ಬೈಂದೂರು: ಶಿರೂರು – ದೊಂಬೆ ಕರಾವಳಿ ರಸ್ತೆಗೆ ಮುಸ್ಲಿಂಕೇರಿ ತಿರುವಿನಿಂದ ಪಡಿಯಾರಹಿತ್ಲು ಕ್ರಾಸ್‌ವರೆಗೆ ಪೊದೆಗಳು ಬಾಗಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಹೊಸದಾಗಿ ನಿರ್ಮಾಣವಾದ ರಸ್ತೆ ಪಕ್ಕದಲ್ಲಿ ಖಾಸಗಿ ಜಾಗ ಸೇರಿದಂತೆ ಸರಕಾರಿ ಸ್ಥಳಗಳು ಸೇರಿವೆ. ನಿರ್ವಹಣೆಯ ಕೊರತೆಯಿಂದಾಗಿ ಈ ಜಾಗದಲ್ಲಿ ಭಾರಿ ಗಾತ್ರದ ಪೊದೆಗಳು ಬೆಳೆದು ರಸ್ತೆಗೆ ಬಾಗಿದಂತಿವೆ.
ಮೀನುಗಾರಿಕಾ ಇಲಾಖೆ ವ್ಯಾಪ್ತಿಗೆ ಒಳಪಡುವ ರಸ್ತೆ ಕಳೆದ ವರ್ಷ ಕಾಂಕ್ರೀಟಿಕರಣಗೊಂಡಿತ್ತು. ಮಳೆಗಾಲ ಆರಂಭಕ್ಕೆ ಮುನ್ನ ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದರಿಂದ ಈ ಸಮಸ್ಯೆ ಉಂಟಾಗಿದೆ.
ಜಾಗ ತೆರವಿಗೆ ಆಗ್ರಹ:
ಕರಾವಳಿ -ದೊಂಬೆ ರಸ್ತೆ ಪಕ್ಕದಲ್ಲಿ ರಸ್ತೆಗಾಗಿ ಮೀಸಲಿರಿಸಿದ ಜಾಗವನ್ನು ಸಾರ್ವಜನಿಕರು ಅತಿಕ್ರಮಿಸಿದ್ದಾರೆ ಎಂದು ಕಳೆದ ಮೂರು ವರ್ಷಗಳಿಂದ ಶಿರೂರು ಗ್ರಾಮಸಭೆಯಲ್ಲಿ ಚರ್ಚೆ ನಡೆಯುತ್ತಿತ್ತು.ಮಾತ್ರವಲ್ಲದೆ ಈ ರೀತಿ ರಸ್ತೆಯ ಜಾಗಗಳು ಸಾರ್ವಜನಿಕರ ಪಾಲಾಗಿರುವುದೆ. ಆದ್ದರಿಂದ ಜಂಟಿ ಸರ್ವೆ ಕಾರ್ಯ ನಡೆಸಿ ರಸ್ತೆಗೆ ಮೀಸಲಿರಿಸಿದ ಜಾಗ ಹಿಂಪಡೆಯಬೇಕು ಎಂದು ಕೆಲವು ಸದಸ್ಯರು ಪಟ್ಟು ಹಿಡಿದಿದ್ದರು. ಕಳೆದ ತಿಂಗಳು ಮೀನುಗಾರಿಕಾ ಇಲಾಖೆ, ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ ರಸ್ತೆ ಜಾಗವನ್ನು ಗುರುತಿಸಿ ಸರ್ವೆ ಕಲ್ಲುಗಳನ್ನು ಅಳವಡಿಸಲಾಗಿದೆ.ಆದರೆ ತೆರವು ಕಾರ್ಯ ಇದುವರೆಗೆ ನಡೆದಿಲ್ಲ.
ಹೀಗಾಗಿ ಕಂದಾಯ ಇಲಾಖೆ ತೆರವುಗೊಳಿಸಿ ಕಲ್ಲುಗಳನ್ನು ಅಳವಡಿಸಿದ ರಸ್ತೆಯ ಜಾಗಗಳನ್ನು ಆದಷ್ಟು ಬೇಗ ಸರಕಾರ ಪಡೆದು ತೆರವುಗೊಳಿಸಬೇಕು ಹಾಗೂ ರಸ್ತೆಯ ಗಿಡ ಗಂಟಿಗಳನ್ನು ಕಡಿಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.