Advertisement

ವಿಚಿತ್ರ ಕಥೆಗೆ ಚಿತ್ರ ವಿಚಿತ್ರ ಟ್ವಿಸ್ಟು!

05:40 PM Jul 09, 2017 | Harsha Rao |

ನಲ್ಲಿ ನಿಲ್ಲಿಸಿ ಬರುತ್ತಾಳೆ. ಆ ಕಡೆ ತಿರುಗುತ್ತಿದ್ದಂತೆ ಮತ್ತೆ ನಲ್ಲಿಯಿಂದ ನೀರು ಬರುತ್ತದೆ… ಲೈಟು ಆಫ‌ು ಮಾಡುತ್ತಾಳೆ. ಫ‌ಕ್ಕಂತ ಮತ್ತೆ ಲೈಟು ಹೊತ್ತಿಕೊಳ್ಳುತ್ತದೆ … ಯಾರೋ ಬಾಯಿ ಮುಚ್ಚಿ ಉಸಿರುಗಟ್ಟಿಸಿದಂತಾಗುತ್ತದೆ, ಕಟ್ಟೆಯ ಮೇಲಿರುವ ಗ್ಲಾಸ್‌ ಜಗ್ಗು ಬಿದ್ದು ಫ‌ಳಾರನೆ ಒಡೆದು ಹೋಗುತ್ತದೆ, ರಕ್ತದಿಂದ ತೊಯ್ದಿರುವ ಪಾದದ ಗುರುತು ನೆಲದ ಮೇಲೆ ಕಾಣುತ್ತದೆ … ಇದೆಲ್ಲದರಿಂದ ಅವಳು ಬೆಚ್ಚಿಬೀಳುತ್ತಾಳೆ.

Advertisement

ಮನೆಯಲ್ಲಾಗುತ್ತಿರುವ ಚಿತ್ರವಿಚಿತ್ರ ಘಟನೆಗಳನ್ನು ನೋಡಿ ಹೌಹಾರುತ್ತಾಳೆ. ಆದರೆ, ಇವೆಲ್ಲಾ ಯಾಕಾಗಿ ಆಗುತ್ತಿದೆ? ಅದೇನು ದೆವ್ವದ ಚೇಷ್ಟೆಯಾ? ಆತ್ಮದ ಕಾಟವಾ? ಅಥವಾ ಯಾರೋ ಮಾಡುತ್ತಿರುವ ಷಡ್ಯಂತ್ರವಾ?
ಕನ್ನಡದಲ್ಲಿ ಹೊಸಬರ ಮತ್ತು ದೆವ್ವದ ಚಿತ್ರಗಳ ಮೇಲೆ ಪ್ರೇಕ್ಷಕರಿಗೆ ಒಂದು ರೀತಿಯ ಅವರ್ಶನ್‌ ಬಂದಿದೆ ಎಂದರೆ ತಪ್ಪಿಲ್ಲ.

“ಕಥಾ ವಿಚಿತ್ರ’ ಎರಡೂ ಕೆಟಗರಿಗೆ ಸೇರುವ ಸಿನಿಮಾ. ಇದು ಸಹ ಹತ್ತರಲ್ಲಿ ಹನ್ನೊಂದನೆಯ ಸಿನಿಮಾ ಇರಬಹುದು ಎಂದುಕೊಂಡು ಚಿತ್ರ ನೋಡೋಕೆ ಹೋಗುವವರಿಗೆ, “ಕಥಾ ವಿಚಿತ್ರ’ ದೊಡ್ಡ ಸರ್‌ಪ್ರೈಸ್‌ ಕೊಡುವುದರಲ್ಲಿ ಆಶ್ಚರ್ಯವೇ ಇಲ್ಲ. ದೆವ್ವದ ಚಿತ್ರವೇ ಇರಬಹುದು. ಆದರೆ, ಅದನ್ನು ಮಾಡಿರುವ ರೀತಿ ನಿಜಕ್ಕೂ ಆಶ್ಚರ್ಯವಾಗುತ್ತದೆ. ಇಲ್ಲಿ ಹೆಸರೇ ಹೇಳುವಂತೆ, ಕಥೆ ನಿಜಕ್ಕೂ ವಿಚಿತ್ರವಾಗಿದೆ. ಸಾಮಾನ್ಯವಾಗಿ ದೆವ್ವದ ಚಿತ್ರಗಳನ್ನು ಒಂದು ಆ್ಯಂಗಲ್‌ನಿಂದ ಇದುವರೆಗೂ ನೋಡುತ್ತಾ ಬರಲಾಗಿದೆ.

