Advertisement

‘ಭಾಷೆ ಕೊಟ್ಟು ನಾನು ಶೀಲವತಿಯಾಗಿರಬೇಕಾ..?’ ಎಂಬ ಸಂಕಮ್ಮನ ಮಾತೇ ಆಕೆಗೆ ಮುಳುವಾಗಿದ್ದು ಹೇಗೆ?

08:05 PM Aug 25, 2020 | Hari Prasad |

Raper ಚಂದನ್ ಶೆಟ್ಟಿಯ ‘ಕೋಲುಮಂಡೆ’ ಹೊಸ ಹಾಡು ಇದೀಗ ವಿವಾದಕ್ಕೆ ಕಾರಣವಾಗಿದ್ದು ಈ ಹಾಡಿನಲ್ಲಿ ಮಲೆಮಹದೇಶ್ವರನ ಭಕ್ತೆ ಸಂಕಮ್ಮನನ್ನು ಕೆಟ್ಟ ರೀತಿಯಲ್ಲಿ ತೋರಿಸಲಾಗಿದೆ ಎಂದು ಮಹದೇಶ್ವರನ ಭಕ್ತವರ್ಗ ಚಂದನ್ ಮೇಲೆ ಸಿಟ್ಟಾಗಿದ್ದಾರೆ. ಘಟನೆಯ ತೀವ್ರತೆಯನ್ನು ಅರ್ಥ ಮಾಡಿಕೊಂಡ ಚಂದನ್ ಕ್ಷಮೆ ಕೋರಿದ್ದಾರೆ ಮಾತ್ರವಲ್ಲದೇ ಈ ಹಾಡನ್ನು ಯೂಟ್ಯೂಬ್ ನಿಂದ ತೆಗೆಯಲಾಗಿದೆ. ಹಾಗಾದರೆ ಕಂಸಾಳೆ ಕಾವ್ಯದಲ್ಲಿ ಬರುವ ಸಂಕಮ್ಮನ ಸಾಲಿನಲ್ಲಿರುವ ಈ ಕಥೆ ಏನು ಎಂಬುದರ ಬಗ್ಗೆ ಒಂದು ಸಂಕ್ಷಿಪ್ತ ಬರಹ ಇಲ್ಲಿದೆ.

Advertisement

ಶಿವ ಶರಣೆ ಸಂಕಮ್ಮ ಮಲೆ ಮಹಾದೇಶ್ವರ ಕಾವ್ಯದಲ್ಲಿ ಬರುವ ಒಂದು ಸಣ್ಣ ಉಪಖ್ಯಾನ. ಸಂಕಮ್ಮಳ ಗಂಡ ಸೋಲಿಗರ ನೀಲೇ ಗೌಡ.

ಈಕೆ ಸೋಲಿಗರ ಸಮುದಾಯಕ್ಕೆ ಸೇರಿದಾಕೆ. ಮತ್ತು ಜನಪದ ಕಥೆಯಲ್ಲಿ ಬರುವಂತೆ ಬಹಳ ಸುಂದರವಾದ ಹೆಣ್ಣುಮಗಳು ಸಂಕವ್ವ.

ಸೋಲಿಗ ಸಮುದಾಯದಲ್ಲಿ ಬೇಟೆಗೆ ಹೋಗುವ ಸಂಪ್ರದಾಯವಿದೆ. ಹೀಗೆ ಈಕೆಯ ಗಂಡ ಒಂದು ದಿನ ಬೇಟೆಗೆ ಹೋಗುವ ಸಮಯದಲ್ಲಿ ತನ್ನ ಹೆಂಡತಿಯನ್ನು ಕರೆದು ಆಕೆಯ ಬಳಿ ತಾನು ತನ್ನವರೊಂದಿಗೆ ಬೇಟೆಗೆ ಹೋಗುತ್ತಿರುವ ವಿಚಾರವನ್ನು ಹೇಳುತ್ತಾನೆ.

