Advertisement

ಅವ್ವನ ಶತಮಾನೋತ್ಸವಕ್ಕೆ ಬೆಳ್ಳಿ ಕಿರೀಟ ತಂದ ಮಗ

10:04 AM Jan 26, 2020 | Lakshmi GovindaRaj |

ಧಾರವಾಡ: ಸಾಮ್ರಾಜ್ಯ ಗೆದ್ದ ಮಕ್ಕಳಿಗೆ ತಾಯಿಯೇ ಎದುರು ನಿಂತು ಕಿರೀಟ ಹಾಕಿ ಪಟ್ಟಾಭಿಷೇಕ ಮಾಡಿರುವುದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಆದರೆ ಇಲ್ಲೊಬ್ಬ ರೈತ ತನ್ನ ತಾಯಿಯ ಶತಮಾನೋತ್ಸವಕ್ಕೆ ಬೆಳ್ಳಿ ಕಿರೀಟ ತೊಡಿಸಿ ಸಾವಿರಾರು ಜನರ ಮಧ್ಯೆ “ಅವ್ವ’ನನ್ನು ಅಭಿನಂದಿಸಲು ಸಜ್ಜಾಗಿದ್ದಾನೆ.

Advertisement

ಡಾಕ್ಟರ್‌, ಎಂಜಿನಿಯರ್‌ ಓದಿ ಅಮೆರಿಕ, ಇಂಗ್ಲೆಂಡ್‌ನ‌ಲ್ಲಿ ಸುಖ ಜೀವನ ನಡೆಸುವ ಲಕ್ಷ ಲಕ್ಷ ಮಕ್ಕಳು ತಮ್ಮ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೋ, ಅನಾಥಾಶ್ರಮಕ್ಕೋ ಸೇರಿಸಿರುವ ಈ ಕಾಲದಲ್ಲಿ, ಇಲ್ಲೊಬ್ಬ ಕೃಷಿಕ ತಾಯಿಯನ್ನು ದೇವರೆಂದು ತಿಳಿಯಬೇಕು, ಎಲ್ಲ ಮಕ್ಕಳು ತಮ್ಮ ತಂದೆ-ತಾಯಿಯರನ್ನು ಕೊನೆವರೆಗೂ ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಸಂದೇಶ ಸಾರುವುದಕ್ಕೆ ಹತ್ತೂರು ಜನರ ಮಧ್ಯೆ ಹೆತ್ತವ್ವನಿಗೆ(ತಾಯಿಗೆ)ಬೆಳ್ಳಿ ಕಿರೀಟ ತೊಡಿಸಿ, ಶತಮಾನೋತ್ಸವ ಆಚರಿಸಲು ಸಿದ್ಧಗೊಂಡಿದ್ದಾನೆ.

ಧಾರವಾಡ ಸಮೀಪದ ಹೊಲ್ತಿಕೋಟಿ ಗ್ರಾಮದ ರೈತ ಮಹದೇವಪ್ಪ ಶಂಕ್ರಪ್ಪ ಕೋರಿ ಎಂಬುವರು ತಾಯಿಯ ಶತಮಾನೋತ್ಸವ ನಿಮಿತ್ತ ಅವರ ಪಾದಪೂಜೆ ಮಾಡುವುದರೊಂದಿಗೆ ಊರು ಸೇರಿ ಸುತ್ತಮುತ್ತಲಿನ ಹಳ್ಳಿಗಳ ಮೂರು ಸಾವಿರ ಜನರಿಗೆ ಸಿಹಿಯೂಟ ಮಾಡಿಸಲು ಸಜ್ಜಾಗಿದ್ದಾರೆ. ಜ.25ರಂದು ನಡೆಯುವ ಕಾರ್ಯಕ್ರಮಕ್ಕೆ ನಾಡಿನ ಐವರು ಹಿರಿಯ ಸ್ವಾಮೀಜಿಗಳನ್ನು ಕರೆಯಿಸಿ ತನ್ನ ತಾಯಿಯ ತುಲಾಭಾರ ಸೇವೆ ಮಾಡುವುದರೊಂದಿಗೆ ಅವಳ ಮಾದರಿ ಬದುಕು ಇತರರಿಗೂ ತಿಳಿಯುವಂತೆ ಮಾಡಲು ಪುಸ್ತಕ ಮುದ್ರಿಸಿ ಹಂಚಲಿದ್ದಾನೆ.