ಆದರೆ, “ಕಥಾ ವಿಚಿತ್ರ’ದಲ್ಲಿ ಇನ್ನೊಂದು ಆ್ಯಂಗಲ್‌ ಪ್ರಯತ್ನ ಮಾಡಲಾಗಿದೆ. ಆ ಆ್ಯಂಗಲ್‌ ಏನಿರಬಹುದು ಎಂಬ
ಕುತೂಹಲಕ್ಕಾದರೂ ಚಿತ್ರವನ್ನು ನೋಡಬಹುದು. ಬಹುಶಃ ಚಿತ್ರದ ಮೊದಲಾರ್ಧ ನೋಡಿದರೆ, ಇದು ಇನ್ನೊಂದು ದೆವ್ವದ ಸಿನಿಮಾ ಅಂತನಿಸಬಹುದು. ಮೇಲೆ ಹೇಳಿದಂತೆ ಒಂದಿಷ್ಟು ಚೇಷ್ಟೆಗಳು, ಭಯ, ಕತ್ತಲೆ ಬೆಳಕಿನ ಆಟ … ಇದರಲ್ಲೇ ಮೊದಲಾರ್ಧ ಕಳೆದು ಹೋಗುತ್ತದೆ. ಚಿತ್ರ ನಿಜಕ್ಕೂ ಶುರುವಾಗುವುದು ಮತ್ತು ಅರ್ಥವಾಗುವುದು ಇಂಟರ್‌ವೆಲ್‌ ನಂತರ. ಮೊದಲಾರ್ಧ ಏನಾಯಿತು, ಯಾಕಾಯಿತು ಎಂದು ಕ್ರಮೇಣ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಕೆಲವು ವಿಷಯಗಳು ಯಾಕೆ ಎಂಬ ಪ್ರಶ್ನೆ ಕಾಡಬಹುದು ಮತ್ತು ಇನ್ನೂ ಚೆನ್ನಾಗಿ ಮಾಡಬಹುದಿತ್ತು ಅಂತಲೂ ಅನಿಸಬಹುದು.

