Advertisement

ಅಂಗನವಾಡಿಗಳ ಪ್ರಗತಿಯ ಸಾರ್ಥಕ ಸೇವೆ

06:14 PM Nov 30, 2019 | Suhan S |

ಗುಳೇದಗುಡ್ಡ: ಪರಿಸರ ರಕ್ಷಣೆ, ಪ್ರಾಥಮಿಕ ಶಾಲೆಗಳು-ಅಂಗನವಾಡಿಗಳಲ್ಲಿ ಕಲಿಕಾ ಪ್ರಗತಿ ಸಾಧಿಸುವುದು, ಪೂರ್ವ ಪ್ರಾಥಮಿಕದಿಂದಲೇ ಮಕ್ಕಳಿಗೆ ಓದಲು, ಬರೆಯುವುದು ಕಲಿಸುವುದು, ಶಿಕ್ಷಕ-ವಿದ್ಯಾರ್ಥಿ ಇಬ್ಬರು ಖುಷಿ-ತೃಪ್ತಿ ಪಡುವುದು ಇಂತಹ ಮುಖ್ಯ ಉದ್ದೇಶಗಳನ್ನಿಟ್ಟುಕೊಂಡು ಮುನ್ನಡೆಯುತ್ತಿರುವ ಕೋಟೆಕಲ್‌-ಗುಳೇದಗುಡ್ಡ ಶಿಕ್ಷಣ ಹಾಗೂ ಪರಿಸರ ಅಭಿವೃದ್ಧಿ ಸಂಘಕ್ಕೆ ಈಗ ಐದು ವರ್ಷದ ಸಂಭ್ರಮ.

Advertisement

ಹೌದು. ಸಮೀಪದ ಕೋಟೆಕಲ್‌ ಗ್ರಾಮದಲ್ಲಿ ನಿವೃತ್ತ ಬ್ರಿಗೇಡಿಯರ್‌ ಎಂ.ಎನ್‌.ಕಡಪಟ್ಟಿ, ಜಿ.ಎಸ್‌. ದೇಸಾಯಿ ಸೇರಿದಂತೆ ಗ್ರಾಮದ ಮುಖಂಡರ ಸಹಕಾರ, ಮಾರ್ಗದರ್ಶನ ಹಾಗೂ ಆಸಕ್ತಿಯಿಂದ ಸಮಾನ ಮನಸ್ಕ ಚಿಂತಕರ ನೇತೃತ್ವದಲ್ಲಿ ಹುಟ್ಟಿಕೊಂಡ ಸಂಘ ಕಳೆದ ಐದು ವರ್ಷಗಳಿಂದ ಈ ಭಾಗದ 9ಹಳ್ಳಿಗಳಲ್ಲಿನ 21ಅಂಗನವಾಡಿಗಳಲ್ಲಿ ಶಿಕ್ಷಣ ಮಟ್ಟ ಸುಧಾರಿಸುವ ಮುಖ್ಯ ಗುರಿಯಿಟ್ಟುಕೊಂಡು ಹೊರಟಿದ್ದು, ಇದರ ಫಲವಾಗಿ ಇಂದು 3 ಅಂಗನವಾಡಿಗಳು ಸ್ಮಾರ್ಟ್‌ ಅಂಗನವಾಡಿಗಳಾಗಿವೆ. ಇವು ಜಿಲ್ಲೆಗಷ್ಟೇ ಅಲ್ಲ ಇಡೀ ರಾಜ್ಯಕ್ಕೆ ಮಾದರಿಯಾಗಿ ಗುರುತಿಸಿಕೊಂಡಿವೆ.

