Advertisement

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸ್ತಬ್ಧಚಿತ್ರ ಮೆರವಣಿಗೆ: ಜಿಲ್ಲಾಧಿಕಾರಿ

10:14 PM Jul 29, 2019 | Sriram |

ಉಡುಪಿ: ಬೀಡಿನಗುಡ್ಡೆಯಲ್ಲಿ ಅ. 15ರಂದು ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯ ಕ್ರಮದಲ್ಲಿ ಜನಜಾಗೃತಿ ಮೂಡಿಸುವ ವಿವಿಧ ಸ್ತಬ್ಧ ಚಿತ್ರಗಳನ್ನು ತಯಾರಿಸಿ, ನಗರದ ವಿವಿಧೆಡೆಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮ ವಾರ ನಡೆದ ಸ್ವಾತಂತ್ರ್ಯೋತ್ಸವ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಬಾರಿಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಳೆ ನೀರು ಕೊಯ್ಲು ಕುರಿತು ಮಹತ್ವ ಸಾರುವ ಸ್ತಬ್ಧಚಿತ್ರವನ್ನು ಕೃಷಿ ಇಲಾಖೆ, ತಾರಸಿ ತೋಟ ನಿರ್ಮಾಣ ಕುರಿತಂತೆ ತೋಟಗಾರಿಕಾ ಇಲಾಖೆ, ರಸ್ತೆ ಸುರಕ್ಷತೆ ಕುರಿತಂತೆ ಪ್ರಾದೇಶಿಕ ಸಾರಿಗೆ ಇಲಾಖೆ, ಮಲೇರಿಯಾ ಮತ್ತು ಡೆಂಗ್ಯೂ ಕುರಿತು ಎಚ್ಚರಿಕೆ ನೀಡುವ ಕುರಿತು ಆರೋಗ್ಯ ಇಲಾಖೆ, ಜಿಲ್ಲೆಯ ಪ್ರವಾಸೋದ್ಯಮ ಕುರಿತು ಪ್ರವಾಸೋದ್ಯಮ ಇಲಾಖೆ, ವನ್ಯಜೀವಿ ಸಂರಕ್ಷಣೆ ಕುರಿತಂತೆ ಅರಣ್ಯಇಲಾಖೆಯ ಮೂಲಕ ಆಕರ್ಷಕ ಸ್ತಬ್ಧಚಿತ್ರಗಳನ್ನು ನಿರ್ಮಾಣ ಮಾಡುವುದರೊಂದಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಈ ಎಲ್ಲ ಸ್ತಬ್ಧಚಿತ್ರಗಳನ್ನು ಬೀಡಿನ ಗುಡ್ಡೆಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ದ ಪೆರೇಡ್‌ನ‌ಲ್ಲಿ ಮೆರವಣಿಗೆ ಮಾಡಿ, ಅನಂತರ ನಗರದ ವಿವಿಧ ವಾರ್ಡ್‌ಗಳನ್ನು ಸಂಚರಿಸುವ ಕುರಿತು ನಗರಸಭೆಯ ಪೌರಾಯುಕ್ತರು ಅಗತ್ಯ ಕ್ರಮ ಕೈಗೊಳ್ಳುವಂತೆ ಡಿ.ಸಿ.ಸೂಚಿಸಿದರು.

ಸ್ವಾತಂತ್ರ್ಯೋತ್ಸವ ದ ಪಥ ಸಂಚಲನದಲ್ಲಿ ಈ ಬಾರಿ ಇತರೆ ತಂಡಗಳ ಜೊತೆಗೆ ಸ್ಟೂಡೆಂಟ್‌ ಕೆಡೆಟ್‌ ತಂಡ ಮತ್ತು ವಸತಿ ಶಾಲೆಗಳ ವಿದ್ಯಾರ್ಥಿಗಳನ್ನು ಒಳಗೊಂಡ ತಂಡವನ್ನು ಸೇರ್ಪಡೆಗೊಳಿಸುವಂತೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ತಂಡದಲ್ಲಿ ರಸ್ತೆ ಸುರಕ್ಷತೆ ಕುರಿತು ಯಕ್ಷಗಾನ ನೀಡುವ ತಂಡವನ್ನು ಸೇರ್ಪಡೆ ಮಾಡುವಂತೆ ತಿಳಿಸಿದ ಅವರು ಪಥಸಂಚಲನದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಮತ್ತು ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಅಗತ್ಯ ಸಾರಿಗೆ ಸೌಲಭ್ಯ ಒದಗಿಸುವಂತೆ ಆರ್‌.ಟಿ.ಒ. ಅಧಿಕಾರಿಗಳಿಗೆ ಸೂಚಿಸಿದರು.

ಸ್ವಾತಂತ್ರ್ಯೋತ್ಸವ ಆಚರಣೆ ಕುರಿತಂತೆ ವಿವಿಧ ಸಮಿತಿಗಳನ್ನು ಜಿಲ್ಲಾಧಿಕಾರಿಗಳು ರಚಿಸಿದರು. ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿಲ್ಲಾ ಕ.ಸಾ.ಪ.ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಸಮ್ಮಾನ
ಎಸೆಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಗುವುದು ಮತ್ತು ರಸ್ತೆ ಸುರಕ್ಷೆ ಕುರಿತಂತೆ ಶಾಲೆಗಳಲ್ಲಿ ಚಿತ್ರಕಲೆ ಮೂಲಕ ಅರಿವು ಮೂಡಿಸಿರುವ ಅತ್ಯುತ್ತಮ ಚಿತ್ರ ರಚಿಸಿರುವ ಶಾಲೆಗಳ ಮುಖ್ಯೋಪಾಧ್ಯಾಯರು, ಚಿತ್ರಕಲೆ ಬಿಡಿಸಿದ ಶಿಕ್ಷಕರು ಮತ್ತು ಶಾಲೆಯ ಇಬ್ಬರು ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಗುವುದು ಎಂದು ಡಿಸಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next