ಇದೊಂದು ಸುದೀರ್ಘಕಾಲದ ಬೇಟೆ ಪ್ರಯಾಣ. ಬೇಟೆಗೆ ಹೋಗಲು 3 ತಿಂಗಳು ಅಲ್ಲಿ ಇರಲು 3 ತಿಂಗಳು ಮತ್ತು ಬರೋದಕ್ಕೆ 3 ತಿಂಗಳು ಒಟ್ಟು 9 ತಿಂಗಳು ನಾನು ನಿನ್ನನ್ನು ಬಿಟ್ಟು ಇರಬೇಕಾಗುತ್ತದೆ. ಹಾಗಾಗಿ ನಾನು ಹಿಂತಿರುಗಿ ಬರೋವರೆಗೂ ನೀನು ಶುದ್ಧ ಶೀಲೆಯಾಗಿರ್ತೀನಿ ಅಂತ ನನ್ನ ಬಲಗೈ ಮುಟ್ಟಿ ಭಾಷೆಕೊಡು ಅಂತ ಗಂಡ ಆಕೆಗೆ ಹೇಳುತ್ತಾನೆ.

Advertisement

ಗಂಡನ ಈ ಸಂಶಯದ ಮಾತಿಗೆ ಬೇಸರಪಟ್ಟುಕೊಳ್ಳುವ ಸಂಕವ್ವ, ನಾನು ಶುದ್ಧ ಶೀಲೆಯಾಗಿಯೇ ಇರ್ತೇನೆ. ಆದರೆ ಈಗ ನಾನು ಹಾಗೆಂದು ಭಾಷೆ ಕೊಟ್ಟರೆ, ಭಾಷೆ ಕೊಟ್ಟ ಕಾರಣದಿಂದ ಈಕೆ ಶೀಲವಂತೆಯಾಗಿ ಇದ್ಲು ಇಲ್ಲದೇ ಇದ್ರೆ ಕೆಟ್ಟು ಹೋಗ್ತಾ ಇದ್ಲು ಅಂತ ನಾಲ್ಕು ಜನ ಮಾತನಾಡಲು ಅವಕಾಶ ಮಾಡಿಕೊಟ್ಟ ಹಾಗೆ ಆಗುತ್ತಲ್ವಾ ಅಂತ ಪತಿಗೆ ಹೇಳುತ್ತಾಳೆ. ಹಾಗಾಗಿ ನಾನು ಭಾಷೆ ಕೊಡದೇ ಇದ್ರೂ ಶೀಲವಂತೆಯಾಗೇ ಇರುತ್ತೇನೆ, ನೀನು ನನ್ನನ್ನು ನಂಬಬೇಕು ಅಷ್ಟೇ ಎಂದು ಖಡಕ್ಕಾಗಿ ಹೇಳ್ತಾಳೆ.

ಆದ್ರೆ ನೀಲೇ ಗೌಡ ತನ್ನ ಹೆಂಡತಿಯ ಮಾತನ್ನು ಒಪ್ಪೋದಿಲ್ಲ ಬದಲಾಗಿ ಭಾಷೆ ಕೊಡುವಂತೆ ಒತ್ತಾಯಪಡಿಸುತ್ತಾನೆ ಮತ್ತು ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯುತ್ತದೆ. ಸಂಕವ್ವ ಗಂಡನಿಗೆ ತಿಳಿಹೇಳುವ ಪ್ರಯತ್ನದಲ್ಲಿ ವಿಫಲಳಾಗುತ್ತಾಳೆ.

ಮಾತ್ರವಲ್ಲದೇ ಸಂಕಮ್ಮನಿಗೆ ಆಕೆಯ ಗಂಡ ದೈಹಿಕ ಹಿಂಸೆ ನೀಡಿ ಆಕೆಯನ್ನು ಮನೆಯಲ್ಲೇ ಅಮಾನುಷವಾಗಿ ಕೂಡಿಹಾಕಿ ಬೇಟೆಗೆಂದು ಹೊರಟು ಹೋಗ್ತಾನೆ. ನೀಲೇ ಗೌಡ ಸಮಕಮ್ಮನಿಗೆ ನೀಡುವ ದೈಹಿಕ ಹಿಂಸೆಯ ವರ್ಣನೆ ಜನಪದ ಕಾವ್ಯದಲ್ಲಿದೆ.