ಇದೇ ಕಾರ್ಯಕ್ರಮದಲ್ಲಿ ನೂರು ವರ್ಷ ತುಂಬಿದ ಸುತ್ತಮುತ್ತಲಿನ ಗ್ರಾಮದ ದಲಿತ, ಮುಸ್ಲಿಂ ಸೇರಿ ಎಲ್ಲಾ ವರ್ಗದ ಹಿರಿಯ ನಾಗರಿಕರನ್ನು ಸನ್ಮಾನಿಸಿ, ಗೌರವಿಸುವ ಅರ್ಥಪೂರ್ಣ ಕಾರ್ಯಕ್ರಮ ಮಾಡುತ್ತಿದ್ದಾರೆ ಹಿರಿಯ ಜೀವಿ ಮಹಾದೇವಪ್ಪ. ಹುಟ್ಟುತ್ತಲೇ ತಂದೆಯನ್ನು ಕಳೆದುಕೊಂಡ ಮಹಾದೇವಪ್ಪ ಅವರಿಗೆ ಬಡತನದ ಮಧ್ಯೆ ತಾಯಿ ತನ್ನನ್ನು ಬೆಳೆಸಲು ಪಟ್ಟ ಕಷ್ಟಗಳೇ ತಾಯಿಭಕ್ತಿ ಉಳಿಯುವಂತೆ ಮಾಡಿದೆ. ಕಾಡಿನ ಮಧ್ಯೆ ಹೊಲ್ತಿಕೋಟಿ ಗ್ರಾಮಕ್ಕೆ 1967ರಲ್ಲಿ ಮಹಾದೇವಪ್ಪ ತಾಯಿ ಸಮೇತ ಕೂಲಿಗೆ ಬಂದಾಗ ಅದು ವಿದ್ಯುತ್‌, ಕುಡಿಯುವ ನೀರು ಇಲ್ಲದ ಕುಗ್ರಾಮ.

ಉಳುಮೆ ನೊಗಕ್ಕೆ ಲಾಟೀನು ಕಟ್ಟಿ ದುಡಿಮೆ ಆರಂಭಿಸಿ ಇಂದು 47 ಎಕರೆಯಷ್ಟು ಜಮೀನು ದುಡಿದು ಸಂಪಾದಿಸಿದ್ದಾರೆ. ಈಗಲೂ ಪ್ರತಿದಿನ ಹೊಲಕ್ಕೆ ಹೋಗಿ ದುಡಿಮೆ ಮಾಡುವ ಅವರು, ಕಾಯಕ ಜೀವಿ. ಇಂಥ ಶ್ರಮಜೀವಿಗೆ ತನ್ನ ತಾಯಿ ತನ್ನ ಬೆಳೆಸಲು ಪಟ್ಟ ಶ್ರಮಕ್ಕೆ ಪ್ರತಿಯಾಗಿ ಅವಳನ್ನು ಹತ್ತೂರು ಜನರ ಮಧ್ಯೆ ಸ್ವಾಮಿಶ್ರೇಷ್ಠರಿಂದ ಪೂಜಿಸುವ ಹೆಬ್ಬಯಕೆ. ಹೀಗಾಗಿ ಅವಳಿಗಾಗಿ ಒಂದೂವರೆ ಕೆಜಿ ತೂಕದ ಬೆಳ್ಳಿ ಕಿರೀಟವನ್ನು ಮಹಾರಾಷ್ಟ್ರದ ಕೊಲ್ಲಾಪೂರದಲ್ಲಿ ತಯಾರಿಸಿದ್ದಾರೆ.

Advertisement

ಮಲ್ಲಮ್ಮನ ಪವಾಡ: ಶತಾಯುಷಿ ಮಲ್ಲಮ್ಮ ಕೃಷಿ ಕಾಯಕದಲ್ಲಿ ನಿಷ್ಠೆ ಇಟ್ಟವರು. ಪತಿ ಅಕಾಲಿಕ ಮರಣಕ್ಕೆ ತುತ್ತಾದಾಗ ಧೈರ್ಯಗುಂದದೇ ಮಗನನ್ನು ಸಮರ್ಥ ವಾಗಿ ಬೆಳೆಸಿದಳು. ಮನೆಯಲ್ಲಿ ಬಡತನ ಎಷ್ಟಿತ್ತೆಂದರೆ ಒಬ್ಬನೇ ಮಗನನ್ನು ಶಾಲೆಗೆ ಕಳುಹಿಸಿ ಓದಿಸಲು ಆಗದ ಸ್ಥಿತಿ. ಇಂತಹ ಸಂದರ್ಭದಲ್ಲಿ ಕೃಷಿಯೇ ಸೂಕ್ತ ಎಂದೆನಿಸಿ ಮಗನನ್ನು ಕೃಷಿ ಕಾಯಕಕ್ಕೆ ತೊಡಗಿಸಿದಳು.

ಹೊಲದ ಉಳುಮೆಗೆ ಒಂದು ಕಡೆ ಅವ್ವ, ಇನ್ನೊಂದು ಕಡೆ ಮಗ ಇಬ್ಬರೂ ಕುಟುಂಬ ಬಂಡಿಯ ಎತ್ತಿನಂತೆ ಬದುಕು ಸವೆಸಿ ಸ್ವಾಭಿಮಾನದ ಕೃಷಿ ಬದುಕು ಕಟ್ಟಿಕೊಂಡು ಸೈ ಎನಿಸಿಕೊಳ್ಳುವುದಕ್ಕೆ ಬರೊಬ್ಬರಿ 25 ವರ್ಷಗಳು ಬೇಕಾದವು. ಆ ಮೇಲೆ ಮಗನಿಗೆ ಮಡದಿ, ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಇದೀಗ ಬರೊಬ್ಬರಿ 22 ಜನರಿರುವ ತುಂಬು ಕುಟುಂಬವಾಗಿದೆ ಕೋರಿ ಅವರ ಮನೆತನ.

