ತಂದೆಗೆ ಮಕ್ಕಳು ಇರುವುದು ಸಹಜ, ತಂದೆಗೆ ತಕ್ಕ ಮಗನಾಗಿ ಲೋಕದಲ್ಲಿ ಕಂಡುಬರುವುದು ಅಸಹಜವಲ್ಲವಾದರೂ ಬಲು ಅಪರೂಪ. “ಸಂಚಾರಿ ಯಕ್ಷಗಾನ ಭಂಡಾರ’ ಎಂಬ ಕೀರ್ತಿಗೆ ಭಾಜನರಾದ ದಿ| ತೋನ್ಸೆ ಕಾಂತಪ್ಪ ಮಾಸ್ಟರ್ ಅವರ ಪುತ್ರ ತೋನ್ಸೆ ಜಯಂತಕುಮಾರ್ ತಂದೆ ಹಾಕಿಕೊಟ್ಟ ಮಾರ್ಗದಲ್ಲೇ ಮುನ್ನಡೆದು ಅದೇ ಕೀರ್ತಿಗೆ ಭಾಜನರಾದವರು.
ಸಂಜೆ ವೇಳೆ ವಿವಿಧ ಊರುಗಳ ಸಂಘ-ಸಂಸ್ಥೆಗಳ ಸದಸ್ಯರಿಗೆ ಯಕ್ಷಗಾನ ಕಲೆಯನ್ನು ಆಸಕ್ತರಿಗೆ ಕಲಿಸುವುದು, ಮಧ್ಯರಾತ್ರಿ ಅಲ್ಲೇ ಮಲಗುವುದು, ಬೆಳಗ್ಗೆದ್ದು ಮನೆಗೆ ತೆರಳಿ ಜೀವನ ನಿರ್ವಹಣೆಯ ಉದ್ಯೋಗದಲ್ಲಿ ತೊಡಗುವುದು, ಸಂಜೆ ಮತ್ತೆ ಯಥಾಪ್ರಕಾರ ಯಕ್ಷಗಾನ ಕಲಿಸಲು ಮತ್ತೆ ಹಳ್ಳಿಗಳಿಗೆ ಹೆಜ್ಜೆ ಹಾಕುವುದು… ಇದನ್ನು 70-80 ವರ್ಷಗಳ ಹಿಂದೆ ಕಾಂತಪ್ಪ ಮಾಸ್ಟರ್ ಮಾಡುತ್ತಿದ್ದರೆ, ಸುಮಾರು 50 ವರ್ಷಗಳಿಂದ ಜಯಂತ ಕುಮಾರ್ ಮಾಡುತ್ತಿದ್ದರು. ವ್ಯತ್ಯಾಸ ಬಹಳವೇನಿಲ್ಲ.
ಹಿಂದೆ ರಸ್ತೆ, ವಾಹನ ಇತ್ಯಾದಿ ಸೌಲಭ್ಯಗಳಿರಲಿಲ್ಲ, ಈಗ ಅದು ಮೇಲ್ದರ್ಜೆಗೇರಿದೆ. ಒಂದೊಂದೂರಿನಲ್ಲಿ ಒಂದೊಂದು ರಾತ್ರಿ ಕಳೆಯುವ, ಏತನ್ಮಧ್ಯೆ ರಾತ್ರಿ ಊಟ, ಬೆಳಗ್ಗಿನ ಸ್ನಾನ, ಶೌಚಗಳನ್ನು ಆಯಾ ಸಂಘಗಳಲ್ಲಿ ನಿರ್ವಹಿಸಬೇಕಾದ ಅಥವಾ ಸಮೀಪದ ಊರಾದರೆ ಮಧ್ಯರಾತ್ರಿ ಸಾಮಾನ್ಯ ದ್ವಿಚಕ್ರ ವಾಹನದಲ್ಲಿ ಹಿಂದಿರುಗುವ ಮಾನಸಿಕತೆ ಹೊರಪ್ರಪಂಚದ ಮೂಲಸೌಕರ್ಯ ವೃದ್ಧಿಯಿಂದ ಸಿದ್ಧಿಸುವಂಥದ್ದೆ? ದಶಕಗಳ ಕಾಲದ ಈ ಸಂಸ್ಕೃತಿ, ಕಲಾ-ಕಲಾವಿದರ ಮೇಲಿನ ನಿರಂತರ ಪ್ರೀತಿ, ವಿಶ್ವಾಸಗಳಿಗೆ ಈಗ ಕಂಡುಬರುತ್ತಿರುವ ಧನದಾಸೆ, ಅಂತಸ್ತಿನಾಸೆ, ಪ್ರತಿಷ್ಠೆಯಾಸೆ ಯಾವುದೂ ಅಡ್ಡಿ ಬರಲಿಲ್ಲ. ಇದೆಲ್ಲವೂ ದೊಡ್ಡ ದೊಡ್ಡ ಡಿಗ್ರಿ, ಹುದ್ದೆಗಳನ್ನು ಹೊತ್ತುಕೊಳ್ಳದೆ ಸಾಮಾನ್ಯನಾಗಿ ಸಾಧಿಸಿದ್ದು ಎನ್ನುವುದು ಉಲ್ಲೇಖನೀಯ.
