ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೃಹತ್ ಗೋ ಮಾಫಿಯಾ ದಂಧೆಯು ರಾಜಾರೋಷವಾಗಿ ನಡೆಯುತ್ತಿದ್ದು, ಅದನ್ನು ತಡೆಯಲು ಪೊಲೀಸ್ ಇಲಾಖೆಯು ವಿಶೇಷಕಾರ್ಯಪಡೆಯನ್ನು ರಚಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಸಂಘಟನೆಗಳು ಆಗ್ರಹಿಸಿವೆ. ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುದ್ರೋಳಿ ಕಸಾಯಿ ಖಾನೆಯನ್ನು ಕೇಂದ್ರೀಕರಿಸಿ ಗೋವಧೆಗಾಗಿ ಗೋ ಕಳ್ಳಸಾಗಾಟ ನಿರಂತರವಾಗಿ ನಡೆಯುತ್ತಿದೆ. ಮಂಗಳೂರು ಹಾಗೂ ಜಿಲ್ಲೆಯ ಇತರೆಡೆ ಇರುವ ಅಕ್ರಮ ಕಸಾಯಿಖಾನೆಗಳಲ್ಲಿ ಗೋವಧೆ ನಡೆಯುತ್ತಲೇ ಇದ್ದರೂ ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡಿಲ್ಲ. ದಂಧೆಯ ಹಿಂದಿರುವ ವ್ಯಕ್ತಿಗಳನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.
ಕಠಿನ ಕ್ರಮ ಅಗತ್ಯ
ಮಂಗಳೂರಿನಲ್ಲಿ ರವಿವಾರ ನಡೆದ ಘಟನೆ ಹಿಂಸಾತ್ಮಕ ಅಕ್ರಮ ಗೋ ಸಾಗಾಟಕ್ಕೆ ಸಾಕ್ಷಿಯಾಗಿದೆ. ಈ ಘಟನೆಯಲ್ಲಿ ಕಾಪಿಕಾಡ್, ಕುಂಟಿಕಾನ, ಉರ್ವ, ಮಣ್ಣಗುಡ್ಡೆ ಬಳಿ ಗೋ ಸಾಗಾಟದ ವಾಹನದಿಂದ ಗೋವುಗಳನ್ನು ರಸ್ತೆಗೆ ಉದ್ದೇಶಪೂರ್ವಕವಾಗಿ ಎಸೆದು ವಿಕೃತಿ ಮೆರೆದಿದ್ದಾರೆ. ಈ ಕೃತ್ಯ ನಡೆಸಿದ ಆರೋಪಿಗಳ ವಿರುದ್ಧ ಕಠಿನ ಕ್ರಮ ಕೈಗೊಂಡು ಗೋ ಸಾಗಾಟದ ವಾಹನವನ್ನು ಮುಟ್ಟು ಗೋಲು ಹಾಕಬೇಕು ಎಂದವರು ಆಗ್ರಹಿಸಿದರು. ಬಜರಂಗದಳ ವಿಭಾಗ ಸಂಯೋಜಕ ಭುಜಂಗ ಕುಲಾಲ್, ಜಿಲ್ಲಾ ಗೋರಕ್ಷ ಪ್ರಮುಖ್ ಪ್ರದೀಪ್ ಪಂಪ್‌ವೆಲ್, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಜಿಲ್ಲಾ ಉಪಾಧ್ಯಕ್ಷ ಮನೋಹರ್ ಸುವರ್ಣ, ಉಮೇಶ್ ಜಪ್ಪಿನಮೊಗರು ಉಪಸ್ಥಿತರಿದ್ದರು.
ಕೆಲವು ಮಾಂಸ ಮಾರಾಟದ ಅಂಗಡಿಗಳಲ್ಲಿ ಆಡು, ಕುರಿಗಳ ಮಾಂಸದೊಂದಿಗೆ ಕರುಗಳ ಮಾಂಸವನ್ನು ಬೆರೆಸಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಪಾಲಿಕೆ ಆರೋಗ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಅಂತಹವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಪರವಾನಿಗೆ ರದ್ದುಗೊಳಿಸಬೇಕು ಎಂದು ಶರಣ್ ಆಗ್ರಹಿಸಿದರು. ಗೋರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಬಜರಂಗದಳ ರಸ್ತೆಗಿಳಿದು ಗೋರಕ್ಷಣೆ ಮಾಡಲಿದೆ. ಆದರೆ ಅಂತಹ ಸಂದರ್ಭದಲ್ಲಿ ಆಗುವ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆ.
– ಶರಣ್ ಪಂಪ್‌ವೆಲ್