದರ್ಭದಲ್ಲಿ ಭಾರತೀಯ ಭಾಷೆಗಳನ್ನು ಮಾತನಾಡುವಾಗ ಅನುಭವಿಸುವ ಆಪ್ತತೆ ಹಾಗೂ ರೋಮಾಂಚಕತೆಯನ್ನು ವಿವರಿಸುವುದು ಅಸಾಧ್ಯ –
ಮಾಜಿ ಸೈನಿಕ ಅನಂತಪದ್ಮನಾಭ ನಾಯಕ್ ,ಶಿರ್ವ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ.