Advertisement
ಮತ್ತು, ಈ ಕನಸು ಕಂಗಳ ಈ ಮಗುವಿಗೆ ಪ್ಯಾರಾನಾಯ್ಡ ಸ್ಕಿಜೋಫ್ರೀನಿಯಾ ಎಂಬ ಆರೋಗ್ಯ ಸಂಬಂಧಿ ಸಮಸ್ಯೆಯಿತ್ತು!
Related Articles
Advertisement
ಅಪ್ಪ, ಸುರೇಶ ಮಾವನ ಗೆಳೆಯ ಶ್ರೀಧರಮೂರ್ತಿಯವರಲ್ಲಿ ಮಾತನಾಡಿದ್ದರು. ಅವರು ಅಮೃತಾಳನ್ನು ಬೆಂಗಳೂರಿನ ಸ್ಪಂದನ ಆಸ್ಪತ್ರೆಗೆ ಸೇರಿಸಲು ಹೇಳಿದ್ದರು. ಮರುದಿನ ಬೆಳಗ್ಗೆ ಅಪ್ಪ, ಅಮ್ಮ, ಅತ್ತೆ, ಮಾವ, ಅಣ್ಣಯ್ಯ ಎಲ್ಲರೂ ಅಮೃತಾಳನ್ನು ಟ್ಯಾಕ್ಸಿಯಲ್ಲಿ, ಬೆಂಗಳೂರಿಗೆ ಕರೆದೊಯ್ದರು.
ಬೆಂಗಳೂರಿಗೆ ಅವರೆಲ್ಲರೂ ಬೆಂಗಳೂರಿನ ರಾಜಾಜಿನಗರದಲ್ಲಿರುವ ಸ್ಪಂದನ ಆಸ್ಪತ್ರೆಗೆ ಬಂದರು. ಸ್ವಲ್ಪ ಹೊತ್ತಿನಲ್ಲೇ ಶ್ರೀಧರಮೂರ್ತಿಯವರೂ ಅಲ್ಲಿಗೆ ಬಂದರು. ನಂತರ ಅಲ್ಲಿನ ಕ್ರಮಗಳನ್ನೆಲ್ಲಾ ವಿವರಿಸಿ, ಚೀಟಿ ಬರೆಸಿ “ನಾನು ಡಾಕ್ಟರ್ ಮಹೇಶ್ ಹತ್ರ ಮಾತಾಡಿದ್ದೀನಿ. ಅವರೇ ನೋಡ್ತಾರೆ’ ಎಂದರು. ಅವರೆಲ್ಲಾ ಕಾಯುತ್ತ ಕುಳಿತರು. ಸ್ವಲ್ಪ ಹೊತ್ತಿನಲ್ಲಿ ಅಮೃತಾಳ ಹೆಸರಿಗೊಂದು ಫೈಲ್ ತಯಾರಾಗಿ ಬಂತು. ಯಾರೋ ಸೈಕಾಲಜಿಸ್ಟ್, ಅವಳನ್ನು, ಅಪ್ಪ- ಅಮ್ಮನನ್ನೂ ಕೂರಿಸಿಕೊಂಡು ಒಂದು ಗಂಟೆಯ ಕಾಲ ವಿವರಗಳನ್ನೆಲ್ಲಾ ಕೇಳಿದರು. ಅಪ್ಪ ಹಳೆಯ ಚಿಕಿತ್ಸೆಯ ಪತ್ರಗಳನ್ನೆಲ್ಲಾ ತೋರಿಸುತ್ತಿದ್ದರು. ಅಮೃತಾ ಕೇಳಿದ ಕೆಲವಕ್ಕೆ ಉತ್ತರ ಕೊಟ್ಟಳು. ಒಮ್ಮೆ ಇದೆಲ್ಲಾ ಮುಗಿದರೆ ಸಾಕೆನಿಸುತ್ತಿತ್ತು.
ಮಧ್ಯಾಹ್ನ ಊಟ ಮಾಡಿ ಬರೋಣವೆಂದು ಶ್ರೀಧರಮೂರ್ತಿಯವರೇ ಹತ್ತಿರ ಒಂದು ಹೋಟೆಲಿಗೆ ಕರೆದುಕೊಂಡು ಹೋದರು. ಅಲ್ಲಿ ಊಟದಲ್ಲಿ ಪಲ್ಯ ಹಳಸಿ ಹೋಗಿತ್ತು. ಅಮೃತಾ ಅದನ್ನೂ ತಿಂದಳು. ಶ್ರೀಧರಮೂರ್ತಿಯವರು “ಏನಯ್ನಾ, ಇದು ಹಳಸಿದೆ ಸರಿಯಾಗಿ ನೋಡೋಕಾಗಲ್ವ?’ ಎಂದು ಗದರಿದರು. ನಂತರ ಅಮೃತಾಳಿಗೆ “ಚೆನ್ನಾಗಿಲ್ಲದಿದ್ರೆ ಚೆನ್ನಾಗಿಲ್ಲ ಅನ್ಬೇಕು, ಚೆನ್ನಾಗಿದ್ರೆ ಊಟ ಚೆನ್ನಾಗಿದೆ ಅಂತ ಕಾಂಪ್ಲಿಮೆಂಟ್ ಮಾಡ್ಬೇಕು’ ಎಂದರು. ಅಮೃತಾಳ ಮನಸ್ಸು ಇನ್ನೆಲ್ಲೋ ಇತ್ತು. ಅವಳು “ಆ ಆಸ್ಪತ್ರೆಯಲ್ಲಿ ಡಾಕ್ಟರು ಯಾಕೆ ಲಾಯರ್ ಥರ ಪ್ರಶ್ನೆ ಮಾಡ್ತಾರೆ?’ ಎಂದಳು. “ಅವ್ರನ್ನೇ ಕೇಳು’ ಎಂದರು ಶ್ರೀಧರಮೂರ್ತಿ. ನಂತರ ಎಲ್ಲರೂ ಆಸ್ಪತ್ರೆಗೆ ಬಂದರು.