100 ವರ್ಷ ತುಂಬಿದರೂ ಗಟ್ಟಿಮುಟ್ಟು ಮಲ್ಲಮ್ಮ: 100 ವರ್ಷ ತುಂಬಿದರೂ ಮಲ್ಲಮ್ಮ ಕೋರಿ ಇಂದಿಗೂ ಆರೋಗ್ಯಪೂರ್ಣ ಜೀವನ ನಡೆಸುತ್ತಿದ್ದಾರೆ. ಕೃಷಿ ಸಂಬಂಧಿ ಉಪ ಕೆಲಸಗಳಲ್ಲಿ ಈಗಲೂ ಅವಳು ಮಗ್ನ. ಕಣ್ಣು ನಿಚ್ಚಳವಾಗಿ ಕಾಣುತ್ತವೆ. ಜೋಳದ ರೊಟ್ಟಿ ಅವಳ ಆರೋಗ್ಯದ ಗುಟ್ಟು. ಹಸುಗೂಸನ್ನು ಉಡಿಯಲ್ಲಿ ಕಟ್ಟಿಕೊಂಡು ಕಾಡುಮೃಗಗಳ ಮಧ್ಯೆ ಬದುಕು ಕಟ್ಟಿಕೊಂಡದ್ದು ನಿಜಕ್ಕೂ ಮಲ್ಲಮ್ಮನ ಪವಾಡವೇ ಸರಿ.

ತಾಯಿಯ ಋಣವೇ ಅಂತಹದ್ದು, ಅರಿತವರಿಗೆ ಅವಳ ಋಣದಲ್ಲಿನ ಸಾಸಿವೆ ಕಾಳಷ್ಟಾದರೂ ಋಣ ತೀರಿಸಬೇಕೆನ್ನುವ ಹಂಬಲ. ಅದಕ್ಕಾಗಿ ಕೆಲವರು ತಾಯಿ ಗುಡಿ ಕಟ್ಟಿಸಿದ್ದಾರೆ, ಇನ್ನು ಕೆಲವರು ತಾಯಿಯನ್ನು ಹಾಡಿ ಹೊಗಳಿದ್ದಾರೆ, ಅನೇಕರು ತಾಯಿಗಾಗಿ ಏನೇನೋ ತ್ಯಾಗ ಮಾಡಿದ್ದಾರೆ. ಆದರೆ ಮಹದೇವಪ್ಪ ಅವರು ಮಾತ್ರ ತಾಯಿ ದೇವರ ಬಗ್ಗೆ ಸುತ್ತಮುತ್ತಲಿನ ಹಳ್ಳಿಗರು ನೋಡಿ ಪಾಠ ಕಲಿಯುವಂತೆ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿ ಇತರರಿಗೆ ಮಾದರಿಯಾಗಿದ್ದಾರೆ.

ನಮ್ಮವ್ವ ನನ್ನ ಕೂಲಿ ಮಾಡಿ ಬೆಳೆಸಿದ್ಲು. ಅವಳು ನೂರು ವರ್ಷ ಬದುಕಿದ್ದು ನನ್ನ ಭಾಗ್ಯ. ಅವ್ವನ ಆಶೀರ್ವಾದದಲ್ಲಿ ನೂರು ವರ್ಷ ಬದುಕುವ ಪುಣ್ಯ ಎಲ್ಲ ಮಕ್ಕಳಿಗೂ ಸಿಗಬೇಕು. ಹಳ್ಳಿಯೊಳಗೂ ತಂದೆ-ತಾಯಿಯರನ್ನು ಮಕ್ಕಳು ಕನಿಷ್ಟವಾಗಿ ಕಾಣಾಕತ್ತಾರ. ಈ ಬಗ್ಗೆ ಎಲ್ಲರಿಗೂ ತಿಳಿವಳಿಕೆ ಬರಲಿ ಅನ್ನೋದೇ ನನ್ನ ಆಶಯ.
-ಮಹದೇವಪ್ಪ ಕೋರಿ, ಅವ್ವನ ಶತಮಾನೋತ್ಸವ ಆಚರಿಸುತ್ತಿರುವ ಮಗ

ಗೆದ್ದು ಬರುವ ಮಕ್ಕಳಿಗೆ ಅವ್ವ ಬೆಳ್ಳಿ ಕಿರೀಟ ಹಾಕಬೇಕು. ಆದ್ರ ನನ್ನ ಮಗಾ ನನಗ ಬೆಳ್ಳಿ ಕಿರೀಟ ತಂದಾನ. ಇದನ್ನ ನೋಡಿ ಖುಷಿ ಆಗೇತಿ. ಎಲ್ಲಾ ಅವ್ವಂದಿರಿಗೂ ನನ್ನ ಮಗನಂಥ ಮಕ್ಕಳ ಹುಟ್ಟಬೇಕು.
-ಮಲ್ಲಮ್ಮ ಕೋರಿ, ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಹಿರಿಯಜ್ಜಿ

* ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next