Advertisement

ಕುಂಟುತ್ತಿರುವ ಕಾಂಗ್ರೆಸ್‌, ಓಡುತ್ತಿರುವ ಬಿಜೆಪಿ

10:18 AM Feb 26, 2020 | sudhir |

ಉಡುಪಿ: ಚುನಾವಣೆಯಲ್ಲಿ ಸೋತಾಗ ಖಂಡ್ರೆ, ದಿನೇಶ್‌ ಗುಂಡೂ ರಾವ್‌, ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟರೂ ಇಂದಿಗೂ ಅವರ ಬದಲು ನಾಮಕರಣವಾಗಿಲ್ಲ. ಇದೇ ಸ್ಥಿತಿ ರಾಷ್ಟ್ರ ಮಟ್ಟದಲ್ಲೂ ಇದೆ. ಸೋನಿಯಾ ಅವರು ಹಂಗಾಮಿ ಅಧ್ಯಕ್ಷರು. ಅವರಿಗೆ, ರಾಹುಲರಿಗೆ ಅಧ್ಯಕ್ಷರನ್ನು ನೇಮಿಸಲು ಸಾಧ್ಯವಾಗುತ್ತಿಲ್ಲ. ಆದರೆ ಬಿಜೆಪಿ ಮಾತ್ರ ಓಡುತ್ತಿರುವ ನೌಕೆಯಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ವಿಶ್ಲೇಷಿಸಿದರು.

Advertisement

ಸೋಮವಾರ ಕಿದಿಯೂರು ಹೊಟೇಲ್‌ ಸಭಾಭವನದಲ್ಲಿ ನಡೆದ ನೂತನ ಬಿಜೆಪಿ ಜಿಲ್ಲಾ ಅಧ್ಯಕ್ಷರ ಪದಪ್ರದಾನ ಮತ್ತು ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು.

ಡಿ.ಕೆ. ಶಿವ ಕುಮಾರ್‌ ಅವರನ್ನು ಅಧ್ಯಕ್ಷರಾಗಿ ಮಾಡಿದರೆ ಮಾಜಿ ಸಿಎಂ ಸಿದ್ದರಾಮಯ್ಯ ಬಿಡ್ತಾರೆ, ಸಿದ್ದರಾಮಯ್ಯನವರನ್ನು ಮಾಡಿದರೆ ಡಿಕೆಶಿ ಬಿಡ್ತಾರೆ, ಇಬ್ಬರನ್ನೂ ಸೇರಿಸಿದರೆ ಪರಮೇಶ್ವರ್‌ ಹೋಗ್ತಾರೆ. ದೇಶದಲ್ಲಿ ನಡೆದ 17 ಚುನಾವಣೆಗಳಲ್ಲಿ ಏಳು ಬಾರಿ ಪ್ರಚಂಡ ಗೆಲುವು ಸಾಧಿಸಿದ ಕಾಂಗ್ರೆಸ್‌ಗೆ ಈ ಸ್ಥಿತಿ ಬರಲು ಅಧಿಕಾರದಾಹ, ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಸಂಘಟನೆ ಕೊರತೆ ಕಾರಣ. ನಾವೂ ಹೀಗಾಗಬಾರದು. ರಾಜ್ಯದ 37 ಸಂಘಟನಾತ್ಮಕ ಜಿಲ್ಲೆಗಳಲ್ಲಿ 35ರಲ್ಲಿ ಅಧ್ಯಕ್ಷರ ಆಯ್ಕೆಯಾಗಿದ್ದು 21ರಲ್ಲಿ ಪದಗ್ರಹಣವಾಗಿದೆ ಎಂದರು.

ಹೊಸ ಪೀಳಿಗೆಗಾಗಿ ವಯೋಮಿತಿ
ಪಕ್ಷದಲ್ಲಿ ಹೊಸ ಪೀಳಿಗೆ ಬರಬೇಕು ಎಂಬ ಕಾರಣಕ್ಕೆ ವಯೋಮಿತಿಯನ್ನು ಜಾರಿಗೆ ತರಲಾಗಿದೆ. ಬೂತ್‌ ಮಟ್ಟದಲ್ಲಿ ಕಾರ್ಯಕರ್ತರು ಬೆಳೆಯದಿದ್ದರೆ ಗೆಲ್ಲಲು ಆಗುವುದಿಲ್ಲ ಎಂದು ಅನುಭವಕ್ಕೆ ಬಂದಿದೆ. ಹೀಗಾಗಿ ಬಿಜೆಪಿ ಸಂಘಟನೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಅಭಿವೃದ್ಧಿಗೆ ಮನವಿ
ಕರಾವಳಿಯ ಅಭಿವೃದ್ಧಿ ನಾವು ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ದ್ದೇವೆ. ಜನಸಾಮಾನ್ಯರಿಗಾಗುವ ಸಮಸ್ಯೆಗಳ ನಿವಾರಿಸಿ ಸರಕಾರದಿಂದ ಆಗುವ ಕೆಲಸಗಳನ್ನು ನಿರಾಳವಾಗಿ ಮಾಡಲು ಪ್ರಯತ್ನಿಸುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ನನ್ನ ಅವಧಿಯಲ್ಲಿ ಪಕ್ಷದ ಕಾರ್ಯಕರ್ತರ ಸಹಕಾರದಿಂದ ಎಲ್ಲ ಚುನಾವಣೆಗಳಲ್ಲಿ ಅಭೂತ ಪೂರ್ವ ಯಶಸ್ಸು ಗಳಿಸಲು ಸಾಧ್ಯವಾಯಿತು. ಇದೇ ಮುನ್ನಡೆ ಮುಂದುವರಿಯಬೇಕು ಎಂದು ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹಾರೈಸಿದರು.

