– ನೂರಾರು ಕುಟುಂಬಗಳ ಸ್ಥಳಾಂತರ
– ಕಲ್ಯಾಣ ಮಂಟಪಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ
Advertisement
ಬೆಂಗಳೂರು: ಹೆಚ್ಚು-ಕಡಿಮೆ ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ನಗರದ ಮೂರನೇ ಕೆರೆಯ ಏರಿ ಒಡೆದು ಅವಾಂತರ ಸೃಷ್ಟಿಸಿದ ಘಟನೆ ಭಾನುವಾರ ಅರಕೆರೆ ವಾರ್ಡ್‌ನಲ್ಲಿ ನಡೆದಿದೆ. ಭರ್ತಿಯಾಗಿದ್ದ ಕೆರೆಯ ಏರಿ ಒಡೆಯುತ್ತಿದ್ದಂತೆ ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಕೆಲವೇ ಹೊತ್ತಿನಲ್ಲಿ ಕೆರೆಯ ನೀರು ಒಂದು ಕಿ.ಮೀ.ವರೆಗೂ ವ್ಯಾಪಿಸಿತು. ಪರಿಣಾಮ ಹುಳಿಮಾವು ಅಕ್ಷರಶಃ ದ್ವೀಪವಾಗಿ ಪರಿಣಮಿಸಿತು.
Related Articles
Advertisement
ಹತ್ತಿರದ ನ್ಯಾನೋ ಆಸ್ಪತ್ರೆಯಂತೂ ಸಂಪೂರ್ಣ ಜಲಾವೃತವಾಗಿತು. ಆಸ್ಪತ್ರೆಯ ನೆಲಮಹಡಿಯಲ್ಲಿ ತೀವ್ರ ನಿಗಾ ಘಟಕ ಇದ್ದುದರಿಂದ ಅಲ್ಲೆಲ್ಲಾ ನೀರು ನುಗಿತು. ವೈದ್ಯಕೀಯ ಉಪಕರಣಗಳು, ಔಷಧಿಗಳು, ರೋಗಿಗಳ “ಕೇಸ್ ಹಿಸ್ಟರಿ’ ಎಲ್ಲವೂ ನೀರುಪಾಲಾಯಿತು. ಹುಳಿಮಾವು ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಕೇವಲ 100 ಮೀಟರ್ ದೂರ ಕ್ರಮಿಸಲಿಕ್ಕೂ ಮೂರು ಕಿ.ಮೀ. ಸುತ್ತಿ ಬರಬೇಕಾಯಿತು. ಭಾನುವಾರ ಇದ್ದರೂ ಸಂಚಾರದಟ್ಟಣೆ ಉಂಟಾಯಿತು.
ನಾಲ್ಕು ಬೋಟು; ನೂರಾರು ಜನರ ರಕ್ಷಣೆಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪಡೆ ಹಾಗೂ ಸಿವಿಲ್ ಡಿಫೆನ್ಸ್ ತಂಡ, ನೂರಕ್ಕೂ ಅಧಿಕ ಜನರನ್ನು ಸುರಕ್ಷಿತ ಜಾಗಕ್ಕೆ ಕರೆತಂದು ಬಿಟ್ಟಿತು. ಅಲ್ಲದೆ, ನಾಲ್ಕು ಬೋಟುಗಳನ್ನು ನಿಯೋಜಿಸಿದ್ದು, ಅದರಲ್ಲಿಯೂ 30-40 ಜನರನ್ನು ಕರೆತರಲಾಗಿದೆ. ಧ್ವನಿವರ್ಧಕದ ಮೂಲಕವೂ ಸ್ಥಳಾಂತರಗೊಳ್ಳೂವಂತೆ ನಿವಾಸಿಗಳಿಗೆ ಮನವಿ ಮಾಡಲಾಗಿದೆ. ಸುಮಾರು ಆರೇಳು ಕಡೆಗಳಲ್ಲಿ 7 ಅಡಿಗಳಿಗಿಂತ ಹೆಚ್ಚು ನೀರು ನಿಂತಿರುವುದು ಕಂಡುಬಂದಿದೆ. ಸುರಕ್ಷಿತ ಜಾಗಕ್ಕೆ ಬಂದ ಕೆಲವರು, ತಮ್ಮ ಪೈಕಿಯವರು ಅಲ್ಲಿಯೇ (ಜಲಾವೃತಗೊಂಡ ಸ್ಥಳದಲ್ಲಿ) ಉಳಿದಿದ್ದಾರೆ ಎಂದು ಅಲವತ್ತುಕೊಂಡರು. ಅಂತಹವರನ್ನೂ ರಕ್ಷಿಸುವ ಕಾರ್ಯ ನಡೆದಿದೆ ಎಂದು ಸಿವಿಲ್ ಡಿಫೆನ್ಸ್ ಕ್ಷಿಪ್ರ ಸ್ಪಂದನಾ ಪಡೆಯ ಕಮಾಂಡಿಂಗ್ ಆಫೀಸರ್ ಚೇತನ್ “ಉದಯವಾಣಿ’ಗೆ ಮಾಹಿತಿ ನೀಡಿದರು. ಈ ನಡುವೆ ಟಿಪ್ಪರ್‌ಗಳಿಂದ ಮಣ್ಣು ತಂದು ಒಡೆದ ಏರಿಯನ್ನು ಮುಚ್ಚು ಕೆಲಸ ನಡೆದಿದೆ. ಸಂಜೆ ಹೊತ್ತಿಗಾಗಲೇ ಏರಿಯಿಂದ ನೀರು ಹರಿಯುವುದು ಸ್ಥಗಿತಗೊಂಡಿತ್ತು. ಅದರ ಪರಿಣಾಮ ಮಾತ್ರ ಮುಂದುವರಿದಿತ್ತು. 