ನಿಮ್ಮ ಮನೆಯ ಆವರಣದಲ್ಲೋ ಅಥವಾ ಎರಡು ಮರಗಳ ನಡುವೆಯೋ ಜೇಡರ ಹುಳ ಬಲೆ ನೇಯುವುದನ್ನು ನೀವು ನೊಡಿಯೇ ಇರುತ್ತೀರಿ. ಆದರೆ ಇಲ್ಲೊಬ್ಬರು ಇ.ಎನ್.ಟಿ. ತಜ್ಞರು ತಮ್ಮ ಪೇಷಂಟ್ ಕಿವಿಯಲ್ಲಿ ಜೇಡರ ಹುಳು ಬಲೆ ನೇಯುತ್ತಿದ್ದುದನ್ನು ಕಂಡು ಹೌಹಾರಿದ್ದಾರೆ.
ಈ ಪುಣ್ಯಾತ್ಮ ತನ್ನ ಕಿವಿಯಲ್ಲಿ ತುರಿಕೆ ಮತ್ತು ಏನೋ ಹರಿದಾಡುತ್ತಿದ್ದ ಹಾಗೆ ಅನ್ನಿಸಿದಾಗ ನೇರವಾಗಿ ಇ.ಎನ್.ಟಿ. ತಜ್ಞರಲ್ಲಿಗೆ ಬಂದಿದ್ದಾನೆ. ಈತನ ಕಿವಿಯನ್ನು ಪರೀಕ್ಷಿಸಿದ ಡಾ. ಝಾಂಗ್ ಪಾನ್ ಅವರಿಗೆ ಪ್ರಾರಂಭದಲ್ಲಿ ರೋಗಿಯ ಕಿವಿಯಲ್ಲಿ ಅಂತದ್ದೇನೂ ಕಾಣಿಸಲಿಲ್ಲಿ.
ಆದರೆ ಬದಲಿಗೆ ಎಂಡೋಸ್ಕೋಪ್ ಮೂಲಕ ಈ ರೋಗಿಯ ಕಿವಿಯನ್ನು ಪರೀಕ್ಷಿಸಿದಾಗ ಅಲ್ಲಿ ಸಣ್ಣ ಜೇಡರ ಹುಳ ಇರುವುದು ಕಾಣಿಸಿತು. ಅಷ್ಟೇ ಆಗಿದ್ದಿದ್ದರೆ ಪರ್ವಾಗಿಲ್ಲ, ಈ ಜೇಡರ ಹುಳು ಆ ರೋಗಿಯ ಕಿವಿಯಲ್ಲಿ ಬಲೆಯನ್ನೇ ನೇಯ್ದು ಬಿಟ್ಟಿತ್ತು. ಅದು ಎಷ್ಟರಮಟ್ಟಿಗೆ ಎಂದರೆ ಆತನ ಕಿವಿಯ ನಾಳವನ್ನೇ ಈ ಬಲೆ ಸಂಪೂರ್ಣ ಆವರಿಸಿಬಿಟ್ಟಿತ್ತು!
ತಕ್ಷಣವೇ ವೈದ್ಯರು ಕಿವಿ ನಾಳದ ಭಾಗಕ್ಕೆ ಔಷಧಿಯನ್ನು ಹಾಕಿ ಜೇಡ ನೆಯ್ದಿದ್ದ ಬಲೆಯನ್ನು ತೆಗೆದಿದ್ದಾರೆ ಮಾತ್ರವಲ್ಲದೇ ಸೂಜಿಯ ಸಹಾಯದಿಂದ ಆ ಜೇಡರ ಹುಳವನ್ನೂ ಸಹ ಹೊರತೆಗೆದಿದ್ದಾರೆ. ಅಲ್ಲಿಗೆ ರೋಗಿಗೆ ಒಮ್ಮೆಗೆ ಅಯ್ಯಬ್ಬಾ ಆಗಿರಬೇಕು!
ಒಂದು ವೇಳೆ ರೋಗಿ ಇನ್ನಷ್ಟು ತಡವಾಗಿ ಚಿಕಿತ್ಸೆಗೆ ಬಂದಿದ್ದರೆ ಆತನ ಕಿವಿ ನಾಳಕ್ಕೆ ಅಪಾಯ ಎದುರಾಗುವ ಸಂಭವ ಇತ್ತು ಎನ್ನುವುದು ಡಾ. ಝಾಂಗ್ ಅವರ ಅಭಿಪ್ರಾಯವಾಗಿದೆ. ವೈದ್ಯರು ರೋಗಿಯ ಕಿವಿಯಿಂದ ಜೇಡರ ಹುಳವನ್ನು ಹೊರತೆಗೆಯುವ ವಿಡಿಯೋ ಸಹ ಈಗ ಜಾಲತಾಣಗಳಲ್ಲಿ ಹಲವರಿಂದ ವೀಕ್ಷಿಸಲ್ಪಟ್ಟಿದೆ.