Advertisement

ಮಳೆ ವಿಳಂಬ ಪರಿಣಾಮ; ನಾಡದೋಣಿ ಮೀನುಗಾರಿಕೆ ಆರಂಭಕ್ಕೂ ತೊಡಕು

03:28 PM Jun 26, 2023 | Team Udayavani |

ಕುಂದಾಪುರ: ಜೂನ್‌ನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೇ ಇರುವುದರಿಂದ, ಮಾತ್ರವಲ್ಲದೆ ಇನ್ನೂ ಸಹ ಸಮುದ್ರದಲ್ಲಿ ತೂಫಾನ್‌ ಆಗದೇ ಇರುವುದರಿಂದ ಈ ಬಾರಿ ನಾಡದೋಣಿ ಮೀನುಗಾರಿಕೆ ಮತ್ತಷ್ಟು ವಿಳಂಬವಾಗಿ ಆರಂಭವಾಗುವ ಸಾಧ್ಯತೆಗಳಿವೆ. ಸಮುದ್ರದ ಪರಿಸ್ಥಿತಿ ನೋಡಿಕೊಂಡು ಜುಲೈ ಮೊದಲ ವಾರ ಅಥವಾ ಜು.15ರ
ಅನಂತರ ಕುಂದಾಪುರ, ಬೈಂದೂರು ಭಾಗದನಾಡದೋಣಿ ಮೀನುಗಾರರು ಕಡಲಿಗಿಳಿಯಬಹುದು.

Advertisement

ಜೂನ್‌ನಲ್ಲಿ ಉತ್ತಮ ಮಳೆಯಾಗುತ್ತಿದ್ದರೆ ಇಷ್ಟೊತ್ತಿಗಾಗಲೇ ನಾಡದೋಣಿ ಮೀನುಗಾರರು ಕಡಲಿಗಿಳಿಯಲು ಸಜ್ಜಾಗುತ್ತಿದ್ದರು. ಕಳೆದ ಒಂದು ವಾರದಿಂದ ಅಷ್ಟೇ ಮಳೆ ಬಿರುಸಾಗಿಇದರಿಂದ ಸಾಂಪ್ರದಾಯಿಕ ಮೀನುಗಾರಿಕೆ ಆರಂಭ ವಿಳಂಬಗೊಂಡಿದೆ.

3 ಸಾವಿರ ದೋಣಿಗಳು
ಕುಂದಾಪುರ, ಬೈಂದೂರು ಭಾಗದ ಕೋಡಿ, ಗಂಗೊಳ್ಳಿ, ಬೆಣೆYರೆ, ಕಂಚುಗೋಡು, ಹೊಸಪೇಟೆ, ಮರವಂತೆ, ತ್ರಾಸಿ, ಕೊಡೇರಿ, ಉಪ್ಪುಂದದ ಮಡಿಕಲ್‌, ಅಳ್ವೆಗದ್ದೆಯಲ್ಲಿ ನಾಡದೋಣಿ ಮೀನುಗಾರರಿದ್ದಾರೆ. ಉಪ್ಪುಂದ ಭಾಗದಲ್ಲಿ 1,500 ನಾಡದೋಣಿಗಳಿದ್ದರೆ, ಗಂಗೊಳ್ಳಿಯಲ್ಲಿ 300 ಸಿಂಗಲ್‌, 35ಕ್ಕೂ ಮಿಕ್ಕಿ ಜೋಡಿ ದೋಣಿಗಳು ಸೇರಿದಂತೆ ಸುಮಾರು 600ಕ್ಕೂ ಮಿಕ್ಕಿ ನಾಡದೋಣಿಗಳಿವೆ. ಮರವಂತೆಯಲ್ಲಿ 100 ಜೋಡಿ ದೋಣಿ, 150ಕ್ಕೂ ಮಿಕ್ಕಿ ಸಿಂಗಲ್‌ ದೋಣಿಗಳಿವೆ.