ಶಾಸಕರಾದ ಕೆ. ರಘುಪತಿ ಭಟ್‌, ಬಿ.ಎಂ. ಸುಕುಮಾರ ಶೆಟ್ಟಿ, ಲಾಲಾಜಿ ಮೆಂಡನ್‌, ವಿಭಾಗ ಪ್ರಭಾರಿ ಕೆ. ಉದಯಕುಮಾರ ಶೆಟ್ಟಿ ಶುಭ ಕೋರಿದರು.
ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಮಂಡಲಾಧ್ಯಕ್ಷರಾದ ಬೈಂದೂರಿನ ದೀಪಕ್‌ ಕುಮಾರ್‌ ಶೆಟ್ಟಿ, ಕುಂದಾಪುರದ ಶಂಕರ ಅಂಕದಕಟ್ಟೆ, ಉಡುಪಿ ಗ್ರಾಮಾಂತರದ ವೀಣಾ ನಾಯಕ್‌, ಉಡುಪಿ ನಗರದ ಮಹೇಶ್‌ ಠಾಕೂರ್‌, ಕಾರ್ಕಳದ ಮಹಾವೀರ ಹೆಗ್ಡೆ, ಕಾಪುವಿನ ಶ್ರೀಕಾಂತ ನಾಯಕ್‌ ಉಪಸ್ಥಿತರಿದ್ದರು.

ನಾಯಕರಾದ ಗುರ್ಮೆ ಸುರೇಶ ಶೆಟ್ಟಿ ಸ್ವಾಗತಿಸಿದರು. ಕುತ್ಯಾರು ನವೀನ್‌ ಶೆಟ್ಟಿ ನಿರ್ವಹಿಸಿದರು. ರಾಜ್ಯಾಧ್ಯಕ್ಷರು ಜಿಲ್ಲೆ, ಮಂಡಲ, ಗ್ರಾಮ ಸಮಿತಿ ಅಧ್ಯಕ್ಷರಿಗೆ ಸಂಕಲ್ಪ ಬೋಧನೆ ನಡೆಸಿದರು.

ನಾಗಾಲೋಟಕ್ಕೆ ಸಂಕಲ್ಪ
ಕಾಂಗ್ರೆಸ್‌ಗೆ ಈಗ ಸಂಘಟನೆ ಮಾಡಲು ಜನರು ಸಿಗುತ್ತಿಲ್ಲ. ನಮ್ಮ ಪಕ್ಷದಲ್ಲಿ ಒಂದೇ ಒಂದು ಪಂಚಾಯತ್‌ ಸದಸ್ಯರಿಲ್ಲದಿದ್ದಾಗಲೂ ಬೂತ್‌ ಸಮಿತಿ, ಸ್ಥಾನೀಯ ಸಮಿತಿ ಇತ್ತು. ಈ ಕಾರಣದಿಂದ ಈ ಮಟ್ಟಕ್ಕೆ ಬರಲು ಸಾಧ್ಯವಾಯಿತು. ನಾನೂ ಮಂಡಲ ಮಟ್ಟದಲ್ಲಿ ನಡೆಯುವ ಬೂತ್‌ ಕಾರ್ಯಕರ್ತರ ಸಮಾವೇಶಕ್ಕೆ ಬರುತ್ತೇನೆ. ಬೇರೆ ಬೇರೆ ಪ್ರಕೋಷ್ಠಗಳನ್ನು ರಚನೆ ಮಾಡಿ ಪಕ್ಷವನ್ನು ನಾಗಾಲೋಟದಲ್ಲಿ ಮುನ್ನಡೆಸಲು ಯತ್ನಿಸುತ್ತೇನೆ ಎಂದು ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್‌ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next