ಗಂಡನ ಚಿತ್ರ ಹಿಂಸೆಯಿಂದ ಬೇಸತ್ತ ಸಂಕಮ್ಮ ತನ್ನ ಮನೆದೇವರಾದ ಮಲೆ ಮಹದೇಶ್ವರನನ್ನು ಪ್ರಾರ್ಥಿಸುತ್ತಾಳೆ. ಮತ್ತು ಈಕೆಯ ನಿಷ್ಕಲ್ಮಶ ಭಕ್ತಿಗೆ ಒಲಿದ ಮಹದೇವ ಆಕೆಯ ಸಂಕಷ್ಟವನ್ನೆಲ್ಲಾ ಪರಿಹರಿಸುತ್ತಾನೆ.

15ನೇ ಶತಮಾನದಲ್ಲಿದ್ದ ಶರಣ ಮಲೆಮಹದೇಶ್ವರ ಏಳು ಮಲೆ, ಎಪ್ಪತ್ತೇಳು ಮಲೆ ನಡುವನ ವಜ್ರಮಲೆ ಅಂದರೆ ಇಂದಿನ ಮಹದೆಶ್ವರ ಬೆಟ್ಟದಲ್ಲಿ ಲಿಂಗರೂಪ ತಾಳಿ ಭಕ್ತಾದಿಗಳಿಂದ ಪೂಜೆಗೊಳ್ಳುತ್ತಿದ್ದಾನೆ.

ಮಲೆಮಹದೇಶ್ವರನ ಮಹಿಮೆಗಳನ್ನು ಕುರಿತಾದ ಕಂಸಾಳೆ ಕಾವ್ಯವನ್ನು ಕಂಸಾಳೆ ಕಲಾವಿದರು ಅನಾದಿ ಕಾಲದಿಂದಲೂ ಹಾಡುತ್ತಾಬರುತ್ತಿದ್ದಾರೆ. ಈ ಕಾವ್ಯ ಕನ್ನಡ ಜನಪದ ಕಾವ್ಯಗಳಲ್ಲೇ ದೊಡ್ಡದೆಂದು ಗುರುತಿಸಿಕೊಂಡಿದೆ. ಇದು ಏಳು ವಿಭಾಗಗಳಲ್ಲಿ ವಿಂಗಡಣೆಯಾಗಿದ್ದು ಇವುಗಳನ್ನು ಸಾಲು ಎಂದು ಕರೆಯುತ್ತಾರೆ.

ತಾಳುಗತೆ, ಶ್ರವಣದೊರೆ ಸಾಲು, ಜುಂಜೇಗೌಡನ ಸಾಲು, ಸಂಕಮ್ಮನ ಸಾಲು, ಇಕ್ಕೇರಿ ದೇವಮ್ಮನ ಸಾಲು, ಸರಗೂರಯ್ಯನ ಸಾಲು… ಹೀಗೆ ಈ ಸಾಲುಗಳಿಗೆ ಪ್ರತ್ಯೇಕವಾಗಿರುವ ಸ್ವತಂತ್ರ ಹೆಸರುಗಳೇ ಇವೆ.

ಇವುಗಳಲ್ಲಿ ಬರುವ ಸಂಕಮ್ಮನ ಸಾಲಿನ ಕಥೆಯ ಎಳೆಯನ್ನು Raper ಚಂದನ್ ಶೆಟ್ಟಿ ತನ್ನ ಹೊಸ ಆಲ್ಬಂ ಹಾಡು ‘ಕೋಲುಮಂಡೆ’ಗೆ ಬಳಸಿಕೊಂಡಿರುವುದು ಮತ್ತು ಈ ಹಾಡಿನ ಕೊನೆಯಲ್ಲಿ ಸಂಕಮ್ಮನ ನಡತೆಯ ಕುರಿತಾಗಿ ಆಕ್ಷೇಪಾರ್ಹವಾಗಿ ತೋರಿಸಿಸರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಸತ್ಯವಂತೆ ಶಿವ ಶರಣೆ ಸಂಕಮ್ಮ ಎಂಬ ಹೆಸರಿನಲ್ಲಿ ಕನ್ನಡ ಚಲನಚಿತ್ರವೂ ಸಹ ತಯಾರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next