Advertisement

ರೈತರ ಪಾಲಿಗೆ ಹುಳಿಯಾದ ಟೊಮೆಟೋ

09:28 PM Dec 31, 2019 | Lakshmi GovindaRaj |

ಚನ್ನರಾಯಪಟ್ಟಣ: ಕೇವಲ ಎರಡು ತಿಂಗಳ ಹಿಂದೆ ಟೊಮೆಟೋ ಬೆಳೆದ ರೈತನಿಗೆ ಚಿನ್ನದ ಬೆಲೆ ಸಿಕ್ಕಿತು. ಆದರೀಗ ಟೊಮೆಟೋ ಬೆಳೆದವರಿಗೆ ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದಾರೆ. ತಾಲೂಕಿನಲ್ಲಿ ಕೊಳವೆ ಬಾವಿ ಹೊಂದಿರುವ ನೂರಾರು ರೈತರು ಟೊಮೆಟೋ ಬೆಳೆಗೆ ಹೆಚ್ಚು ಒತ್ತು ನೀಡುತ್ತಾರೆ.

Advertisement

ಮಾರುಕಟ್ಟೆಯಲ್ಲಿ ಕೇಜಿ ಟೊಮೆಟೋಗೆ 60ರಿಂದ 80ರೂ. ಬೆಲೆ ಬಂದಾಗ ಸಾವಿರಾರು ರೈತರು ಟೊಮೆಟೋ ಬೆಳೆದು ಹಣ ಸಂಪಾದನೆ ಮುಂದಾಗುತ್ತಾರೆ. ಈ ರೀತಿ ಒಟ್ಟಿಗೆ ಸಾವಿರಾರು ಮಂದಿ ರೈತರು ಟೊಮೆಟೋ ಬೆಳೆಗೆ ಮಾರು ಹೋಗುವುದರಿಂದ ಟೊಮೆಟೋ ಬೆಲೆ ದಿಢೀರ್‌ ಕುಸಿತವಾಗಿ 10 ರೂ.ಗೆ ಎರಡರಿಂದ ಮೂರು ಕೇಜಿ ಟೊಮೆಟೋ ಗ್ರಾಹಕರಿಗೆ ದೊರೆಯುತ್ತದೆ.

ದಿಢೀರ್‌ ಟೊಮೆಟೋ ಬೆಲೆ ಕುಸಿತ ವಾಗುವುದರಿಂದ ಒಂದು ಚೀಲ ಟೊಮೆಟೋಗೆ 30ರಿಂದ 50 ರೂ.ಗೆ ಮಾರುವುದು ಅನಿವಾರ್ಯವಾಗುತ್ತದೆ. ಇದರಿಂದ ರೈತರು ತಮ್ಮ ಕೃಷಿ ಭೂಮಿಯಿಂದ ಆಟೋದಲ್ಲಿ ಚನ್ನರಾಯಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆಗೆ ತರುವ ಬಾಡಿಗೆ ಬೆಲೆ ದೊರೆಯದೆ ಕಂಗಾಲಾಗುತ್ತಾರೆ.

ಬರಿಗೈನಲ್ಲಿ ಮನೆ ಸೇರುವ ರೈತರು: ಒಂದೆರಡು ತಿಂಗಳ ಹಿಂದೆ ಟೊಮೆಟೋ ಬೆಲೆ ಕೇಜಿಗೆ 40ರಿಂದ 70 ರೂ. ವರೆಗೆ ತಲುಪಿತ್ತು. ಈ ವೇಳೆ ಗ್ರಾಹಕರು ಟೊಮೆಟೋ ಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಆದರೀಗ ಗ್ರಾಹಕರು 10 ರೂ.ಗೆ ಮೂರು ಕೇಜಿ ಟೊಮೆಟೋ ಖರೀದಿಸುತ್ತಿದ್ದಾರೆ. ಅನ್ನದಾತ ತನ್ನ ಕೃಷಿ ಭೂಮಿಯಿಂದ ಟೊಮೆಟೋ ತಂದು ರಸ್ತೆ ಬದಿ, ಎಲ್ಲೆಂದರಲ್ಲಿ ಸುರಿದು ಬರಿಗೈನಲ್ಲಿ ಮನೆಗೆ ಹೋಗುತ್ತಿದ್ದಾನೆ.

ರಸ್ತೆ ಬದಿಗೆ ಸುರಿಯುತ್ತಿದ್ದಾರೆ: ತಿಂಗಳ ಹಿಂದೆ ರೈತರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಟೊಮೆಟೋ ತಂದರೆ ಕೇಜಿಗೆ 30 ರಿಂದ 50 ರೂ. ನೀಡಿ, ತರಕಾರಿ ಮಾರಾಟ ಮಾಡುವವರು ಮುಗಿಬಿದ್ದು ಕೊಳ್ಳುತ್ತಿದ್ದರು. ಆದರೆ ಈಗ ತರಕಾರಿ ಮಾರಾಟ ಮಾಡುವವರು ರೈತರಿಂದ ಕೊಳ್ಳುವ ಟೊಮೆಟೋ ಒಂದು ಕೇಜಿಗೆ ಒಂದು ರೂ. ನೀಡಲು ಹಿಂದೇಟು ಹಾಕುತ್ತಿದ್ದಾರೆ. 30 ಕೇಜಿ ತೂಕದ ಚೀಲಕ್ಕೆ 10 ರೂ. ನೀಡಲು ಮುಂದಾಗುತ್ತಾರೆ. ಇದರಿಂದ ಬೇಸತ್ತು ರೈತ ಟೊಮೆಟೋ ಹಣ್ಣನ್ನು ರಸ್ತೆ ಬದಿ ಸುರಿಯುತ್ತಿದ್ದಾನೆ.

