ನರಗುಂದ: ಒಗ್ಗಟ್ಟಿನಲ್ಲಿ ಬಲವಿದೆ ಎಂಬ ನಾಣ್ಣುಡಿ ಭದ್ರ ಬುನಾದಿಯಾಗಲಿ. ಸಂಘಟನೆಗೆ ಒಗ್ಗಟ್ಟಿನ ಶಕ್ತಿ ತುಂಬಿದರೆ ನಿಮ್ಮ ಹೋರಾಟ ಗುರಿ ತಲುಪಲು ಸಾಧ್ಯ ಎಂದು ಸ್ಥಳೀಯ ಪುಣ್ಯಾರಣ್ಯ ಪತ್ರಿವನಮಠದ ಶ್ರೀ ಗುರುಸಿದ್ಧವೀರ ಶಿವಾಚಾರ್ಯರು ತಿಳಿಸಿದರು.
ಶನಿವಾರ ಪಟ್ಟಣದ ಪತ್ರಿವನಮಠದಲ್ಲಿ ನೂತನವಾಗಿ ನರಗುಂದ ತಾಲೂಕ ಅನುದಾನ ರಹಿತ ಪ್ರಾಥಮಿಕ-ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ ಶಿಕ್ಷಕರ ಸಂಘ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಧ್ಯಮಿಕ ಶಾಲಾ ಶಿಕ್ಷಕರ, ನೌಕರರ ಸಂಘದ ತಾಲೂಕು ಅಧ್ಯಕ್ಷ ಝಡ್. ಎಂ.ಖಾಜಿ ಮಾತನಾಡಿ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಉಲ್ಲೇಖವಿದ್ದರೂ ಅದು ಸಿಗುತ್ತಿಲ್ಲ. ಸಂಘಟಿತರಾಗಿ ಹೋರಾಟ ಮಾಡುವುದು ಅಗತ್ಯವಿದೆ ಎಂದು ಹೇಳಿದರು.
ಉಪನ್ಯಾಸ ನೀಡಿದ ಪ್ರೊ.ಆರ್.ಬಿ.ಚಿನಿವಾಲರ, ಬದಲಾವಣೆಯಲ್ಲಿ ನಮ್ಮ ಬದುಕು ಕಟ್ಟಿಕೊಳ್ಳಬೇಕು. ಅದರಲ್ಲಿ ಸಹನೆ, ತಾಳ್ಮೆ ಪ್ರಮುಖವಾಗಿದ್ದರೆ ಯಶಸ್ಸು ನಿಶ್ಚಿತ. ಒಬ್ಬ ವ್ಯಕ್ತಿಗೆ ಆಗಲಾರದ್ದನ್ನು ಹಲವರು ಸೇರಿ ಮಾಡಿ ಯಶಸ್ಸು ಸಾಧಿ ಸುವುದು ಸಂಘಟನೆ ಗುರಿಯಾಗಿದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಎಸ್.ಜಿ.ಜಕ್ಕಲಿ ಮಾತನಾಡಿ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೊಳಪಡಿಸುವ ಹೋರಾಟ ನಮ್ಮದಾಗಿದೆ. ಇದಕ್ಕಾಗಿ ನಾವೆಲ್ಲ ಸಂಘಟಿತರಾಗಬೇಕಾಗಿದೆ. ಎಲ್ಲ ಶಾಲಾ ಮುಖ್ಯ ಶಿಕ್ಷಕರು ಜವಾಬ್ದಾರಿ ಹೊರಬೇಕು. ಬಂಡಾಯ ನಾಡಿನ ಕೂಗು ಜಿಲ್ಲೆಯಲ್ಲಿ ಸಂಘಟನಾತ್ಮಕ ಶಕ್ತಿಗೆ ಪ್ರೇರಣೆಯಾಗಲಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನೂತನ ಸಂಘದ ಪದಾಧಿಕಾರಿಗಳ ನಾಮಫಲಕವನ್ನು ಪೂಜ್ಯ ಗುರುಸಿದ್ಧವೀರ ಶಿವಾಚಾರ್ಯರು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಬಿ.ಎಂ.ಬೀರನೂರ, ಎಸ್.ಬಿ.ಪಾಟೀಲ, ಜಿ.ಎನ್.ದೊಡ್ಡಲಿಂಗಪ್ಪನವರ, ವಿ.ಆರ್.ಶಿರುಂದಮಠ, ಪಿ.ಎಸ್.ರಾಮದುರ್ಗ, ಬಿ.ವೈ.ಹಲಕುರ್ಕಿ, ಬಿ.ಆರ್. ಉಮಚಗಿ, ಪಿ.ಎನ್.ವೀರಾಪೂರ, ಎಂ.ಆರ್.ಜವಳಿ, ಪಿ.ಎಸ್.ಕವಲೂರ, ಪಿ.ಎಂ.ವೀರಾಪೂರ, ಪವಿತ್ರಾ ಜಾಧವ, ಎಸ್.ಪಿ.ಇಟಗಿ, ಪಿ.ವಿ.ಕೆಂಚನಗೌಡ್ರ ವೇದಿಕೆಯಲ್ಲಿದ್ದರು.