ಅಮೃತಾಳ ಸರದಿ ಬಂದಾಗ ಅವರೆಲ್ಲರೂ ಡಾಕ್ಟರ್ ಕೊಠಡಿಯೊಳಕ್ಕೆ ಹೋದರು. ಅಲ್ಲಿ ಒಬ್ಬ ವಯಸ್ಸಾದ ವ್ಯಕ್ತಿಯೂ ಒಬ್ಬ ಯುವಕನೂ ಕುಳಿತಿದ್ದರು. ವಯಸ್ಸಾದ ವ್ಯಕ್ತಿಯೇ ಡಾಕ್ಟರ್ ಎಂದುಕೊಂಡಳು ಅಮೃತಾ. ಅವರು ಸುಮ್ಮನೇ ಕುಳಿತಿದ್ದರು. ಆ ಯುವಕನೇ ಫೈಲನ್ನು ಹಿಡಿದುಕೊಂಡು ಪ್ರಶ್ನೆಗಳನ್ನು ಕೇಳುತ್ತಾ ಹೋದರು. ಕೊನೆಗೆ ಇವಳನ್ನು ಅಡ್ಮಿಟ್ ಮಾಡಿಕೊಳ್ಳುತ್ತೇನೆ ಎಂದರು. ಆ ಯುವಕನೇ ಡಾ. ಮಹೇಶ್ ಆಗಿದ್ದರು.
ಮರುದಿನ ವಾರ್ಡಿಗೆ ಬಂದಾಗಲೂ ಡಾಕ್ಟರ್ ಅನೇಕ ಪ್ರಶ್ನೆಗಳನ್ನು ಕೇಳಿದರು. ಅಮೃತಾ ಬರೆದಿದ್ದ ಚಿತ್ರಗಳನ್ನು ಅಪ್ಪ ಅಲ್ಲಿಗೆ ತಂದಿದ್ದರು. ಅವುಗಳನ್ನೆಲ್ಲಾ ಡಾಕ್ಟರಿಗೆ ತೋರಿಸಿದರು. “ಮಳೆ ಬೀಳುವ, ರಾಂಚಿ’ ಎಂದು ಬರೆದಿದ್ದ ಚಿತ್ರವನ್ನು ಇದೇನೆಂದು ಕೇಳಿದರು. ಆಗ ಅಪ್ಪ “ಅವಳು ಧೋನಿಯ ಫ್ಯಾನ್. ಅದಕ್ಕೇ ಹೀಗೆ ಬರೆದಿದ್ದಾಳೆ’ ಎಂದರು. ಡಾಕ್ಟರ್ ನಕ್ಕರು. ಇನ್ನೊಂದು ಮೋಹಿನಿ ಚಿತ್ರ ಬರೆದು 988678888 ಎಂದು ಫೋನ್ ನಂಬರ್ ಬರೆದಿದ್ದ ಚಿತ್ರವನ್ನು ನಿಂತು ಗಮನಿಸಿದರು.
