Advertisement

ಚಿಕಿತ್ಸೆಗೆ 6 ಬೆಡ್‌ಗಳ ಪ್ರತ್ಯೇಕ ಕೊಠಡಿ ನಿಗದಿ

04:05 PM Mar 28, 2020 | Suhan S |

ಬಾಗಲಕೋಟೆ: ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುತ್ತಿದ್ದ ಜನ, ಇದೀಗ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ. ಕೋವಿಡ್‌-19 ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಲಾಕ್‌ಡೌನ್‌ ಇದ್ದು, ಯಾವುದೇ ಕಾಯಿಲೆ ಅಥವಾ ತುರ್ತು ಸಂದರ್ಭಗಳಿದ್ದರೂ ಜಿಲ್ಲಾ ಆಸ್ಪತ್ರೆಯೇ ಸರ್ವರಿಗೂ ಅಪದ್ಭಾಂದವ ಆಗಿದೆ.

Advertisement

ನವನಗರದ ಜಿಲ್ಲಾ ಆಸ್ಪತ್ರೆ ಯಾರೇ ಬಂದರೂ ಚಿಕಿತ್ಸೆಗಾಗಿ ಬಾಗಿಲು ತೆರೆದಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಸಹಿತ ಸಾಮಾನ್ಯ ಕಾಯಿಲೆಗೆ ಜಿಲ್ಲಾ ಆಸ್ಪತ್ರೆಗೆ ಬರಬೇಡಿ ಎಂದು ಸೂಚಿಸಿದರೂ ಜನರು ನಿತ್ಯ ಬರುತ್ತಲೇ ಇದ್ದಾರೆ. . ಕೋವಿಡ್‌-19  ಚಿಕಿತ್ಸೆಗೆ ಪ್ರತ್ಯೇಕ 6 ಬೆಡ್‌ಗಳ ಪ್ರತ್ಯೇಕ ಕೊಠಡಿಗಳಿವೆ.

ಕೋವಿಡ್‌-19ರ ಮುನ್ನೆಚ್ಚರಿಕೆ: ಕೋವಿಡ್ 19 ವೈರಸ್‌ ಭೀತಿ ಎಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಕೆಮ್ಮು-ನೆಗಡಿ-ಜ್ವರ ಬಂದರೂ ಜನರು, ಜಿಲ್ಲಾ ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಈ ರೋಗದ ಜತೆಗೆ ಉಸಿರಾಟದ ತೀವ್ರ ತೊಂದರೆ ಯಾಗುತ್ತಿದ್ದರೆ ಮಾತ್ರ ಅದು ಕೊರೊನಾ ರೋಗದ ಲಕ್ಷಣ ಎಂದು ಜಾಗೃತಿ ಮೂಡಿಸಿದರೂ ರೋಗಿಗಳು ಬರುವುದು ನಿಲ್ಲುತ್ತಿಲ್ಲ. ಜಿಲ್ಲೆಯಲ್ಲಿ ಈ ವರೆಗೆ ಕೊರೊನಾ ವೈರಸ್‌ ಕಂಡು ಬಂದಿಲ್ಲ. ಒಂದು ವೇಳೆ ಕಂಡು ಬಂದಲ್ಲಿ ಅಂತಹ ವ್ಯಕ್ತಿಗಳಿಗಾಗಿ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಯಲ್ಲಿ 1 ಮೀಟರ್‌ ಅಳತೆ ಅಂತರದಲ್ಲಿ ಒಟ್ಟು 6 ಬೆಡ್‌ಗಳ ಪ್ರತ್ಯೇಕ ಕೊಠಡಿ ನಿಗದಿಪಡಿಸಲಾಗಿದೆ. ಅದಕ್ಕಾಗಿ ಡಾ| ಸಿ.ಎಸ್‌. ಜಗಳಿ ಹಾಗೂ ಡಾ| ಗಿರೀಶ ಸಂಗಮ ಎಂಬ ಇಬ್ಬರು ತಜ್ಞ ವೈದ್ಯರು, ವಿವಿಧ ಸಿಬ್ಬಂದಿ ಸಜ್ಜುಗೊಳಿಸಲಾಗಿದೆ. ವೈದ್ಯರು, ಸಿಬ್ಬಂದಿಗಳು, ರೋಗಿಗಳ ಆರೈಕೆಗಾಗಿ-ನಿರ್ವಹಣೆಗಾಗಿ ಪ್ರತ್ಯೇಕ ತರಬೇತಿ ಪಡೆದಿದ್ದಾರೆ.

