ಭಾರತೀಯ ಕಾನೂನು ಆಯೋಗವು ತನ್ನ 283ನೇ ವರದಿಯನ್ನು ಸಿದ್ಧಪಡಿಸಿದ್ದು, ಇದರಲ್ಲಿ ಸಮ್ಮತಿ ವಯಸ್ಸನ್ನು 18ರಿಂದ 16 ವರ್ಷಕ್ಕೆ ಇಳಿಕೆ ಮಾಡುವ ಯಾವುದೇ ಪ್ರಸ್ತಾವ ತನ್ನ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ಬಗ್ಗೆ ಕೆಲವು ಹೈಕೋರ್ಟ್‌ಗಳು ಪತ್ರಮುಖೇನ ಪ್ರಸ್ತಾವಿಸಿದ್ದರೂ, ಮಕ್ಕಳ ಮೇಲಿನ ಲೈಂಗಿಕ ಕಿರುಕುಳ, ಕಳ್ಳಸಾಗಣೆ, ಸೈಬರ್ ಕ್ರೈಮ್‌ನಲ್ಲಿ ಮಕ್ಕಳ ದುರುಪಯೋಗದಂಥ ಪ್ರಕರಣಗಳು ಹೆಚ್ಚಾಗುವ ಅಪಾಯವಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿಲ್ಲ ಎಂದು ಕಾನೂನು ಆಯೋಗ ಸ್ಪಷ್ಟವಾಗಿ ಹೇಳಿದೆ.
ನ್ಯಾ| ರಿತುರಾಜ್ ಆವಸ್ಥಿ ಅವರ ನೇತೃತ್ವದ ಕಾನೂನು ಆಯೋಗ ಎಲ್ಲ ಆಯಾಮಗಳಲ್ಲೂ ಚರ್ಚಿಸಿ ಇಂಥದ್ದೊಂದು ನಿರ್ಧಾರಕ್ಕೆ ಬಂದಿದೆ ಎಂಬುದು ಸತ್ಯ. ಕೆಲವೊಂದು ಪ್ರಕರಣಗಳಲ್ಲಿ ಈ ವಯಸ್ಸಿನ ಮಿತಿ ವಿಚಾರ ದುರುಪಯೋಗವಾಗಬಹುದು ಎನ್ನಿಸಿದರೂ, ವಿಶಾಲ ದೃಷ್ಟಿಯಲ್ಲಿ ನೋಡುವುದಾದರೆ ಇಳಿಕೆ ಮಾಡದಿರುವ ನಿರ್ಧಾರ ಅತ್ಯಂತ ಸಮಯೋಚಿತ ಎಂದು ಹೇಳಬೇಕಾಗುತ್ತದೆ. ಅಲ್ಲದೆ ಈಗಿನ ಡಿಜಿಟಲ್ ಯುಗದಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಎಷ್ಟೇ ಕಠಿನ ಕಾನೂನುಗಳನ್ನು ಮಾಡಿದರೂ ಅವು ಸಾಕಾಗುವುದಿಲ್ಲ. ಇಂಥ ಹೊತ್ತಿನಲ್ಲಿ ಇರುವ ಕಾನೂನನ್ನೇ ಸಡಿಲಗೊಳಿಸಿದರೆ, ಹೆಣ್ಣು ಮಕ್ಕಳು ಇನ್ನಷ್ಟು ಸಂಕಷ್ಟಕ್ಕೀಡಾಗುತ್ತಾರೆ ಎಂಬುದನ್ನು ಮನಗಂಡೇ ಕಾನೂನು ಆಯೋಗ ವಯಸ್ಸಿನ ಮಿತಿ ಇಳಿಕೆ ಮಾಡಿಲ್ಲ.