ಅಂಗನವಾಡಿಗಳಿಗೆ ಐದು ವರ್ಷದಲ್ಲಿ ಮಾಡಿದ್ದೇನು?: 10 ಅಂಗನವಾಡಿಗಳ ಕಟ್ಟಡ ದುರಸ್ತಿ, 7ಅಂಗನವಾಡಿಗಳಿಗೆ ವಿದ್ಯುತ್‌ ಸಂಪರ್ಕ, 3 ಸ್ಮಾರ್ಟ್‌ ಅಂಗನವಾಡಿಗಳ ನಿರ್ಮಾಣ, 60ಪಾಠಗಳ ತಂತ್ರಜ್ಞಾನಸಿದ್ಧಪಡಿಸಿದೆ. ಪ್ರತಿ ವರ್ಷ ಅಂಗನವಾಡಿಗಳಿಗೆ 1ಲಕ್ಷ 25 ಸಾವಿರ ರೂ.ಗಳನ್ನು ವಿನಿಯೋಗಿಸಿದೆ. ಈ ವರ್ಷ ಅಲ್ಲೂರ ಗ್ರಾಮದ ಅಂಗವಾಡಿಗೆ 22 ಸಾವಿರ ರೂ. ವೆಚ್ಚದಲ್ಲಿ ವಿದ್ಯುತ್‌ ಸಂಪರ್ಕ, ಬಣ್ಣ, ಪಾದನಕಟ್ಟಿ ಗ್ರಾಮದ ಅಂಗನವಾಡಿಗೆ 46 ಸಾವಿರ ವೆಚ್ಚದಲ್ಲಿ ಕಟ್ಟಡ ದುರಸ್ತಿ, ವಿದ್ಯುತ್‌ ಸಂಪರ್ಕ, ಬಣ್ಣ ಹಾಗೂ 40 ಇಂಚಿನ ಸ್ಮಾರ್ಟ್‌ ಟಿವಿ ನೀಡಿ ಸ್ಮಾರ್ಟ್‌ ಅಂಗನವಾಡಿಯನ್ನಾಗಿ ಮಾಡಿದ್ದಾರೆ. ಕೋಟೆಕಲ್‌ ಗ್ರಾಮದ ಅಂಗನವಾಡಿಗೆ 2 ಜೋಕಾಲಿ ನೀಡಲಾಗಿದೆ. ಅಂಗನವಾಡಿಯ 400 ಮಕ್ಕಳಿಗೆ ಪ್ರಾಥಮಿಕ ಪೂರ್ವ ಶಿಕ್ಷಣದ ಕಲಿಕೆಯ ಸಾಮಗ್ರಿಗಳ ಕೊಡುಗೆಯಾಗಿ ನೀಡಿದ್ದು, ಪ್ರತಿ ವರ್ಷ 200 ಮಕ್ಕಳು 1ನೇ ತರಗತಿಗೆ ಸೇರಲು ಸಮರ್ಥರಾಗಿದ್ದಾರೆ. ಇಲ್ಲಿ ಮಾಡಲಾಗಿರುವ ಸ್ಮಾರ್ಟ್‌ ಅಂಗನವಾಡಿ ಬಹುಶಃ ರಾಜ್ಯದಲ್ಲಿ ಪ್ರಥಮವೆನಿಸಿದೆ.

