Advertisement

ಎಚ್ಚರ! ದುರುಗುಟ್ಟಿ-ಬೆನ್ನಟ್ಟುತ್ತಿವೆ ಶ್ವಾನಗಳು

10:10 AM Apr 19, 2022 | Team Udayavani |

ವಾಡಿ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು ಮನೆಯ ಹೊಸ್ತಿಲು ದಾಟಿ ಹೊರ ಬಂದರೆ ಶ್ವಾನಗಳ ಹಿಂಡು ಅವರನ್ನೇ ದುರುಗುಟ್ಟುತ್ತಿವೆ. ಯಾವುದೇ ಬಡಾವಣೆಗೆ ಹೋದರೂ ಬೊಗಳಿ ಬೆನ್ನಟ್ಟುವ ನಾಯಿಗಳು ಕಂಡುಬರುತ್ತಿವೆ. ಇದು ಪಾದಚಾರಿಗಳಿಗೆ ಭಯವನ್ನುಂಟು ಮಾಡುತ್ತಿದೆ.

Advertisement

ಪುರಸಭೆ ಆಡಳಿತ ಕೇಂದ್ರ ಸ್ಥಾನವಾಗಿರುವ ಪಟ್ಟಣದಲ್ಲಿ ಮತ್ತೂಮ್ಮೆ ಬೀದಿನಾಯಿಗಳ ಉಪಟಳ ಹೆಚ್ಚಾಗಿದೆ. ಬಡಾಬಣೆಗಳ ಗಲ್ಲಿ, ರಸ್ತೆಗಳ ಮೂಲಕ ಮಾರುಕಟ್ಟೆಗೆ, ಆಸ್ಪತ್ರೆಗೆ, ರೈಲು ನಿಲ್ದಾಣಗಳಿಗೆ ಹೋಗುವ ಜನರು ಬೀದಿನಾಯಿಗಳ ಕಾಟದಿಂದ ಬೇಸತ್ತಿದ್ದಾರೆ. ಮಾಂಸದ ಅಂಗಡಿಗಳ ಮುಂದೆ ಜಮಾಯಿಸಿ ಬಾಡೂಟದ ಆಹಾರಕ್ಕಾಗಿ ಕಾಯ್ದು ನಿಲ್ಲುತ್ತಿವೆ. ಅಂಗಡಿಯವರು ಎಸೆಯುವ ಮಾಂಸ ತ್ಯಾಜ್ಯದ ರುಚಿ ಕಂಡಿರುವ ಈ ಬೀದಿ ನಾಯಿಗಳು ಮನುಷ್ಯರನ್ನು ದುರುಗುಟ್ಟಿ ನೋಡಿ ಬೊಗಳುತ್ತಿವೆ.

ಕೆಲವೆಡೆ ಸಣ್ಣ ಮಕ್ಕಳ ಮೇಲೆ ದಾಳಿ ನಡೆಸುತ್ತಿವೆ. ಮನೆಯಿಂದ ಹೊರಗೆ ಬರುವ ಜನರು ನಾಯಿಗಳ ಕಣ್ತಪ್ಪಿಸಿಕೊಂಡೇ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಬಿಸಿಲ ತಾಪದಿಂದ ತತ್ತರಿಸಿರುವ ಜನತೆಯ ನೆಮ್ಮದಿಯನ್ನು ದಾಳಿಕೋರ ನಾಯಿಗಳು ಕಸಿದಿವೆ. ಇಲ್ಲಿನ ಪಿಲಕಮ್ಮಾ ಬಡಾವಣೆ, ಎಸಿಸಿ ಕಾಲೋನಿ, ಶಿವಾಜಿ ಚೌಕ್‌, ಮಲ್ಲಿಕಾರ್ಜುನ ದೇವಸ್ಥಾನ ಬಡಾವಣೆ, ಹನುಮಾನ ನಗರ, ಸೋನಾಬಾಯಿ ನಗರ, ವಿಜಯ ನಗರ, ಅಂಬೇಡ್ಕರ್‌ ಕಾಲೋನಿ, ರೆಸ್ಟ್‌ ಕ್ಯಾಂಪ್‌ ತಾಂಡಾ, ಜಾಂಬವೀರ ಕಾಲೋನಿ, ಜಾಮಿಯಾ ಮಸೀದಿ ಏರಿಯಾ, ಮಾರುಕಟ್ಟೆ ಪ್ರದೇಶ, ಬಸ್‌ ನಿಲ್ದಾಣ ಪರಿಸರದಲ್ಲಿ ಬೀದಿ ನಾಯಿಗಳ ಹಿಂಡು ಕಾಣಸಿಗುತ್ತವೆ.

ಮುಖ್ಯ ರಸ್ತೆ ಬದಿಯಲ್ಲಿ ಹಂದಿಗಳ ಸಂಖ್ಯೆಯೂ ಹೆಚ್ಚಿದ್ದರಿಂದ ಬೈಕ್‌ ಸವಾರರು ಅಪಘಾತಕ್ಕೆ ಈಡಾಗುತ್ತಿರುವ ಉದಾಹರಣೆಗಳು ಇವೆ. ಆದ್ದರಿಂದ ಪುರಸಭೆ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಾಯಿ, ಹಂದಿಗಳನ್ನು ಹಿಡಿದು ಕೂಡಲೇ ಸ್ಥಳಾಂತರಿಸಬೇಕು ಎಂದು ನಗರದ ಜನತೆ ಮನವಿ ಮಾಡಿದ್ದಾರೆ.

Advertisement

ಬೀದಿನಾಯಿಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸಲು ನೂತನ ಕಾನೂನಿನಲ್ಲಿ ಅವಕಾಶವಿಲ್ಲ. ಅವುಗಳನ್ನು ಹಿಡಿದು ಕೊಲ್ಲುವುದು ಅಪರಾಧ. ನಾಯಿಗಳನ್ನು ಹಿಡಿದು ಸಂತಾನ ಹರಣ ಚಿಕಿತ್ಸೆ ನೀಡುವ ಮೂಲಕ ಅದೇ ಜಾಗದಲ್ಲಿ ಬಿಡುವ ನಿಯಮವಿದೆ. ನಗರದಲ್ಲಿ ಮಾಂಸ ತ್ಯಾಜ್ಯವನ್ನು ಎಲ್ಲೆಂದೆರಲ್ಲಿ ಎಸೆಯದಂತೆ ಮಾಂಸ ವ್ಯಾಪಾರಿಗಳಿಗೆ ಖಡಕ್‌ ಸೂಚನೆ ಕೊಟ್ಟಿದ್ದೇವೆ. ಪೌರಕಾರ್ಮಿಕರಿಗೆ ತ್ಯಾಜ್ಯ ಕೊಟ್ಟು ಅವರು ಆದೇಶ ಪಾಲಿಸುತ್ತಿದ್ದಾರೆ. ಪಶು ವೈದ್ಯರನ್ನು ಸಂಪರ್ಕಿಸಿ ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಕೊಡಲು ಕ್ರಮಕೈಗೊಳ್ಳುತ್ತೇನೆ. ಆಸ್ಪತ್ರೆಯಲ್ಲೂ ನಾಯಿ, ಹಾವು, ಚೇಳು ವಿಷಜಂತುಗಳ ಕಡಿತದ ಔಷಧ ಲಭ್ಯವಿರುವಂತೆ ಎಚ್ಚರಿಕೆ ವಹಿಸುತ್ತೇವೆ. -ಡಾ| ಚಿದಾನಂದ ಸ್ವಾಮಿ, ಪುರಸಭೆ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next