132 ಎಕರೆ ವಿಸ್ತೀರ್ಣದ ಕೆರೆ ಬಿಬಿಎಂಪಿಗೆ ಸೇರಿದ್ದು, ಕೆರೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚು ನೀರು ಸಂಗ್ರಹ ಆಗಿತ್ತು ಎನ್ನಲಾಗಿದೆ. ಆದರೆ, ಅಧಿಕೃತವಾಗಿ ಈ ಕೆರೆ ಇನ್ನೂ ಪಾಲಿಕೆಗೆ ಹಸ್ತಾಂತರಗೊಂಡಿಲ್ಲ. ಬಿಡಿಎ ಸುಪರ್ದಿಯಲ್ಲಿಯೇ ಇದೆ ಎಂದು ಮೇಯರ್ ಎಂ. ಗೌತಮ್ ಕುಮಾರ್ ಸ್ಪಷ್ಟಪಡಿಸಿದರು. ಒಡೆದಿದ್ದರ ಹಿಂದೆ “ಒತ್ತುವರಿ’ ಶಂಕೆ
ಕೆರೆ ಏರಿ ಒಡೆಯಲು ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಆದರೆ, ಒತ್ತುವರಿಗೆ ಅನುಕೂಲಕ್ಕಾಗಿ ಕಿಡಿಗೇಡಿಗಳು ಕೆರೆ ನೀರು ಚರಂಡಿಗೆ ಹರಿಸುವಾಗ ಘಟನೆ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಕೆರೆ ಭರ್ತಿಯಾದರೆ ಒತ್ತುವರಿ ಮಾಡುವುದು ಅಸಾಧ್ಯ. ಹಾಗಾಗಿ, ರಾಜಕಾಲುವೆ ಅಥವಾ ಚರಂಡಿಗೆ ನೀರು ಹರಿಸುತ್ತಿದ್ದರು. ಈ ವೇಳೆ ಏರಿ ಒಡೆದು ಅವಘಡ ಸಂಭವಿಸಿದೆ ಎನ್ನಲಾಗಿದೆ. ಆದರೆ, ಬಿಡಿಎ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಪೂರ್ವಸಿದ್ಧತೆ ಮಾಡಿಕೊಳ್ಳದೆ, ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಬಿಬಿಎಂಪಿ ಅರಕೆರೆ ವಾರ್ಡ್ ಸದಸ್ಯೆ ಭಾಗ್ಯಲಕ್ಷ್ಮೀ ಮುರಳಿ ಆರೋಪಿಸಿದ್ದಾರೆ. ಕಾಮಗಾರಿ ನಡೆಯುತ್ತಿರಲಿಲ್ಲ; ಮೇಯರ್
ಕೆರೆಯಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿರಲಿಲ್ಲ. ಕೆರೆಯು ಭರ್ತಿಯಾಗಿತ್ತು. ಸ್ಥಳೀಯ ಕೆಲ ಕಿಡಿಗೇಡಿಗಳು ಪೈಪ್ ಮೂಲಕ ನೀರನ್ನು ಚರಂಡಿಗೆ ಹರಿಸಲು ಯತ್ನಿಸಿದ್ದು, ನೀರಿನ ಒತ್ತಡಕ್ಕೆ ಕೆರೆ ಒಡೆದಿರುವ ಸಾಧ್ಯತೆ ಇದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗೆ ಪಾಲಿಕೆಯಿಂದ ದೂರು ದಾಖಲಿಸಲಾಗುವುದು.
– ಎಂ.ಗೌತಮ್ ಕುಮಾರ್, ಮೇಯರ್. ಎಫ್ಐಆರ್ ದಾಖಲು
ಕಿಡಿಗೇಡಿಗಳಿಂದ ಈ ಕೃತ್ಯ ಸಂಭವಿಸಿರುವ ಸಾಧ್ಯತೆ ಇದೆ. ಅದೇನೇ ಇರಲಿ, ಘಟನೆ ಬಗ್ಗೆ ಎಫ್ಐಆರ್ ದಾಖಲಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
– ಬಿ.ಎಚ್. ಅನಿಲ್ ಕುಮಾರ್, ಆಯುಕ್ತರು, ಬಿಬಿಎಂಪಿ. ಪಾಲಿಕೆಗೆ ಸಹಕಾರ; ಬಿಡಿಎ
ಹುಳಿಮಾವು ಕೆರೆ ಪ್ರಾಧಿಕಾರದ ಅಧೀನದಲ್ಲಿತ್ತು. ಈ ಹಿಂದೆಯೇ ಬಿಬಿಎಂಪಿಗೆ ಹಸ್ತಾಂತರಿಸಲಾಗಿದೆ. ಆದಾಗ್ಯೂ ಕೆರೆ ಏರಿ ಒಡೆದ ತಕ್ಷಣ ಸಂಬಂಧಪಟ್ಟ ಬಿಡಿಎ ಎಂಜಿನಿಯರ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಬಿಬಿಎಂಪಿಗೆ ಅಗತ್ಯ ಸಹಕಾರ ನೀಡಲಾಗುತ್ತಿದೆ.
-ಡಾ.ಜಿ.ಸಿ.ಪ್ರಕಾಶ್, ಆಯುಕ್ತರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ).