Advertisement

ಮನೆಯೊಲ್ಲೊಬ್ಬಳು ಪುಟ್ಟಿ ಟೀಚರ್‌!

06:00 AM Aug 09, 2018 | |

“ಸಿಂಧು… ಸಿಂಧು ಪುಟ್ಟ… ಎಲ್ಲಿದ್ದೀಯ?’ ಎಂದು ಅಮ್ಮ ಕೂಗಿ ಕರೆದರು. ಉತ್ತರವೇ ಇಲ್ಲ! ಅವರಿಗೆ ಗಾಬರಿಯಾಯಿತು. ಎಲ್ಲಿ ಹೋಗಿರಬಹುದು ಎಂದು ಊಹಿಸುತ್ತಾ ಮನೆಯ ಗೇಟಿನ ಬಳಿ ಬಂದರು. ಅಲ್ಲಿ ಅವರಿಗೊಂದು ಆಶ್ಚರ್ಯ ಕಾದಿತ್ತು. ಸಿಂಧು ಪುಟ್ಟಿ ಕಸವನ್ನೆಲ್ಲ ರಾಶಿ ಹಾಕಿಕೊಂಡು, ಅದರ ಪಕ್ಕದಲ್ಲೇ ಕುಳಿತಿದ್ದಳು!

Advertisement

 ಬೆಳಿಗ್ಗೆ ಏಳರ ಸಮಯ. ಸಿಂಧು ಶಾಲೆಗೆ ಹೊರಡಲು ತಯಾರಾಗುತ್ತಿದ್ದಳು. ಅಮ್ಮ ಅಡುಗೆ ಮನೆಯ ಕೆಲಸದಲ್ಲಿ ನಿರತರಾಗಿದ್ದರು. ನಗರಪಾಲಿಕೆಯ ವಾಹನ ಸದ್ದು ಮಾಡುತ್ತ ಬಂದು ನಿಂತಿತು. ನಗರಪಾಲಿಕೆಯ ಕಸ ತೆಗೆದುಕೊಳ್ಳುವ ಭಾವನಮ್ಮ ಸೀಟಿ ಊದಿದಳು. ಅದು ಎಲ್ಲರಿಗೂ ಕಸವನ್ನು ಗಾಡಿಯಲ್ಲಿ ಹಾಕುವುದಕ್ಕೆ ಸೂಚನೆಯಾಗಿತ್ತು. ಅಡುಗೆ ಮನೆಯಿಂದ ಅಮ್ಮ ಹೇಳಿದಳು “ಸಿಂಧು, ಹಿಂದೆ ಕಸದ ಚೀಲ ಇದೆ, ಅದನ್ನು ಭಾವನಮ್ಮನಿಗೆ ಕೊಟ್ಟು ಬಾ. ಯೂನಿಫಾರ್ಮ್ ಹಾಕಿದ್ದೀಯ, ಜೋಕೆ. ದೂರದಿಂದಲೇ ಕಸ ಹಾಕು, ತಿಳಿಯಿತಾ?’ “ಸರಿ ಅಮ್ಮ’ ಎನ್ನುತ್ತ ಸಿಂಧು ಭಾವನಮ್ಮಳಿಗೆ ಕಸ ಕೊಡಲು ಓಡಿದಳು.