ಜೂ.27-29 ಕ್ಕೆ ತೂಫಾನ್‌ ಸಾಧ್ಯತೆ
ಕಡಲಾಳದಲ್ಲಿ ತೂಫಾನ್‌ ಎದ್ದ ಬಳಿಕ ಕಡಲು ಪ್ರಕ್ಷುಬ್ಧಗೊಳ್ಳುತ್ತವೆ. ಇದರಿಂದ ನದಿ, ಹೊಳೆಗಳ ನೀರು, ಅದರೊಂದಿಗೆ ತ್ಯಾಜ್ಯವೆಲ್ಲ ಸಮುದ್ರಕ್ಕೆ ಸೇರುವುದರಿಂದ ಆಹಾರಕ್ಕಾಗಿ ವಿವಿಧ ಜಾತಿಯ ಮೀನುಗಳು ಕಡಲ ತೀರದತ್ತ ಧಾವಿಸುತ್ತವೆ. ಆದರೆ ಜೂನ್‌ನಲ್ಲಿ ಅಷ್ಟೊಂದು ಪ್ರಮಾಣದ ಮಳೆಯಾಗದೇ ಇರುವುದರಿಂದ ತೂಫಾನ್‌ ವಿಳಂಬಗೊಂಡಿದೆ. ಜೂ.27ರಿಂದ 29ರೊಳಗೆ ಸಮುದ್ರದಲ್ಲಿ ತೂಫಾನ್‌ ಏಳುವ ಸಾಧ್ಯತೆಗಳಿವೆ. ತೂಫಾನ್‌ ಏಳದೇ ಮೀನುಗಾರರು ಕಡಲಿಗಿಳಿದರೂ, ಅದರಿಂದ ಹೇರಳವಾಗಿ ಮೀನುಗಳು ಸಿಗುವುದಿಲ್ಲ.

ಪರಿಸ್ಥಿತಿ ನೋಡಿ ತೀರ್ಮಾನ
ಜುಲೈ ಮೊದಲ ವಾರದಲ್ಲಿ ಎಲ್ಲರೂ ಒಟ್ಟಾಗಿ ತೀರ್ಮಾನ ಕೈಗೊಂಡು ಸಮುದ್ರ ಪೂಜೆ ನಡೆಸಲಿದ್ದೇವೆ. ಆ ಬಳಿಕ ಸಮುದ್ರದ ಪರಿಸ್ಥಿತಿ ನೋಡಿ ಕಡಲಿಗಿಳಿಯಲಿದ್ದೇವೆ. ಜು. 15 ರ ಅನಂತರವಷ್ಟೇ ನಾಡದೋಣಿ ಮೀನುಗಾರಿಕೆ ಆರಂಭಗೊಳ್ಳಬಹುದು.
-ಆನಂದ ಖಾರ್ವಿ, ಅಧ್ಯಕ್ಷರು, ನಾಡದೋಣಿಮೀನುಗಾರರ ಸಂಘ,
ಉಪ್ಪುಂದ ವಲಯ

Advertisement

ಜೂ.29ಕ್ಕೆ ಪೂಜೆ
ಗಂಗೊಳ್ಳಿಯಲ್ಲಿ ನಾಡದೋಣಿ ಮೀನುಗಾರರೆಲ್ಲ ಸೇರಿ ಜೂ.29 ಕ್ಕೆ ಸಮುದ್ರ ದೇವರಿಗೆ ಪೂಜೆ ಸಲ್ಲಿಸಲಿದ್ದೇವೆ. ಆ ಬಳಿಕ ಪರಿಸ್ಥಿತಿ ನೋಡಿಕೊಂಡು ಜುಲೈ ಮೊದಲ ವಾರದಿಂದ ಕಡಲಿಗಿಳಿಯಲು ಸಜ್ಜಾಗಲಿದ್ದೇವೆ. ಬಂದರಿನ ಅವ್ಯವಸ್ಥೆ, ಗಂಗೊಳ್ಳಿಯ ಬಂದರು, ಅಳಿವೆ ಬಾಗಿಲಲ್ಲಿ ಡ್ರೆಜ್ಜಿಂಗ್‌ ಆಗದೇ ಇರುವುದರಿಂದ ಮೀನುಗಾರರು ಹಿಡಿದ ಮೀನುಗಳನ್ನು ದಡ ಸೇರಿಸುವುದೇ ಕಷ್ಟಕರ ಅನ್ನುವಂತಾಗಿದೆ. ಲೈಟ್‌ಹೌಸ್‌ ಬಳಿ ರಸ್ತೆಯ ಸಮಸ್ಯೆಯಿದೆ. -ಯಶವಂತ ಖಾರ್ವಿ,
ಅಧ್ಯಕ್ಷರು, ನಾಡದೋಣಿ ಮೀನುಗಾರರ ಸಂಘ ಗಂಗೊಳ್ಳಿ ವಲಯ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next