ಸಿಂಡಿಕೇಟ್ ಬ್ಯಾಂಕ್‌ನ ಮಹಿಳಾ ಸಿಬಂದಿಗೂ ಯಕ್ಷಗಾನ ಕಲಿಸಿ ಅವರಿಂದಲೇ ಯಕ್ಷಗಾನ ಪ್ರದರ್ಶನ ನಡೆಸಿದರು. ಕಲಾವಿದರಿಗೆ ಜಾತಿ, ಮತಗಳ ಭೇದವಿಲ್ಲ ಎಂಬುದನ್ನು ಸಾರ್ವತ್ರಿಕವಾಗಿ ಎಲ್ಲ ರಂಗಭೂಮಿಯವರೂ ಒಪ್ಪಿಕೊಂಡು ಬಂದಿದ್ದಾ ದರೂ ಆಗಾಗ್ಗೆ ಈ “ವಿಷಸರ್ಪ’ ಭುಸ್ಸೆನ್ನುವುದಿದೆ, ಇಂತಹ ಸಂದರ್ಭದಲ್ಲಿ ಈ ಮಾಲಿನ್ಯದಿಂದ ದೂರ ಉಳಿದ ಜಯಂತಕುಮಾರ್ ಅವರ ನಿರ್ಲಿಪ್ತತೆ ಆದರ್ಶಪ್ರಾಯವಾಗಿ ಕಾಣುತ್ತದೆ.
ಯಕ್ಷಗಾನದಂತಹ ಪಾರಂಪರಿಕ ವಿದ್ಯೆಗೆ ಯಾವತ್ತೂ ತಂದೆಯೇ ಮಕ್ಕಳಿಗೆ ಪ್ರಾರಂಭಿಕ ಗುರುಗಳಾಗಿರುತ್ತಾರೆ. ಇದಕ್ಕೆ ಕಾಂತಪ್ಪ ಮಾಸ್ಟರ್, ಜಯಂತಕುಮಾರ್ ಹೊರತಲ್ಲ. ಮುಂದಿನ ಹಂತದ ಭಾಗವತಿಕೆಯನ್ನು ನಾರ್ಣಪ್ಪ ಉಪ್ಪೂರು ಅವರಲ್ಲಿ, ಮದ್ದಳೆಯನ್ನು ಬೇಳಂಜೆ ತಿಮ್ಮಪ್ಪ ನಾಯ್ಕರಲ್ಲಿ, ಚೆಂಡೆಯನ್ನು ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಕಲಿತರು. ಹಂಗಾರಕಟ್ಟೆ ಚೇತನಾ ಪ್ರೌಢಶಾಲೆಯಲ್ಲಿ ಶಿಕ್ಷಕೇತರ ಉದ್ಯೋಗಿಯಾಗಿದ್ದರೂ ಅವರು ಯಕ್ಷಗಾನದ ಅರ್ಥಗಾರಿಕೆ, ಭಾಗವತಿಕೆ, ಸ್ತ್ರೀವೇಷ, ಎರಡನೆಯ ವೇಷ, ಚೆಂಡೆ, ಮದ್ದಳೆ, ಹೆಜ್ಜೆ ಹೀಗೆ ಬಹು ಆಯಾಮಗಳನ್ನು ಆರ್ಜಿಸಿಕೊಂಡು ಸವ್ಯಸಾಚಿಯಾಗಿ ಬೆಳೆದರು, ಆದರೆ ಸರಳತೆಯನ್ನು ಮೈಗೂಡಿಸಿಕೊಂಡ ಅವರು ಈಗ ಲೋಕದಲ್ಲಿ ಕಾಣುತ್ತಿರುವ ಹೈಫೈ, ಹೈಟೆಕ್ ಅಂತಸ್ತನ್ನು ಗಳಿಸಲಿಲ್ಲವಾದರೂ ಉದ್ಯಾವರ, ಕುತ್ಪಾಡಿ, ಹೇರೂರು, ಕಾವಡಿ, ಮಟಪಾಡಿ, ಕಡೆಕಾರು ಹೀಗೆ ಹತ್ತಾರು ಊರುಗಳಲ್ಲಿ ನೂರಾರು ಕಲಾವಿದರ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದರು.
ಈ ಸಾಮಾನ್ಯ ಜೀವನದ ನಡುವೆಯೂ ಹಲವು ಸಂಘ-ಸಂಸ್ಥೆಗಳು ಜಯಂತ ಕುಮಾರರನ್ನು ಗೌರವಿಸಿರುವುದು ನಿಸ್ವಾರ್ಥಿಯೊಬ್ಬರಿಗೆ ಸಮಾಜ ಸಲ್ಲಿಸಿದ ಗೌರವವೆಂದೇ ಅವರು ಗತಿಸಿದ ಬಳಿಕ ಪ್ರಜ್ಞಾ ಪೂರ್ವಕವಾಗಿ ತಿಳಿಯಬೇಕಾಗುತ್ತದೆ.
ಮಟಪಾಡಿ ಕುಮಾರಸ್ವಾಮಿ