 ಅಮ್ಮ ಅಡುಗೆ ಕೆಲಸಗಳನ್ನೆಲ್ಲ ಮುಗಿಸಿದರು. ಸಿಂಧುವಿಗೆ ಮಧ್ಯಾಹ್ನದ ಊಟದ ಡಬ್ಬವನ್ನು ತುಂಬಿದರು. ಶಾಲೆಗೆ ತಡವಾಗುತ್ತಿತ್ತು. ಸಿಂಧುವಿನ ಜಡೆ ಬಾಚಬೇಕಿತ್ತು. ಎಲ್ಲಿ ಹುಡುಗಿ ಅಂತ ನೋಡಿದರೆ ಅವಳು ಎಲ್ಲೂ ಕಾಣಿಸಲಿಲ್ಲ. ಅಮ್ಮನಿಗೆ ಆಶ್ಚರ್ಯವಾಯಿತು. “ಸಿಂಧು… ಸಿಂಧು ಪುಟ್ಟ… ಎಲ್ಲಿದ್ದೀಯ?’ಎಂದು ಕೂಗಿ ಕರೆದರು. ಉತ್ತರವೇ ಇಲ್ಲ! ಅಮ್ಮನಿಗೆ ಗಾಬರಿಯಾಯಿತು. ಎಲ್ಲಿ ಹೋಗಿರಬಹುದು ಎಂದು ಊಹಿಸುತ್ತಾ  ಮನೆಯ ಗೇಟಿನ ಬಳಿ ಬಂದರು. ಅಲ್ಲಿ ಅವರಿಗೊಂದು ಆಶ್ಚರ್ಯ ಕಾದಿತ್ತು. ಸಿಂಧು ಕಸವನ್ನೆಲ್ಲ ರಾಶಿ ಹಾಕಿಕೊಂಡು, ಅದರ ಪಕ್ಕದಲ್ಲಿ ಕುಳಿತುಕೊಂಡು ತನ್ನಷ್ಟಕ್ಕೆ ಗೊಣಗಿಕೊಳ್ಳುತ್ತಿದ್ದಾಳೆ! ಹಸಿರು, ಕೆಂಪು ಹಳದಿ ಪ್ಲಾಸ್ಟಿಕ್‌ ಕಸದ ಡಬ್ಬಗಳನ್ನೂ ಮುಂದೆ ಇಟ್ಟುಕೊಂಡಿದ್ದಾಳೆ! 

ಏನು ಮಾಡುತ್ತಿದ್ದಾಳೆ ನೋಡೋಣ ಎಂದು ಅಮ್ಮ ಮರೆಯಲ್ಲಿ ನಿಂತರು. ಗೇಟಿನ ಆಚೆ ಕಡೆ ಭಾವನಮ್ಮ ನಿಂತಿದ್ದರು. ಮರೆಯಲ್ಲಿ ನಿಂತಿದ್ದ ಅಮ್ಮ ಕಿವಿ ನಿಮಿರಿಸಿಕೊಂಡು ಅವರ ಸಂಭಾಷಣೆಯನ್ನು ಕೇಳಿಸಿಕೊಳ್ಳಲು ಪ್ರಯತ್ನಿಸಿದರು. ಸಿಂಧೂ ತನ್ನಷ್ಟಕ್ಕೇ ಮಾತಾಡಿಕೊಳ್ಳುತ್ತಿದ್ದಳು “ಇದು ತರಕಾರಿ ಕಸ. ಇದನ್ನು ಹಸಿರು ಡಬ್ಬಕ್ಕೆ ಹಾಕಬೇಕು. ಇದು ಕಾಗದದ ಚೂರು. ಇದು ಒಣಗಿದ ಕಸದ ಜೊತೆಯಲ್ಲಿರಲಿ. ಹಾಂ! ಇದು ಔಷಧಿಯ ಬಾಟಲ್ಲು! ಇದು ಈ ಹಳದಿ ಡಬ್ಬದಲ್ಲಿರಲಿ. ಉಳಿದ ಅನ್ನ ಸಾಂಬಾರು ಎಲ್ಲ ಇಲ್ಲೇ ಸುರಿದಿದ್ದಾರೆ. ಛಿ! ಆಗಲೇ ವಾಸನೆ ಬರುತ್ತಿದೆ. ಇದೂ ಹಸಿರು ಡಬ್ಬಕ್ಕೇ ಹೋಗಲಿ. ಅಯ್ಯೋ ದೇವರೇ, ಇಷ್ಟು ಪ್ಲಾಸ್ಟಿಕ್‌ ಕವರುಗಳು! ಈ ಅಮ್ಮನಿಗೂ ಬುದ್ಧಿ ಇಲ್ಲ. ಈ ಪ್ಲಾಸ್ಟಿಕ್‌ ಕವರುಗಳನ್ನೆಲ್ಲ ಬೇರೆ ಇಡ್ತೀನಿ.’ 

