ಬೆಂಗಳೂರು: ಕೆ.ಆರ್.ಪುರದ ಮನೆಯೊಂದರಲ್ಲಿ ಇತ್ತೀಚೆಗೆ ನಡೆದಿದ್ದ ನೇತ್ರಾವತಿ ಎಂಬಾಕೆಯ ಕೊಲೆ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ. ಪತಿಯೇ ಕೊಲೆಗೈದಿದ್ದು, ಇದಕ್ಕೆ ಪುತ್ರ ಸಹಾಯ ಮಾಡಿದ್ದಾನೆ ಎಂಬುದು ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡ್‌ನಲ್ಲಿದ್ದ ಬೆರಳಚ್ಚಿನಿಂದ ಬೆಳಕಿಗೆ ಬಂದಿದೆ.
ಈ ಸಂಬಂಧ ಚಂದ್ರಪ್ಪ (48) ಎಂಬಾತನನ್ನು ಬಂಧಿಸಲಾಗಿದೆ.
ಫೆ.2ರಂದು ಮುಂಜಾನೆ 6 ಗಂಟೆ ಸುಮಾರಿಗೆ ಆರೋಪಿ ಚಂದ್ರಪ್ಪ ಮತ್ತು ಆತನ 17 ವರ್ಷದ ಅಪ್ರಾಪ್ತ ಪುತ್ರ ಸೇರಿ ನೇತ್ರಾವತಿಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆಗೈದಿದ್ದರು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾ ನಂದ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೋಲಾರದ ಮುಳಬಾಗಿಲು ಮೂಲದ ಚಂದ್ರಪ್ಪ ನೇತ್ರಾವತಿಯನ್ನು 19 ವರ್ಷದ ಹಿಂದೆ ಮದುವೆ ಯಾಗಿದ್ದು, ದಂಪತಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ. ಮಗ ನಗರದಲ್ಲಿ ಡಿಪ್ಲೊಮಾ ಓದುತ್ತಿದ್ದ. ಪುತ್ರಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೃಷಿ ಮಾಡುವುದು ಬೇಡವೆಂದಿದ್ದ ನೇತ್ರಾವತಿ, ಬೆಂಗಳೂರಿಗೆ ಸ್ಥಳಾಂತರವಾಗೋಣವೆಂದು ಪಟ್ಟು ಹಿಡಿದಿದ್ದರು. ಪತ್ನಿ ಹಠಕ್ಕೆ ಸೋತಿದ್ದ ಚಂದ್ರಪ್ಪ, ಕೆ.ಆರ್.ಪುರದ ಜಸ್ಟೀಸ್ ಭೀಮಯ್ಯ ಲೇಔಟ್‌ನಲ್ಲಿ ಮನೆ ಮಾಡಿದ್ದ. ಆದರೆ, ಚಂದ್ರಪ್ಪ, ಪ್ರತಿದಿನ ಮುಳಬಾಗಿಲಿನ ತೋಟಕ್ಕೆ ಹೋಗಿ ಬರುತ್ತಿದ್ದರು. ನೇತ್ರಾವತಿ ಸಾಫ್ಟ್ ವೇರ್ ಕಂಪನಿಯ ಹೌಸ್‌ಕೀಪಿಂಗ್ ವಿಭಾಗದಲ್ಲಿ ಮೇಲ್ವಿಚಾರಕಿಯಾಗಿದ್ದರು. ಈ ಮಧ್ಯೆ ಆಕೆ, ಟೆಕಿಗಳ ಜತೆ ಸೇರಿ ವಾರಾಂತ್ಯದಲ್ಲಿ ಪ್ರವಾಸಕ್ಕೆ ಹೋಗುವುದು, ಮದ್ಯ, ಸಿಗರೇಟ್ ಸೇವನೆ ಮಾಡುವುದನ್ನು ಹೆಚ್ಚಿಸಿಕೊಂಡು, ಒಮ್ಮೆ ಮನೆಯಿಂದ ಹೋದರೆ, 2-3 ದಿನಗಳ ಕಾಲ ವಾಪಸ್ ಬರುತ್ತಿರಲಿಲ್ಲ. ಅದರಿಂದ ಚಂದ್ರಪ್ಪ ಬೇಸರಗೊಂಡಿದ್ದು, ಇದೇ ವಿಚಾರಕ್ಕೆ ದಂಪತಿ ನಡುವೆ ನಿತ್ಯ ಜಗಳ ನಡೆಯುತ್ತಿತ್ತು ಎಂದು ಹೇಳಿದರು.
