Advertisement

ಅಂಗವಿಕಲ ಮತದಾರರ ಬಗೆಗೆ ವಿಶೇಷ ಆಸ್ಥೆ

12:49 AM Mar 25, 2019 | sudhir |

ಉಡುಪಿ: ಬುದ್ಧಿಮಾಂದ್ಯ, ಶ್ರವಣದೋಷ ಸಹಿತ ಎಲ್ಲ ರೀತಿಯ ಅಂಗವೈಕಲ್ಯ ಹೊಂದಿದವರು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ವಿಶೇಷ ಮುತುವರ್ಜಿ ವಹಿಸಿದೆ.

Advertisement

ಮತದಾನದ ಬಗ್ಗೆ ಜಾಗೃತಿ, ಆತ್ಮವಿಶ್ವಾಸ ಮತ್ತು ಯಾರ ಸಹಾಯವೂ ಇಲ್ಲದೆ ಮತದಾನ ಮಾಡುವುದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಮತದಾನ ಉದ್ದೇಶ
ಅಂಗವಿಕಲರ ಕುರಿತು ನ್ಯಾಯಾಲಯ ನೀಡುವ ಆದೇಶದಿಂದ ಅನರ್ಹರಾದವರನ್ನು ಹೊರತು ಪಡಿಸಿ ಉಳಿದ ಎಲ್ಲರೂ ಕೂಡ ಮತದಾನ ಮಾಡಲು ಅರ್ಹರಾಗಿರುತ್ತಾರೆ. ಗುರುತು ಚೀಟಿ ಹೊಂದಿರುವ ಪ್ರತಿಯೊಬ್ಬರೂ ಮತದಾನ ಮಾಡಬೇಕೆಂಬ ಉದ್ದೇಶ ಇದರದ್ದು.

ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ 7,385 ಅಂಗವಿಕಲ ಮತದಾರರಿದ್ದಾರೆ. ಇವರಲ್ಲಿ 606 ಅಂಧರು, 700 ಶ್ರವಣದೋಷವುಳ್ಳವರು, 2,028 ದೈಹಿಕ ವಿಕಲಚೇತನರು ಮತ್ತು ಬುದ್ಧಿಮಾಂದ್ಯರು ಸಹಿತ ಇತರ 3,871 ಮತದಾರರಿದ್ದಾರೆ.

701 ಗಾಲಿ ಕುರ್ಚಿಗಳು
ಅಂಗವಿಕಲರು ಮತ್ತು ಹಿರಿಯ ನಾಗರಿಕರು ಮತದಾನ ಮಾಡುವುದಕ್ಕಾಗಿ ಮತದಾನದಂದು ಜಿಲ್ಲೆಯ ಮತಗಟ್ಟೆಗಳಿರುವ ಒಂದು ಕಟ್ಟಡಕ್ಕೆ ಒಂದರಂತೆ ಒಟ್ಟು 701 ಗಾಲಿಕುರ್ಚಿಗಳನ್ನು ವಿತರಿಸಲಾಗುತ್ತದೆ. ಇದನ್ನು ಸಮೀಪದ ಗ್ರಾ.ಪಂ. ಕಚೇರಿ ಅಥವಾ ಆರೋಗ್ಯ ಕೇಂದ್ರಗಳಿಂದ ಪಡೆಯಬಹುದು.

Advertisement

ಜಿಲ್ಲಾಡಳಿತದಿಂದ ವಾಹನ ವ್ಯವಸ್ಥೆ
ದೃಷ್ಟಿ ಸಮಸ್ಯೆ ಇರುವವರಿಗೆ ಬಳಸಲು ಎಲ್ಲ ಮತಗಟ್ಟೆಗಳಿಗೆ ಭೂತಕನ್ನಡಿ ಮತ್ತು ವಾಕರ್‌ ನೀಡಲಾಗುತ್ತದೆ. ಮತದಾನ ಕೇಂದ್ರಗಳಿಗೆ ಬರುವವರಿಗೆ ಅನುಕೂಲವಾಗಲು ವಾಹನದ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ.

ಆಯೋಗಕ್ಕೆ ಸಲ್ಲಿಕೆ
ಅಂಗವಿಕಲ ಮತದಾರರ ಮಾಹಿತಿ ಪಡೆಯಲು ಜಿಲ್ಲಾಡಳಿತ ವ್ಯವಸ್ಥಿತ ಯೋಜನೆ ಹಾಕಿಕೊಂಡಿದೆ. ಮತದಾನದ ಮುನ್ನಾದಿನ ಮಸ್ಟರಿಂಗ್‌ ಕೇಂದ್ರದಿಂದ ಹೊರಡುವ ಮತಗಟ್ಟೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುತ್ತದೆ. ಅಧಿಕಾರಿಗಳು ಅದರಲ್ಲಿ ಅಂಗವಿಲರು, ಬುದ್ಧಿಮಾಂದ್ಯರು ಮತ ಚಲಾಯಿಸಿದ ವಿವರ ದಾಖಲಿಸಬೇಕಾಗುತ್ತದೆ. ಡಿಮಸ್ಟರಿಂಗ್‌ ಸಮಯದಲ್ಲಿ ಆ ವಿವರವನ್ನು ಆಯಾ ಮತಗಟ್ಟೆ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಒಪ್ಪಿಸಲಿದ್ದಾರೆ. ಬಳಿಕ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುತ್ತದೆ.

ಅಂಗವಿಕಲರಿಗೆ ವಿಶೇಷ ಮತಗಟ್ಟೆ
ಉಡುಪಿ ತಾಲೂಕಿನ ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಡಿ ಕನ್ಯಾನ 217ನೇ ಮತಗಟ್ಟೆಯನ್ನು ಅಂಗವಿಕಲರ ವಿಶೇಷ ಮತಗಟ್ಟೆ ಯಾಗಿ ಗುರುತಿಸಲಾಗಿದೆ. ಈ ಮತಗಟ್ಟೆ ವ್ಯಾಪ್ತಿಯಲ್ಲಿ ಸುಮಾರು 45 ಮಂದಿ ಅಂಗವಿಕಲ ಮತದಾರರಿದ್ದಾರೆ.ಇಲ್ಲಿ ಅಂಗವಿಕಲ ಸ್ನೇಹಿ ಶೌಚಾಲಯ, ರ್‍ಯಾಂಪ್‌ ನಿರ್ಮಿಸಲಾಗುತ್ತದೆ. ಗಾಲಿಕುರ್ಚಿ, ವಾಕರ್‌, ಭೂತಗನ್ನಡಿ ಸಹಿತ ಎಲ್ಲ ವ್ಯವಸ್ಥೆಯನ್ನೂ ಇಲ್ಲಿ ಮಾಡಲಾಗುತ್ತದೆ. ಇದಕ್ಕೆ ಸ್ಥಳೀಯ ಗ್ರಾ.ಪಂ.ನ ಶೇ.3 ಅನುದಾನ ಬಳಸಿಕೊಳ್ಳಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next