ಬೆಂಗಳೂರು: ಜಮೀನು ಹಾಗೂ ಮನೆ ಮಾರಿದ ಹಣ ಕೊಡದಕ್ಕೆ ಹೆತ್ತ ತಾಯಿಯನ್ನೇ ಉಸಿರುಗಟ್ಟಿಸಿ ಹತ್ಯೆಗೈದ ಪುತ್ರ ಹಾಗೂ ಆತನ ಸಂಬಂಧಿಯನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೊಂಗಸಂದ್ರ ನಿವಾಸಿ ಉಮೇಶ್ (28) ಮತ್ತು ಆತನ ಸೋದರ ಸಂಬಂಧಿ ಸುರೇಶ್(43) ಬಂಧಿತರು. ಆರೋಪಿಗಳು ನ.8ರಂದು ಜಯಮ್ಮ (45) ಎಂಬಾಕೆಯನ್ನು ಹತ್ಯೆಗೈದು ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಹತ್ಯೆಗೀಡಾದ ಜಯಮ್ಮ ತಮಿಳುನಾಡು ಮೂಲದವರಾಗಿದ್ದು, ಪತಿ ಮೃತಪಟ್ಟಿದ್ದಾರೆ. ಜಯಮ್ಮಗೆ ಇಬ್ಬರು ಮಕ್ಕಳಿದ್ದು, ಹೊಂಗಸಂದ್ರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಇಬ್ಬರು ಪುತ್ರರ ಪೈಕಿ ಕಿರಿಯ ಪುತ್ರ ಗಿರೀಶ್‌ಗೆ ಕೆಲ ದಿನಗಳ ಹಿಂದಷ್ಟೇ ಕೆಎಸ್‌ಆರ್‌ಟಿಸಿಯಲ್ಲಿ ಉದ್ಯೋಗ ಸಿಕ್ಕಿದ್ದು, ಆನೇಕಲ್ ಡಿಪೋದಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿ ಉಮೇಶ್ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಮದ್ಯ ವ್ಯಸನಿಯಾಗಿದ್ದು, ಸ್ನೇಹಿತರ ಜತೆ ಸುತ್ತಾಡಿಕೊಂಡಿದ್ದ. ಹೀಗಾಗಿ ಈತನ ಬಗ್ಗೆ ಜಯಮ್ಮ ಸ್ವಲ್ಪ ನಿರ್ಲಕ್ಷಿಸಿದ್ದರು. ಇದರಿಂದ ಬೇಸರಗೊಂಡಿದ್ದ ಉಮೇಶ್, “ಕಿರಿಯ ಪುತ್ರನಿಗೆ ಹೆಚ್ಚಿನ ಆದ್ಯತೆ ಕೊಡುತ್ತಿಯಾ, ಪ್ರೀತಿಸುತ್ತಿಯಾ’ ಎಂದೆಲ್ಲ ತಾಯಿ ಜತೆ ಜಗಳ ಮಾಡುತ್ತಿದ್ದ. ಆ ಮಧ್ಯೆ ಪತಿಗೆ ಸೇರಿದ ಜಮೀನು ಮತ್ತು ಮನೆಯನ್ನು ಮಾರಿ, ಬಂದ ಹಣವನ್ನು ಬ್ಯಾಂಕ್‌ನಲ್ಲಿ ಡೆಪಾಸಿಟ್ ಇಟ್ಟಿದ್ದರು. ಈ ಹಣವನ್ನು ತನಗೆ ಕೊಡುವಂತೆ ಆರೋಪಿ ಉಮೇಶ್ ಪೀಡಿಸುತ್ತಿದ್ದ. ಆದರೆ, ಕುಡಿದು ಹಣ ಹಾಳು ಮಾಡುತ್ತಾನೆ ಎಂದು ಜಯಮ್ಮ ಕೊಟ್ಟಿರಲಿಲ್ಲ. ಅದರಿಂದ ಕೋಪಗೊಂಡಿದ್ದ ಆರೋಪಿ, ತನ್ನ ಸೋದರ ಸಂಬಂಧಿ ಸುರೇಶ್ ಜತೆ ಸೇರಿ ತಾಯಿಯನ್ನೇ ಹತ್ಯೆಗೈಯಲು ಸಂಚು ರೂಪಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.
ನ.8ರಂದು ತಡರಾತ್ರಿ ಜಯಮ್ಮ ಮನೆಯಲ್ಲಿ ಒಬ್ಬರೇ ಇದ್ದು, ಆಗ ಮನೆಗೆ ನುಗ್ಗಿದ ಆರೋಪಿಗಳು ಜಯಮ್ಮನ ಮುಖಕ್ಕೆ ಹಲ್ಲೆ ಮಾಡಿ ಬಳಿಕ ಉಸಿರುಗಟ್ಟಿಸಿ ಹತ್ಯೆಗೈದು ಪರಾರಿಯಾಗಿದ್ದರು. ಮರು ದಿನ ಮುಂಜಾನೆ ಕರ್ತವ್ಯ ಮುಗಿಸಿಕೊಂಡು ಗಿರೀಶ್ ಮನೆಗೆ ಬಂದಾಗ ತಾಯಿ ಹತ್ಯೆಯಾಗಿರುವುದು ಗೊತ್ತಾಗಿದೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ್ದರು. ಈ ವೇಳೆ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂದು ಪ್ರಾಥಮಿಕ ವರದಿ ಬಂದಿತ್ತು.
ಹೀಗಾಗಿ ಪರಿಚಯಸ್ಥರೇ ಕೃತ್ಯ ಎಸಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಇಬ್ಬರು ಪುತ್ರರು ಸೇರಿ ಸ್ಥಳೀಯರ ವಿಚಾರಣೆ ನಡೆಸಲಾಗಿತ್ತು. ಆಗ ಉಮೇಶ್ ಬಗ್ಗೆ ಅನುಮಾನಗೊಂಡು ತೀವ್ರವಾಗಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.