ಕಬ್ಬಿಣ ರಾಡ್‌ನಿಂದ ಹೊಡೆದು ಕೊಲೆ: ದುಶ್ಚಟಗಳು ಮಾತ್ರವಲ್ಲ, ನೇತ್ರಾವತಿ ಪರಪುರುಷನ ಜತೆ ಅಕ್ರಮ ಸಂಬಂಧ ಹೊಂದಿದ್ದಳು ಎಂಬ ಕಾರಣಕ್ಕೆ ಚಂದ್ರಪ್ಪ, ಪುತ್ರನ ಜತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದಾನೆ. ಫೆ.1ರಂದು ತಡರಾತ್ರಿ ಮನೆಗೆ ಬಂದಿದ್ದ ನೇತ್ರಾವತಿ ಜತೆ ಚಂದ್ರಪ್ಪ ಮತ್ತು ಪುತ್ರ ಜಗಳ ಮಾಡಿದ್ದಾರೆ. ಕೆಲ ಹೊತ್ತಿನ ಬಳಿ ನೇತ್ರಾವತಿ ಕೋಣೆಗೆ ಹೋಗಿ ಮಲಗಿದ್ದಳು. ಆಕ್ರೋಶಗೊಂಡ ಚಂದ್ರಪ್ಪ ಫೆ.2ರಂದು ಮುಂಜಾನೆ 2 ಗಂಟೆ ಸುಮಾರಿಗೆ ಕಬ್ಬಿಣದ ರಾಡ್‌ನಿಂದ ಪತ್ನಿ ಮೇಲೆ ಹಲ್ಲೆ ನಡೆಸಿ ಕೊಲೆಗೈದಿದ್ದ. ಬಳಿಕ ಇದನ್ನು ನೋಡಿದ ಪುತ್ರ “ತಾನು ಅಪ್ರಾಪ್ತ ಹೆಚ್ಚು ಶಿಕ್ಷೆಯಾಗಲ್ಲ, ಶಿಕ್ಷಣ ಸಿಗುತ್ತೆ. ಜೈಲಿಂದ ಬಂದ ಬಳಿಕ ಇಬ್ಬರೂ ನೆಮ್ಮದಿ ಜೀವನ ನಡೆಸೋಣ ಎಂದು ತಂದೆಯ ಮನವೊಲಿಸಿದ್ದ. ಕೆಲ ಹೊತ್ತಿನ ಬಳಿಕ ತಾನೇ ಪೊಲೀಸರಿಗೆ ಕರೆ ಮಾಡಿ ಶರಣಾಗಿದ್ದ. ಈ ವೇಳೆ ಊಟ ಹಾಕದ್ದಕ್ಕೆ ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದ. ನಂತರ ಕಬ್ಬಿಣದ ರಾಡ್ ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಪರಿಶೀಲಿಸಿದಾಗ, ಮತ್ತೂಬ್ಬ ವ್ಯಕ್ತಿಯ ಬೆರಳಚ್ಚು ಪತ್ತೆಯಾಗಿತ್ತು. ಅಲ್ಲದೆ, ಯುವಕನ ಹಾವಭಾವದ ಮೇಲೆ ಅನುಮಾನ ಬಂದಿತ್ತು. ಜತೆಗೆ ಚಂದ್ರಪ್ಪನ ಮೊಬೈಲ್ ನೆಟ್‌ವರ್ಕ್ ಪರಿಶೀಲಿಸಿದಾಗ ಅನುಮಾ ನಕ್ಕೆ ಪುಷ್ಟಿ ಸಿಕ್ಕಿತ್ತು. ಹೀಗಾಗಿ ತಂದೆ ಚಂದ್ರಪ್ಪನ ಬೆರಳಚ್ಚು ಪಡೆದು ಪರಿಶೀಲಿಸಿದಾಗ ತಂದೆ-ಪುತ್ರನ ಕೊಲೆ ರಹಸ್ಯ ಬಯಲಾಗಿದೆ ಎಂದು ಪೊಲೀಸರು ಹೇಳಿದರು.
ಕೊಂದಿದ್ದು ಒಳ್ಳೆಯದಾಯಿತು ಎಂದಿದ್ದ ಪುತ್ರ!: ಅಮ್ಮನನ್ನು ಅಪ್ಪ ಕೊಂದಿದ್ದನ್ನು ನೋಡಿದ ಪುತ್ರ “ಕೊಲೆ ಮಾಡಿದ್ದು ಒಳ್ಳೆಯದಾಯಿತು ಎಂದು ತಂದೆಯ ಕೈಯಲ್ಲಿದ್ದ ಕಬ್ಬಿಣದ ರಾಡ್ ಅನ್ನು ಕಸಿ ದು ಕೊಂಡಿದ್ದ. ಬಳಿಕ ನಾನು ಅಪ್ರಾಪ್ತ. ಕೊಲೆಗೈದು ಜೈಲಿಗೆ ಹೋದರೆ, ಕೆಲ ವರ್ಷಗಳ ಬಳಿಕ ಬಿಡುಗಡೆ ಮಾಡುತ್ತಾರೆ. ಜತೆಗೆ ಶಿಕ್ಷಣವೂ ಕೊಡುತ್ತಾರೆ. ನಾನು ಜೈಲಿನಿಂದ ಬರುವಷ್ಟರಲ್ಲಿ ನೀನು ಉತ್ತಮ ಜೀವನ ಕಟ್ಟಿಕೊ. ಜೈಲಿನಿಂದ ಬಂದ ಬಳಿಕ ಇಬ್ಬರು ನೆಮ್ಮದಿಯಿಂದ ಜೀವನ ನಡೆಸೋಣ ಎಂದು ತಂದೆಯ ಮನವೊಲಿಸಿದ್ದ. ಅಲ್ಲದೆ, ಕೂಡಲೇ ಮುಳಬಾಗಿಲಿಗೆ ಹೋಗುವಂತೆ ಹೇಳಿ, ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.