ನಂತರ ಡಾಕ್ಟರ್ “ಇವಳ ಸೈಕೋಮೆಟ್ರಿ ಮಾಡಿಸಬೇಕು’ ಎಂದು ಬರೆದುಕೊಟ್ಟರು. ಅಂದು ಸಂಜೆ ಸೀಮಂತಿನಿ ಎಂಬ ಸೈಕಾಲಜಿಸ್ಟರ ಬಳಿ ಅಮೃತಾಳನ್ನು ಕರೆದುಕೊಂಡು ಹೋದರು. ಅದು ಆಸ್ಪತ್ರೆಯ ಕೆಳ ಅಂತಸ್ತಿನಲ್ಲಿತ್ತು. ಮತ್ತೆ ಅಲ್ಲಿಯೂ ಪ್ರಶ್ನಾವಳಿ ಪ್ರಾರಂಭವಾಯಿತು. ಅಮೃತಾ ತನಗೆ ಆಗುತ್ತಿರುವ ಭಯ, ಹಿಂಜರಿಕೆ, ಎಲ್ಲವನ್ನೂ ಹೇಳಿದಳು. ಆದರೆ ಅವಳಿಗೆ ಆಗಾಗ ಉಂಟಾಗುವ ವಿಚಿತ್ರ ಭಾವನೆಗಳನ್ನು ಮತ್ತು ಧೋನಿಯ ಬಗೆಗೆ ಅಥವಾ ಇನ್ನಾರದೋ ಬಗೆಗೆ ಉಂಟಾಗುವ ಭಾವನೆಗಳನ್ನು ಹೇಳಲು ತಿಳಿಯಲೇ ಇಲ್ಲ. ಮಾರನೆಯ ದಿನ ಸೀಮಂತಿನಿ ಒಂದು ಬುಕ್‌ಲೆಟ್ಟನ್ನು ಕೊಟ್ಟರು. ಅದರಲ್ಲಿ ಸಿ.ಇ.ಟಿ ಮಾದರಿಯಂತೆ ಪ್ರಶ್ನೆಗಳಿಗೆ ಉತ್ತರಗಳನ್ನು ತುಂಬಬೇಕಿತ್ತು. ಅದರಲ್ಲಿ, “ಮಂಗಳವಾರದ ಹಿಂದಿನ ದಿನ ಯಾವುದು’ ತರಹದ ತೀರಾ ಸಾಮಾನ್ಯ ಪ್ರಶ್ನೆಗಳಿದ್ದವು. ಹಾಗೆಯೇ ಕೆಲವು ಚಿತ್ರಗಳನ್ನು ಕೊಟ್ಟು ಅದಕ್ಕೆ ಸರಿಹೊಂದುವಂತೆ ಕಥೆ ಬರೆಯುವುದೂ ಇತ್ತು.
ಮೊದಲನೆಯದಾಗಿ “ಒಂದು ನೀರಿನಲ್ಲಿ ತೇಲುವ ಒಂಟಿ ದೋಣಿಯಿತ್ತು. ಅದಕ್ಕೆ ಮೊದಲು ಈ ಪರಿಸರದಲ್ಲಿ ಎಲ್ಲವೂ ಇತ್ತು ಈಗ ಎಲ್ಲಾ ಬರಿದಾಗಿದೆ. ಕಾಡು, ನದಿ ಎಲ್ಲಾ ಹಾಳಾಗಿದೆ. ನೆಮ್ಮದಿ ಇಲ್ಲ. ಶುಖ, ಶಾಂತಿ ಇಲ್ಲ. ಯಾವುದೂ ಇಲ್ಲ ಬದುಕು ಒಂಟಿ ದೋಣಿಯಾಗಿದೆ’ ಎಂದು ಬರೆದಳು. ಎರಡನೆಯದು ಗಂಡ ಹೆಂಡತಿ ಕೋಣೆಯಲ್ಲಿ ಸರಸವಾಡುವ ಚಿತ್ರ. ಪಕ್ಕದಲ್ಲಿ ಕಿಟಿಕಿಯಿಂದ ಇನ್ನೊಬ್ಬ ಹೆಂಗಸು ಅದನ್ನು ನೋಡಿ ಅಳುವ ಚಿತ್ರ. “ಆ ಹೆಂಗಸಿನ ಗಂಡ ತೀರಿಕೊಂಡಿದ್ದಾನೆ. ಬೇರೆ ದಂಪತಿಯ ಸರಸವನ್ನು ನೋಡಿ ಆಕೆ ತಾನು ಕಳೆದುಕೊಂಡಿರುವುದನ್ನು ನೆನೆದು ಹಳೆಯದೆಲ್ಲ ನೆನಪಾಗಿ ಅಳುತ್ತಿದ್ದಾಳೆ.’ ಎಂದು ಬರೆದಳು. ಹೀಗೆ ಎಲ್ಲವನ್ನೂ ಬೇಗ ಬರೆದು ಮುಗಿಸಿದಳು.
ನಂತರ ಮಾರನೆಯ ದಿನಕ್ಕೆ ಡಾಕ್ಟರ್ ಕೆಲವು ಕೆಲಸಗಳನ್ನು ಹೇಳಿದರು. “ನೀನೇ ಹೊರಗೆ ಹೋಗಿ ಅಂಗಡಿಯಿಂದ ಒಂದು ನೋಟ್ ಬುಕ್ ತರಬೇಕು. ಅದರಲ್ಲಿ ನೀನು ಪ್ರತಿಯೊಂದು ಕೆಲಸ ಮಾಡುವಾಗಲೂ ಆದ ಅನುಭವಗಳನ್ನು ಬರೆಯಬೇಕು. ಭಯವಾದರೆ ಶೇಕಡ ಎಷ್ಟೆಂಬುದನ್ನೂ ಬರೆಯಬೇಕು. ಮತ್ತು ನಿನ್ನ ಕೆಲಸಕ್ಕೆ ನೀನೇ ಅಂಕಗಳನ್ನು ಕೊಡಬೇಕು’ ಎಂದರು. ಅಮೃತಾಳಿಗೆ ಅವರ ಮಾತುಗಳಿಂದ ಸಮಾಧಾನವಾಯಿತು.