ಆದರೆ, ಹೊಸಬರ ತೊಂಡವೊಂದು ಮೊದಲ ಚಿತ್ರದಲ್ಲೇ ಇಂಥದ್ದೊಂದು ಪ್ರಯತ್ನ ಮಾಡಿರುವ ಕುರಿತು ಮೆಚ್ಚುಗೆ
ಬರದೇ ಇರಲಾರದು. ಬರೀ ಒಂದು ವಿಭಾಗವಷ್ಟೇ ಅಲ್ಲ, ಎಲ್ಲಾ ವಿಭಾಗಗಳು ಸಹ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿದೆ.
ಪ್ರಮುಖವಾಗಿ ಮೊದಲು ಗಮನಸೆಳೆಯುವುದು ಮ್ಯಾಥ್ಯೂಸ್‌ ಮನು ಅವರ ಹಿನ್ನೆಲೆ ಸಂಗೀತ ಮತ್ತು ಅಭಿಲಾಷ್‌ ಕಲಾತಿ ಅವರ ಛಾಯಾಗ್ರಹಣ. ಚಿತ್ರದಲ್ಲಿ ಹಾಡಿಗಿಂತ ಹಿನ್ನೆಲೆ ಧ್ವನಿಗೆ ಮೊದಲ ಪ್ರಾಶಸ್ತ್ಯ ಕೊಡಲಾಗಿದ್ದು, ದೃಶ್ಯದಿಂದ
ದೃಶ್ಯಕ್ಕೆ ಮನು ವೆರೈಟಿ ಕೊಡುತ್ತಾ ಹೋಗುತ್ತಾರೆ. ಇನ್ನು ಅಭಿಲಾಷ್‌ ಸಹ ಕತ್ತಲೆ ಬೆಳಕಿನ ಆಟವನ್ನು ಚೆನ್ನಾಗಿಯೇ ಆಡಿದ್ದಾರೆ. ಚಿತ್ರದ ಶೇ 90ರಷ್ಟು ಚಿತ್ರೀಕರಣ ಒಂದೇ ಮನೆಯಲ್ಲಿ ನಡೆಯುತ್ತದೆ ಮತ್ತು ಆ ಮನೆಯ ಪರಿಸರವನ್ನು ಬೇರೆಬೇರೆ ಸಂದರ್ಭದಲ್ಲಿ ಮತ್ತು ಬೆಳಕಲ್ಲಿ ಬಹಳ ಚೆನ್ನಾಗಿ ಹಿಡಿದಿಟ್ಟಿದ್ದಾರೆ ಅಭಿಲಾಷ್‌. ಅವರು ಹಿಡಿದಿಟ್ಟ ದೃಶ್ಯವನ್ನು ಅಚ್ಚುಕಟ್ಟಾಗಿ ಜೋಡಿಸಿ, ನೋಡುವಂತೆ ಮಾಡಿರುವುದು ನಾಗೇಂದ್ರ ಅರಸ್‌. ಇವರೆಲ್ಲರಿಂದ ಕೆಲಸ ತೆಗೆದಿರುವ ಅನೂಪ್‌ ಆ್ಯಂಟೋನಿಗಿದು ಮೊದಲ ಚಿತ್ರ. ಮೊದಲ ಚಿತ್ರದಲ್ಲೇ ಮೆಚ್ಚುವಂತಹ ಪ್ರಯತ್ನ ಮಾಡಿದ್ದಾರೆ ಅನೂಪ್‌. ಚಿತ್ರದ ಬಗ್ಗೆ ಅಷ್ಟೆಲ್ಲಾ ಹೇಳಿ ನಾಯಕಿ ಅನು ಬಗ್ಗೆ ಹೇಳದಿದ್ದರೆ ತಪ್ಪಾಗುತ್ತದೆ. ಚಿತ್ರದಲ್ಲಿ ಇರುವುದೇ ಬೆರಳಣಿಕೆಯಷ್ಟು ಪಾತ್ರಗಳು. ಅದರಲ್ಲಿ ಇಡೀ ಚಿತ್ರ ಅನು ಪಾತ್ರ ಸುತ್ತವೇ ಸುತ್ತುತ್ತದೆ ಮತ್ತು ಅನು ತಮ್ಮ ಪಾತ್ರವನ್ನು ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ. ಅದರಲ್ಲೂ ಮನೆಯಲ್ಲಿ ಒಂಟಿಯಾಗಿರುವ ಸಂದರ್ಭದಲ್ಲಿ ನಡೆಯುವ ವಿಚಿತ್ರ ಘಟನೆಗಳಿಗೆ ಅವರು ಸ್ಪಂದಿಸುವ ರೀತಿ ಮತ್ತು ಭಾವನೆ ವ್ಯಕ್ತಪಡಿಸುವ ರೀತಿಯು ಮೆಚ್ಚುಗೆ ಗಳಿಸುತ್ತದೆ. ಹ್ಯಾರಿ ಸಹ ತಮ್ಮ ವಿಲಕ್ಷಣ ರೀತಿಯಿಂದ ಕಾಡುತ್ತಾರೆ.

Advertisement

“ಕಥಾ ವಿಚಿತ್ರ’ದಲ್ಲಿ ತಪ್ಪುಗಳಿಲ್ಲ, ಸಮಸ್ಯೆಗಳಿಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಆದರೆ, ಹೊಸಬರ ತಂಡವೊಂದು,
ಕಡಿಮೆ ಬಜೆಟ್‌ನಲ್ಲಿ ಮಾಡಿರುವ ಒಂದು ವಿಭಿನ್ನ ಪ್ರಯತ್ನಕ್ಕಾದರೂ ಬೆನ್ನು ತಟ್ಟಲೇಬೇಕು.

– ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next