ಇದು ಟರ್ಕಿ ದೇಶದ ಅನಾಮಿಕನೊಬ್ಬ ಹೇಳಿದ ಕತೆ. ಒಬ್ಟಾನೊಬ್ಬ ರಾಜನಿದ್ದ. ಅವನ ಹೆಸರು ಆರಿಲ್‌ಷಾ. ಅವನಿಗೆ “ಶಾಂತಿ’ಯ ಬಗ್ಗೆ ತಿಳಿಯಲು ಕುತೂಹಲ ಉಂಟಾಯಿತು. “ಶಾಂತಿಯನ್ನು ಯಾರಾದರೂ ಚಿತ್ರದಲ್ಲಿ ತೋರಿಸಿಕೊಡುವಿರಾ?’ ಎಂದು ಆಸ್ಥಾನ ಕಲಾವಿದರಲ್ಲಿ ಕೇಳಿದ.
ಅನೇಕ ಕಲಾವಿದರು ಚಿತ್ರಗಳನ್ನು ಬರೆದು ತಂದರು. ರಾಜನಿಗೆ ಇಬ್ಬರು ಬರೆದ ಚಿತ್ರಗಳು ಮಾತ್ರ ಇಷ್ಟವಾದವು. ಒಂದರಲ್ಲಿ ಶಾಂತ ಸರೋವರವಿತ್ತು. ಅದು ಸುತ್ತ ಇದ್ದ ಪರ್ವತಗಳನ್ನು ಪ್ರತಿಫಲಿಸುತ್ತಿತ್ತು. ಬೆಟ್ಟದ ಮೇಲೆ ನೀಲಾಕಾಶ ಕಾಣುತ್ತಿತ್ತು. ಅದು ಶಾಂತಿಯ ಪರಿಪೂರ್ಣವಾದ ದೃಶ್ಯವಾಗಿತ್ತು.
ಎರಡನೇ ಚಿತ್ರ ಕೊಂಚ ಭಿನ್ನವಾಗಿತ್ತು. ಮೇಲೆ ವ್ಯಗ್ರವಾದ ಆಕಾಶವಿತ್ತು. ಕೆಳಗೆ ಬೆಟ್ಟವಿತ್ತು. ಅದರಿಂದ ಮಳೆ “ಧೋ’ ಅಂತ ಸುರಿಯುತ್ತಿತ್ತು. ಮಿಂಚು ಹೊಳೆಯುತ್ತಿತ್ತು. ಗುಡುಗು ಗುಡುಗುತ್ತಿತ್ತು. ಇದರಲ್ಲಿ ಯಾವುದೇ ಶಾಂತಿಯ ಸೂಚನೆ ಇದ್ದಂತಿರಲಿಲ್ಲ.
ಆದರೆ, ಸೂಕ್ಷ್ಮವಾಗಿ ನೋಡಿದಾಗ ಅಲ್ಲಿದ್ದ ಬಂಡೆಯ ಸಂದಿಯಲ್ಲಿ ಸಣ್ಣದೊಂದು ಪೊದೆ ಬೆಳೆದಿತ್ತು. ಅದರಲ್ಲಿ ಪುಟ್ಟ ಹಕ್ಕಿಯೊಂದು ಗೂಡು ಕಟ್ಟಿತ್ತು. ಮಳೆನೀರು ಧಸಧಸ ಸದ್ದು ಮಾಡಿ ಬೀಳುತ್ತಿದ್ದರೆ, ಹಕ್ಕಿ ಮಾತ್ರ ಪುಟ್ಟ ಗೂಡಿನಲ್ಲಿ ಕುಳಿತಿತ್ತು- ಶಾಂತವಾಗಿ. ರಾಜ ಎರಡನೆಯ ಚಿತ್ರವನ್ನು ಅತ್ಯುತ್ತಮವೆಂದು ಆಯ್ಕೆ ಮಾಡಿದ.
ಜೀವಿತಾ ಕೆ.