ಪ್ರಾಥಮಿಕ ಶಾಲೆಯಲ್ಲಿ ಐದು ವರ್ಷದಲ್ಲಿ ಮಾಡಿದ್ದೇನು?: ಸಂಘವು ಕಳೆದ ಐದು ವರ್ಷಗಳಲ್ಲಿ ಪ್ರಾಥಮಿಕ ಶಾಲೆಯಲ್ಲಿ 10 ಸ್ಮಾರ್ಟ್‌ ಕೊಠಡಿ ನಿರ್ಮಿಸಿದೆ. ಶಾಲೆಗೆ 22 ಕಂಪ್ಯೂಟರ್ ನೀಡಿ, ಸುಸಜ್ಜಿತ ಲ್ಯಾಬ್‌ ವ್ಯವಸ್ಥೆ ಜತೆಗೆ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುತ್ತಿದೆ. ಅಷ್ಟೇ ಅಲ್ಲ ಇಂಗ್ಲಿಷ್‌, ಕನ್ನಡ, ಗಣಿತ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ, ಶೇ.50ರಲ್ಲಿ ಬರೆಯುವ ಸಾಮಗ್ರಿ ವಿತರಣೆ, ಸೈನ್ಯ ಮಾದರಿ ವ್ಯಾಯಾಮ ಸೌಲಭ್ಯ, ಮಕ್ಕಳಿಗೆ ಎನ್‌ಎಂಎಂಎಸ್‌ ನವೋದಯ ತರಬೇತಿ, ಪೊನೊಲಜಿ ಶಿಕ್ಷಣ ನೀಡಿದೆ. ಡಿಜಿಟಲ್‌ ಸಾಕ್ಷರತೆಗೆ ಬೇಕಾಗುವ ಸಾಫ್ಟವೇರ್‌ಬೆಳವಣಿಗೆ, ಪ್ರತಿ ವರ್ಷ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ಸುಧಾರಣೆಗೆ 2ಲಕ್ಷ ರೂ.ಗಳನ್ನು ಸಂಘ ನೀಡುತ್ತಿದೆ. ಖಾಸಗಿ ಶಾಲೆಗಳಲ್ಲಿ ಸಿಗುವ ಶಿಕ್ಷಣ ಸರಕಾರಿ ಶಾಲೆಗಳಲ್ಲೂ ಸಿಗಬೇಕು. ಮಕ್ಕಳ ಶಿಕ್ಷಣ ಕಲಿಕಾ ಮಟ್ಟ ಸುಧಾರಿಸಬೇಕು ಎಂದು ಶ್ರಮಿಸುತ್ತಿರುವ ಈ ಸಂಘದ ಸದಸ್ಯರ ಕಾಳಜಿ ನಿಜಕ್ಕೂ ಮೆಚ್ಚುವಂತಹದ್ದು.

ಸಂಘ ಏನೆಲ್ಲ ನೀಡಿದೆ? : ಸ್ಮಾರ್ಟ್‌ ಅಂಗನವಾಡಿಯಲ್ಲಿ 43ಇಂಚಿನ ಟಿವಿ ಅಳವಡಿಸಲಾಗಿದ್ದು, ಸ್ಮಾರ್ಟ್‌ ಪೋನ್‌ ಮೂಲಕ ವಿಡಿಯೋ, ಪಾಠಗಳನ್ನು ಡಿಸ್‌ಪ್ಲೇ ಮಾಡಿ ಮಕ್ಕಳಿಗೆ ಪಾಠ ಬೋಧಿ ಸಲಾಗುತ್ತದೆ. ಇಂಗ್ಲಿಷ್‌ ವರ್ಕ್‌ಬುಕ್‌, ಮೈ ನಂಬರ್‌ ವರ್ಕ್‌ ಬುಕ್‌, ಕನ್ನಡ ಅಕ್ಷರಮಾಲೆ, ವರ್ಕ್‌ಬುಕ್‌, ಕನ್ನಡ ಶಬ್ದಗಳ ಪ್ರಾಕ್ಟಿಸ್‌ ಬುಕ್‌, ಇಂಗ್ಲಿಷ್‌ ಶಬ್ದಗಳ ಪ್ರಾಕ್ಟಿಸ್‌ ಬುಕ್‌, 2, 4 ಗೆರೆಗಳ ಹಾಗೂ ನೋಟ್‌ಬುಕ್‌, ಪೆನ್ಸಿಲ್‌, ಬ್ಯಾಗ್‌ ಸೇರಿದಂತೆ ಕಲಿಕಾ ಸಾಮಗ್ರಿ ನೀಡಲಾಗಿದೆ.

Advertisement

 

-ಮಲ್ಲಿಕಾರ್ಜುನ ಕಲಕೇರಿ

Advertisement

Udayavani is now on Telegram. Click here to join our channel and stay updated with the latest news.

Next