ಸಮ್ಮತಿಯ ವಯಸ್ಸನ್ನು 18ರಿಂದ 16ಕ್ಕೆ ಇಳಿಕೆ ಮಾಡಬೇಕು ಎಂಬ ಬಗ್ಗೆ ಇತ್ತೀಚಿನ ದಿನಗಳಲ್ಲಿ ಚರ್ಚೆ ಶುರುವಾಗಿತ್ತು. ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠದಿಂದ ಕಾನೂನು ಆಯೋಗಕ್ಕೆ ಪತ್ರವೊಂದು ಹೋಗಿತ್ತು. ಈ ಪತ್ರದಲ್ಲಿ ವಯಸ್ಸಿನ ಇಳಿಕೆ ವಿಚಾರವಾಗಿ ಕೆಲವು ಅಂಶಗಳನ್ನು ಪ್ರಸ್ತಾವಿಸಲಾಗಿತ್ತು. ಅಂದರೆ ಕೆಲವು ಪ್ರಕರಣಗಳನ್ನು 16 ತುಂಬಿದ ಹೆಣ್ಣು ಮಕ್ಕಳು ಪ್ರೀತಿಗೆ ಬಿದ್ದು ಮನೆ ಬಿಟ್ಟು ಹೋಗಿರುತ್ತಾರೆ. ಅಲ್ಲದೆ ತಾವು ಪ್ರೀತಿಸಿದ ಯುವಕನ ಜತೆ ದೈಹಿಕ ಸಂಬಂಧವೂ ಬೆಳೆದುಬಿಡುತ್ತದೆ.
ಈ ಪ್ರಕರಣಗಳಲ್ಲಿ ಸಮ್ಮತಿ ಇದ್ದರೂ, ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸುವ ಸನ್ನಿವೇಶಗಳು ಎದುರಾಗಿವೆ. ಹೀಗಾಗಿ ವಯಸ್ಸಿನ ಮಿತಿ ಇಳಿಕೆ ಮಾಡಲು ಸಾಧ್ಯವೇ? ಈ ಬಗ್ಗೆ ಪರಿಶೀಲನೆ ಮಾಡಿ ಎಂಬುದನ್ನು ಪ್ರಸ್ತಾವಿಸಲಾಗಿತ್ತು. ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಪೀಠ ಕೂಡ ಕಾನೂನು ಆಯೋಗಕ್ಕೆ ಪತ್ರವೊಂದನ್ನು ಬರೆದಿದ್ದು, ಕೆಲವು ಪ್ರಕರಣಗಳಲ್ಲಿ ಸಮ್ಮತಿಯ ಲೈಂಗಿಕ ಕ್ರಿಯೆ ನಡೆದಿದ್ದರೂ ವ್ಯಕ್ತಿ ಮೇಲೆ ಪೋಕೊÕà ಕಾಯ್ದೆಯಡಿ ಅತ್ಯಾಚಾರ ಪ್ರಕರಣ ದಾಖಲಿಸುವ ಅಂಶಗಳು ಕಂಡು ಬಂದಿವೆ. ಇದರಿಂದ ಕಾನೂನಿನ ಅಡಿ ಅನ್ಯಾಯವಾಗುತ್ತಿದೆ. ಹೀಗಾಗಿ ಪೋಕೊÕà ಕಾಯ್ದೆಗೆ ತಿದ್ದುಪಡಿ ತರಲು ಸಾಧ್ಯವೇ ಎಂದೂ ಕೇಳಿತ್ತು.
ಈ ಎರಡೂ ಸಂಗತಿಗಳು ಮತ್ತು ದೇಶದ ಕೆಲವು ಪ್ರಕರಣಗಳನ್ನು ನೋಡಿಕೊಂಡು ಕಾನೂನು ಆಯೋಗ, ವಯಸ್ಸನ್ನು ಇಳಿಕೆ ಮಾಡದಿರುವ ನಿರ್ಧಾರಕ್ಕೆ ಬಂದಿದೆ. 16ಕ್ಕೆ ಇಳಿಕೆ ಮಾಡಿದರೆ ಬಾಲ್ಯವಿವಾಹಗಳಿಗೂ ಪರೋಕ್ಷವಾಗಿ ಆಸ್ಪದ ನೀಡಲಾಗುತ್ತದೆ ಎಂಬ ವಿಚಾರವೂ ಗಂಭೀರವಾಗಿದೆ. ಮಕ್ಕಳನ್ನು ಮಾನವ ಕಳ್ಳಸಾಗಾಣಿಕೆಗೆ ಬಳಸಿಕೊಳ್ಳುವ, ಪೋಕೊÕà ಕಾಯ್ದೆಯ ಬಲವಿಲ್ಲವೆಂದು 16 ತುಂಬಿದ ಮಕ್ಕಳನ್ನು ಲೈಂಗಿಕವಾಗಿ ಬಳಕೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚುವ ಆತಂಕವನ್ನೂ ಅದು ಹೊರಹಾಕಿದೆ. ಒಟ್ಟಾರೆಯಾಗಿ ಕಾನೂನು ಆಯೋಗದ ಈ ನಿಲುವು ಸ್ವಾಗತಾರ್ಹವೇ ಆಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.