ಕುಂದಾಪುರ: ಬೆಂಗಳೂರಿನಿಂದ ಕುಂದಾಪುರಕ್ಕೆ ಖಾಸಗಿ ಬಸ್‌ನಲ್ಲಿ ಪ್ರಯಾಣ ಬೆಳೆಸಿದ್ದ ಸಾಫ್ಟ್ ವೇರ್ ಉದ್ಯೋಗಿಯೊಬ್ಬರು ಬಸ್‌ನಲ್ಲೇ ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ಜೂ. 16ರಂದು ನಡೆದಿದೆ. ಕೋಟೇಶ್ವರ ಕುಂಬ್ರಿ ನಿವಾಸಿ ವಿಷ್ಣು ಮೂರ್ತಿ ಆಚಾರ್ಯ ಅವರ ಪುತ್ರ ಚೈತನ್ಯ ಕುಮಾರ್ (25) ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆದು ಕಳೆದ 2 ವರ್ಷಗಳಿಂದ ಬೆಂಗಳೂರಿನ ಮಾರತಹಳ್ಳಿಯಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿ ದುಡಿಯುತ್ತಿದ್ದರು.
ಕೆಲಸ ಕಡಿಮೆ ಇರುವ ಕಾರಣ ಮನೆಗೆ ಬರುವುದಾಗಿ ತಿಳಿಸಿದ್ದ ಚೈತನ್ಯ ಆನ್‌ಲೈನ್‌ನಲ್ಲಿ ಬಸ್ ಟಿಕೆಟ್ ಕಾದಿರಿಸಿದ್ದರು. ಸೋಮವಾರ ರಾತ್ರಿ ಖಾಸಗಿ ಬಸ್‌ನಲ್ಲಿ ಊರಿಗೆ ತೆರಳಿದ್ದ ಅವರು ಬೆಳಗ್ಗೆ 6.30ರ ಸುಮಾರಿಗೆ ಕರೆಮಾಡಿ ಬಾರ್ಕೂರು ಸಮೀಪ ಬರುತ್ತಿರುವುದಾಗಿ ತಿಳಿಸಿದ್ದರು. ಕೋಟೇಶ್ವರದಲ್ಲಿ ಇಳಿಯದೇ ಕುಂದಾಪುರದ ಆಸ್ಪತ್ರೆಗೆ ಕರೆದೊಯ್ಯಿರಿ, ಎದೆ ನೋವಿದೆ ಎಂದು ಬಸ್‌ನವರಲ್ಲಿ ಮಾಹಿತಿ ನೀಡಿದರು. ಕುಂದಾಪುರದಲ್ಲಿ ಇಳಿಯದ ಹಿನ್ನೆಲೆಯಲ್ಲಿ ನಿರ್ವಾಹಕ ಹತ್ತಿರ ಬಂದಾಗ ಅಸ್ವಸ್ಥಗೊಂಡು ಮಲಗಿದ್ದರು ಎನ್ನಲಾಗಿದೆ. ಅನಂತರ ಮನೆಯವರ ಕರೆ ಸ್ವೀಕರಿಸಿ, ಚಿಕಿತ್ಸೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತು.
ಸರಕಾರಿ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಟಾಗಿದ್ದು ಅಲ್ಲೇ ಸಮೀಪದಲ್ಲಿದ್ದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಚೈತನ್ಯ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದರು. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇಲ್ನೋಟಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೃತ ಚೈತನ್ಯ ಅವರು ತಂದೆ, ತಾಯಿ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
ಎರಡನೆ ಘಟನೆ
ಕೆಲವು ತಿಂಗಳ ಹಿಂದೆ ಖಾಸಗಿ ಬಸ್‌ನಲ್ಲಿ ಬೆಂಗಳೂರಿನಿಂದ ಕುಂದಾಪುರಕ್ಕೆ ಬರುತ್ತಿದ್ದ ಸುಹಾಸ್ ಎಸ್. ಮಯ್ಯ (22) ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು.
ಆಕ್ರೋಶ: ಕುಂದಾಪುರ ಸರಕಾರಿ ಆಸ್ಪತ್ರೆಯಿಂದ ಪರೀಕ್ಷಿಸದೇ ಕಳುಹಿಸಿದ್ದಕ್ಕೆ ಹೆತ್ತವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.