11 ಪರೀಕ್ಷೆ ಮಾದರಿಗಳೂ ನೆಗೆಟಿವ್‌ : ಕೋವಿಡ್‌-19 ವೈರಸ್‌ ರೋಗ ಶಂಕಿತರ ಚಿಕಿತ್ಸೆಗಾಗಿ 10 ಹಾಸಿಗೆಗಳ ಪ್ರತ್ಯೇಕ ವಿಭಾಗ ಆರಂಭಿಸಿದ್ದು, ಈಗಾಗಲೇ 11 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಗುರುವಾರ ಇಬ್ಬರು ವ್ಯಕ್ತಿಗಳ ಗಂಟಲು ದ್ರವ ಮತ್ತು ರಕ್ತ ತಪಾಸಣೆಗೆ ಕಳುಹಿಸಿದ್ದು, ಅವರ ವರದಿಯೂ ಕೊರೊನಾ ವೈರಸ್‌ ಇಲ್ಲದಿರುವುದು ದೃಢಪಟ್ಟಿದೆ. ಈವರೆಗೆ ಒಟ್ಟು 11 ಜನರ ಪರೀಕ್ಷೆ ಮಾದರಿ ಬಂದಿದ್ದು, ಯಾರಿಗೂ ವೈರಸ್‌ ಕಂಡು ಬಂದಿಲ್ಲ.

ಖಾಸಗಿ ಸೇವೆ ಬಂದ್‌ :  ಲಾಕ್‌ಡೌನ್‌ ಘೋಷಣೆ ಮುಂಚೆಯೇ ಕೋವಿಡ್ 19  ಭೀತಿಯಿಂದ ಕೆಲವು ಖಾಸಗಿ ವೈದ್ಯರು ಹೊರ ರೋಗಿಗಳ ವಿಭಾಗ ಬಂದ್‌ ಮಾಡಿದ್ದರು. ಇದೀಗ ಲಾಕ್‌ಡೌನ್‌ ಘೋಷಣೆ ಬಳಿಕ, ಜಿಲ್ಲೆಯ ಸುಮಾರು 865ಕ್ಕೂ ಹೆಚ್ಚು ಆಸ್ಪತ್ರೆ, ಕ್ಲಿನಿಕ್‌ಗಳು ಬಂದ್‌ ಆಗಿವೆ. ತುರ್ತು ಸಂದರ್ಭ, ಒಳ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತಿವೆ. ಹೀಗಾಗಿ ಜನರು, ಸರ್ಕಾರಿ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ.

Advertisement

ಕೋವಿಡ್ 19 ವೈರಸ್‌ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡರೂ ಜಿಲ್ಲಾ ಆಸ್ಪತ್ರೆಗೆ ಬರಬೇಕಿಲ್ಲ. ಈ ರೋಗಗಳ ಜತೆಗೆ ಉಸಿರಾಟದ ತೊಂದರೆ ಇದ್ದರೆ ತಕ್ಷಣ ಚಿಕಿತ್ಸೆಗೆ ದಾಖಲಾಗಬೇಕು. ಇಂತಹ ತುರ್ತು ಸಂದರ್ಭದಲ್ಲೂ ನಮ್ಮ ಆಸ್ಪತ್ರೆಯ ವೈದ್ಯರು ಎಲ್ಲ ರೀತಿಯ ಸೇವೆ ಒದಗಿಸುತ್ತಿದ್ದಾರೆ. ಕೆಲವು ಶಸ್ತ್ರ ಚಿಕಿತ್ಸೆಗಳನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಿದ್ದೇವೆ.  –ಡಾ|ಪ್ರಕಾಶ ಬಿರಾದಾರ, ಜಿಲ್ಲಾ ಶಸ್ತ್ರ ಚಿಕಿತ್ಸಕ

 

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next