ಸಿಂಧುವನ್ನು ಹೊಸ ಅವತಾರದಲ್ಲಿ ನೋಡಿ ಅಮ್ಮ ಅವಾಕ್ಕಾದರು. ಮರೆಯಿಂದ ಹೊರಬಂದು “ಸಿಂಧು ಪುಟ್ಟ, ಇಲ್ಲಿ ಏನು ಮಾಡುತ್ತಿದ್ದೀ?’ ಎಂದು ಕೇಳಿದರು. ಭಾವನಮ್ಮ ತಮಾಷೆ ನೋಡುತ್ತ ನಿಂತಿದ್ದರು. ಸಿಂಧು ಅಮ್ಮನನ್ನು ನೋಡುತ್ತ ಎದ್ದು ನಿಂತು ಹೇಳಿದಳು, “ಅಮ್ಮ, ಕಸ ಎಲ್ಲ ನಾನು ಬೇರೆ ಬೇರೆ ಮಾಡಿದ್ದೇನೆ. ಪ್ರತಿದಿನ ಹೀಗೆ ಬೇರೆ ಬೇರೆ ಮಾಡಿಯೇ ಕಸ ಹಾಕಬೇಕಂತೆ, ನಮ್ಮ ಮಿಸ್ಸು ಹೇಳಿದ್ದಾರೆ. ಭಾವನಮ್ಮ, ನೀನೂ ಎಲ್ಲರಿಗೂ ಹೇಳಬೇಕು ಅಲ್ಲವ? ಈಗ ಕಸ ಎಲ್ಲ ತಯಾರು. ತಗೊಂಡು ಹೋಗು’. 

Advertisement

ಅಮ್ಮನನ್ನು ಕಂಡು ಭಾವನಮ್ಮ ಏನೋ ಹೇಳಲು ಹೊರಟಳು. “ಏನೂ ಹೇಳಬೇಡ ಭಾವನಮ್ಮ. ನಮ್ಮ ಸಿಂಧು ಇವತ್ತು ನನಗೇ ಪಾಠ ಕಲಿಸಿದ್ದಾಳೆ! ನಮ್ಮ ಮನೆಯ ಮಿಸ್ಸು ಹೇಳಿದಂಗೇ ನಾವು ಕೇಳ್ಳೋದು. ಅಲ್ಲವ ಸಿಂಧು ಮಿಸ್‌!!’ ಎಂದರು ಅಮ್ಮ. ಸಿಂಧು ಪುಟ್ಟಿ ಕಿಲ ಕಿಲನೆ ನಕ್ಕಳು. “ಬೇಗ ಬಾ ಶಾಲೆಯ ಆಟೋ ಬರುವ ಸಮಯವಾಯಿತು’ ಎನ್ನುತ್ತ ಲಗುಬಗೆಯಿಂದ ಅಮ್ಮ ಸಿಂಧುವನ್ನು ಮನೆಯ ಒಳಗೆ ಕರೆದುಕೊಂಡು ಹೋದರು. ಹೋಗುವಾಗಲೂ ಸಿಂಧು, ಕಸ ಎತ್ತುತ್ತಿದ್ದ ಭಾವನಮ್ಮಳನ್ನೇ ನೋಡುತ್ತಿದ್ದಳು!

ಮತ್ತೂರು ಸುಬ್ಬಣ್ಣ 

Advertisement

Udayavani is now on Telegram. Click here to join our channel and stay updated with the latest news.

Next