Advertisement

ಎಕರೆಗೆ ಹದಿನೆಂಟು ಸಾವಿರ ರೂ. ನಷ್ಟ: ಕೃಷಿ ಭೂಮಿಯಿಂದ ಪಟ್ಟಣಕ್ಕೆ ಟೊಮೆಟೋ ತರಲು ತಗುಲುವ ವೆಚ್ಚ, ಟೊಮೆಟೋ ಗಿಡದಿಂದ ಬಿಡಿಸಿ ಚೀಲಕ್ಕೆ ತುಂಬಲು ಕೂಲಿ, ಬಿತ್ತನೆ ವೆಚ್ಚ, ಗೊಬ್ಬರ, ನೀರು, ಔಷಧಿ ಹೀಗೆ ಎಕರೆ ಪ್ರದೇಶದಲ್ಲಿ ಟೊಮೆಟೋ ಬೆಳೆಯಲು ಕನಿಷ್ಠ 20 ಸಾವಿರ ರೂ. ವೆಚ್ಚವಾಗಲಿದೆ ಆದರೆ ಈಗಿನ ಮಾರುಕಟ್ಟೆ ದರ ನೋಡಿದರೆ ಎಕರೆಗೆ 2 ಸಾವಿರ ರೂ. ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಹೊಲದಲ್ಲಿ ಟೊಮೆಟೋ ಕೊಯ್ಯದೇ ಇರುವುದರಿಂದ ಗಿಡದಲ್ಲೇ ಕೊಳೆಯುತ್ತಿವೆ.

ಸ್ಥಳೀಯ ಮಾರುಕಟ್ಟೆ ಅವಲಂಬನೆ: ಸ್ಥಳೀಯ ಮಾರುಕಟ್ಟೆ ಅವಲಂಬನೆ ಮಾಡಿಕೊಂಡು ರೈತರು ಟೊಮೆಟೋ ಬೆಳೆಯುತ್ತಿದ್ದಾರೆ. ಇದನ್ನು ಹೊರತು ಪಡಿಸಿದರೆ ಮೈಸೂರು ಇಲ್ಲವೇ ಬೆಂಗಳೂರಿಗೆ ಕಳಹಿಸಬೇಕು. ಇಲ್ಲೇ ಈ ರೀತಿ ಬೆಲೆ ಕುಸಿತವಾಗಿರುವಾಗ ಹೊರ ಜಿಲ್ಲೆಗೆ ಕೊಂಡೊಯ್ಯಲು ವಾಹನಕ್ಕೆ ನೀಡುವ ಬಾಡಿಗೆ ದೊರೆಯದಿದ್ದರೆ ಎಂಬ ಆತಂಕದೊಂದಿಗೆ ತಾಲೂಕಿನ ರೈತರು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ರೈತರಿಗೆ ಮಾರಕವಾದ ಎನ್‌ಆರ್‌ಸಿ, ಸಿಎಎ ಪ್ರತಿಭಟನೆ: ಪೌರತ್ವ ಕಾನೂನು ತಿದ್ದುಪಡಿ (ಸಿಎಎ)ಹಾಗೂ ಎನ್‌ಆರ್‌ಸಿ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿರುವುದರಿಂದ ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ಟೊಮೆಟೋ ಸರಬರಾಜಾಗದೇ ಇರುವುದೂ ಟೊಮೆಟೋ ಬೆಲೆ ದಿಢೀರ್‌ ಕುಸಿಯಲು ಕಾರಣವಾಗಿದೆ.

ಮಾರುಕಟ್ಟೆಯಲ್ಲಿ ಟೊಮೆಟೋಗೆ ಬೇಡಿಕೆ ಇದ್ದುದರಿಂದ ರೈತರು ಬ್ಯಾಂಕ್‌ಗಳಲ್ಲಿ ಕೃಷಿ ಸಾಲದೊಂದಿಗೆ ಕೈಸಾಲ ಮಾಡಿ ಟೊಮೆಟೋ ಬೆಳೆದಿದ್ದರು. ಆದರೀಗ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೇ ಸಂಕಷ್ಟ ಅನುಭವಿಸುವಂತಾಗಿದೆ.
-ಗವಿರಾಜಗೌಡ, ಟೊಮೆಟೋ ಬೆಳೆಗಾರ ರೈತ

ರೈತರೊಂದಿಗೆ ನಾವು ವಿಶ್ವಸದ ಮೇಲೆ ವ್ಯವಹಾರ ಮಾಡುತ್ತೇವೆ. ನಮ್ಮಲ್ಲಿ ಯಾವುದೂ ಕಾನೂನಿನ ಅಡಿಯಲ್ಲಿ ನಡೆಯುವುದಿಲ್ಲ. ಈಗ ಟೊಮೆಟೋ ಉತ್ಪಾದನೆ ಹೆಚ್ಚಿದ್ದು ಬೇಡಿಕೆ ಪ್ರಮಾಣ ಕಡಿಮೆ ಇದೆ. ದೇಶದಲ್ಲಿ ಎನ್‌ಆರ್‌ಸಿ, ಸಿಎಎ ಗಲಾಟೆಯಿಂದ ಹೊರ ರಾಜ್ಯಕ್ಕೆ ತರಕಾರಿ ಸರಬರಾಜಾಗುತ್ತಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
-ಶಿವರಾಜು, ತರಕಾರಿ ವರ್ತಕ

* ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next