ಬೆಂಗಳೂರು: ದವಸ-ಧಾನ್ಯಗಳನ್ನು ಮನೆಯಲ್ಲಿಯೇ ಹಿಟ್ಟು ಮಾಡುವ ಗಿರಣಿ ಯಂತ್ರವನ್ನು ಖಾಸಗಿ ಸಂಸ್ಥೆಯೊಂದು ಅಭಿವೃದ್ಧಿಪಡಿಸಿದ್ದು, ಕೃಷಿಮೇಳದಲ್ಲಿ ಎಲ್ಲರ ಆಕರ್ಷಣಿಯವಾಗಿದೆ.
ಇತ್ತೀಚಿನ ದಿನಗಳಲ್ಲಿ ನಗರ ಭಾಗಗಳಲ್ಲಿ ಫ್ಲೋರ್ ಮಿಲ್‌ಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಜನರು ರೆಡಿಮೇಡ್ ಉತ್ಪನ್ನಗಳಿಗೆ ಮಾರು ಹೋಗುತ್ತಿದ್ದಾರೆ. ಇದರಿಂದಾಗಿ ಗುಣಮಟ್ಟದ ಉತ್ಪನ್ನಗಳು ದೊರೆಯದಂತಾಗಿದೆ. ಕಲಬೆರಕೆ ಉತ್ಪನ್ನಗಳ ಸೇವನೆಯಿಂದ ಜನರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಆ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಎಲ್ಲ ರೀತಿಯ ದವಸ ಧಾನ್ಯಗಳನ್ನು ಬೀಸುವ ಯಂತ್ರವನ್ನು ಅಭಿವೃದ್ಧಿ ಮಾಡಿದ್ದು, ಹುಬ್ಬಳಿ ಮೂಲದ ವ್ಯಾಪಾರಿಗಳು ಕೃಷಿ ಮೇಳದಲ್ಲಿ ಯಂತ್ರವನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಅದರಂತೆ ಅಕ್ಕಿ, ಜೋಳ, ರಾಗಿ, ಮೆಣಸು, ಕಾಫಿ, ಕಾಲುಮೆಣಸು ಹೀಗೆ ಎಲ್ಲ ರೀತಿಯ ದವಸ ಧಾನ್ಯಗಳನ್ನು ಮನೆಯಲ್ಲೇ ಹಿಟ್ಟು ಮಾಡಿಕೊಳ್ಳಬಹುದಾಗಿದೆ.
ನೋಡಲು ಸಣ್ಣ ಗಾತ್ರದ ಫ್ರಿಡ್ಜ್ನಂತಿರುವ ಈ ಗಿರಣಿ ಯಂತ್ರವು ಸ್ವಯಂಚಾಲಿತವಾಗಿದ್ದು, ಮೇಲ್ಭಾಗದಲ್ಲಿ ಧಾನ್ಯಗಳನ್ನು ಹಾಕಿದರೆ, ಎಲ್ಲವನ್ನೂ ಪುಡಿ ಮಾಡಿದ ಬಳಿಕ ಸದ್ದು ಮಾಡುತ್ತದೆ. ಜತೆಗೆ, ಯಂತ್ರದ ಕೆಳ ಭಾಗದ ಡಬ್ಬಿಯಲ್ಲಿ ಹಿಟ್ಟು ಸಂಗ್ರಹವಾಗುತ್ತದೆ. ಸುಲಭ ತಂತ್ರಜ್ಞಾನದ ಯಂತ್ರವಾಗಿರುವುದರಿಂದ ಯಾವುದೇ ರೀತಿಯ ನಿರ್ವಹಣೆ ಇರುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಫ್ಲೋರ್‌ಮಿಲ್‌ಗಳ ಸಂಖ್ಯೆ ಕಡಿಮೆಯಾಗಿದ್ದು, ಜನರು ರೆಡಿಮೇಡ್ ಉತ್ಪನ್ನಗಳ ಮೊರೆ ಹೋಗುತ್ತಿದ್ದಾರೆ. ಮನೆಯಲ್ಲಿಯೇ ಹಿಟ್ಟು ಮಾಡುವ ಯಂತ್ರದಿಂದ ಜನರಿಗೆ ಗುಣಮಟ್ಟದ ಉತ್ಪನ್ನಗಳು ದೊರೆಯಲಿದ್ದು, ಈ ಯಂತ್ರವು ಸಿಂಗಲ್ ಫೇಸ್‌ನಲ್ಲಿಯೇ ಕೆಲಸ ಮಾಡಲಿದೆ.
ಸಾಮಾನ್ಯವಾಗಿ ಒಂದು ಯುನಿಟ್‌ಗೆ 8-9 ಕೆ.ಜಿ ಧಾನ್ಯಗಳನ್ನು ಈ ಗಿರಿಣಿ ಹಿಟ್ಟು ಮಾಡುತ್ತದೆ. ಒಂದು ಕೆ.ಜಿ ಧಾನ್ಯ ಹಿಟ್ಟು ಮಾಡಲು 3ರಿಂದ 4 ನಿಮಿಷ ತಗುಲುತ್ತದೆ. ಫ್ಲೋರ್ ಮಿಲ್‌ಗಳಲ್ಲಿ ಒಂದು ಕೆ.ಜಿ.ಗೆ ಕನಿಷ್ಠ 5 ರೂ. ನೀಡಬೇಕು. ಆದರೆ, ಅದೇ 5 ರೂ.ಗೆ ಮನೆಯಲ್ಲಿ 8 ಕೆ.ಜಿ ಧಾನ್ಯವನ್ನು ಹಿಟ್ಟು ಮಾಡಿಕೊಳ್ಳಬಹುದು ಎನ್ನುತ್ತಾರೆ ವ್ಯಾಪಾರಿ ವೀರೇಶ್.