Advertisement

ಲೇಡಿಗೋಷನ್‌ನಲ್ಲಿ ಪ್ರತ್ಯೇಕ ತಾಯಿ-ಶಿಶು ಆಸ್ಪತ್ರೆ

10:23 PM Jun 19, 2019 | mahesh |

ಮಹಾನಗರ: ತಾಯಿ ಮತ್ತು ಶಿಶುಗಳ ಆರೈಕೆಗೆಂದೇ 10 ಕೋಟಿ ರೂ. ವೆಚ್ಚದಲ್ಲಿ ಪ್ರತ್ಯೇಕ ತಾಯಿ-ಶಿಶು ಆಸ್ಪತ್ರೆ ನಗರದ ಲೇಡಿಗೋಷನ್‌ ಆಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗುತ್ತಿದೆ. ಆಸ್ಪತ್ರೆಯ ಹಳೆಯ ಕಟ್ಟಡದ ಒಂದು ಭಾಗವನ್ನು ಕೆಡವಿ ಈ ಪ್ರತ್ಯೇಕ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ.

Advertisement

ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ತಾಯಿ- ಶಿಶು ಆಸ್ಪತ್ರೆ ಇದೆ. ಮಂಗಳೂರಿನಲ್ಲಿ ಹಲವು ವರ್ಷಗಳ ಹಿಂದೆಯೇ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದರೂ ಆಸ್ಪತ್ರೆಯ ಹಳೆಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರ ಆಗುವುದು ತಡವಾದ್ದರಿಂದ ಈ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸಾಧ್ಯವಾಗಿರಲಿಲ್ಲ. ಇದೀಗ ಸ್ಥಳಾಂತರ ಕಾರ್ಯ ನಡೆದಿರುವುದರಿಂದ ಹಳೆಯ ಕಟ್ಟಡವಿದ್ದ ಜಾಗದಲ್ಲಿ ತಾಯಿ ಶಿಶು ಆಸ್ಪತ್ರೆ (ಮದರ್‌ ಚೈಲ್ಡ್‌ ಹಾಸ್ಪಿಟಲ್‌) ನಿರ್ಮಾಣಗೊಳ್ಳುತ್ತಿದೆ.

60 ಹಾಸಿಗೆ ಸಾಮರ್ಥ್ಯ
ರಾಷ್ಟ್ರೀಯ ಆರೋಗ್ಯ ಮಿಷನ್‌ನ (ಎನ್‌ಎಚ್‌ಎಂ) 10 ಕೋಟಿ ರೂ. ಅನುದಾನದಡಿ ಈ ಹೊಸ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. 60 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಇದಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್‌ ವಿಭಾಗದಿಂದ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಕೆಲಸ ಆರಂಭವಾಗಿ ಪಿಲ್ಲರ್‌ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ಸುಮಾರು ಒಂದೂವರೆ ವರ್ಷಗಳೊಳಗೆ ಕಾಮಗಾರಿ ಪೂರ್ಣಗೊಳ್ಳಬಹುದು ಎಂದು ಇಲಾಖೆಯ ಎಂಜಿನಿಯರಿಂಗ್‌ ವಿಭಾಗದವರು ಮಾಹಿತಿ ನೀಡಿದ್ದಾರೆ.

4,000 ಚದರ ಮೀಟರ್‌ ವ್ಯಾಪ್ತಿ
ಹೊಸ ಕಟ್ಟಡವು 4,000 ಚದರ ಮೀಟರ್‌ ವ್ಯಾಪ್ತಿಯನ್ನು ಹೊಂದಿದ್ದು, ನೆಲಮಹಡಿ, ಕೆಳ ಮಹಡಿ ಮತ್ತು ಮೇಲಿನ ಮಹಡಿಯನ್ನು ಹೊಂದಲಿದೆ. ನೆಲ ಮಹಡಿಯಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗುತ್ತದೆ.

ಕೆಳಮಹಡಿಯಲ್ಲಿ ಸ್ಕ್ಯಾನಿಂಗ್‌, ಎಕ್ಸ್‌ರೇ ಮತ್ತಿತರ ಅಗತ್ಯ ಚಿಕಿತ್ಸೆಗಳನ್ನು ಒಳಗೊಂಡ ಸೌಲಭ್ಯಗಳಿರಲಿವೆ. ಮೇಲಿನ ಮಹಡಿ ಸಂಪೂರ್ಣ ವಾರ್ಡ್‌ ಆಗಿದ್ದು, 60 ಬೆಡ್‌ಗಳನ್ನು ಜೋಡಿಸಲಾಗುತ್ತದೆ. ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನು ಕೇವಲ ತಾಯಿ-ಶಿಶುವಿಗೆಂದೇ ಮೀಸಲಿಡಲಾಗುತ್ತಿದೆ. ಈಗಾಗಲೇ ಇರುವ ಹೊಸ ಕಟ್ಟಡದಲ್ಲಿ ಸುಮಾರು 290 ಹಾಸಿಗೆಗಳ ಸಾಮರ್ಥ್ಯವಿದೆ. ಇದರಲ್ಲಿ ಹೆರಿಗೆಗೆ 155, ವಿಶೇಷ ನವಜಾತ ಶಿಶುಗಳಿಗೆ 12, ನವಜಾತ ಶಿಶುಗಳಿಗೆ 10 ಹಾಸಿಗೆಗಳಿವೆ. ಉಳಿದಂತೆ ತಾಯಂದಿರು ಮತ್ತು ಇತರ ಗರ್ಭಕೋಶ ಸಂಬಂಧಿತ ಕಾಯಿಲೆಗಳಿಗೆ ಮತ್ತಿತರ ರೋಗಿಗಳಿಗೆ ಮೀಸಲಿಡಲಾಗಿದೆ.

Advertisement

ಮಳೆಕೊಯ್ಲು ಅಳವಡಿಕೆ
ಹೊಸದಾಗಿ ನಿರ್ಮಾಣವಾಗುತ್ತಿರುವ ತಾಯಿ-ಶಿಶು ಆಸ್ಪತ್ರೆಯಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಲು ಎಂಜಿನಿಯರಿಂಗ್‌ ವಿಭಾಗದವರು ಮುಂದಾಗಿದ್ದಾರೆ. ಹಳೆಯ ಕಟ್ಟಡದಲ್ಲಿ ಈ ವ್ಯವಸ್ಥೆ ಇರಲಿಲ್ಲ. ಇದೀಗ ಅದೇ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಆಸ್ಪತ್ರೆ ಕಟ್ಟಡದಲ್ಲಿ ಮಳೆ ನೀರು ಕೊಯ್ಲು ಮಾಡಲಾಗುತ್ತಿದೆ. ಪ್ರಸ್ತುತ ಬೇಸಗೆಯಲ್ಲಿ ನೀರಿನ ಅಭಾವ ಎದುರಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿಭಾಗವು ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸುತ್ತಿದೆ.

ಒಂದೂವರೆ ವರ್ಷದ‌ಲ್ಲಿ ಕಾಮಗಾರಿ
ಲೇಡಿಗೋಷನ್‌ ಆಸ್ಪತ್ರೆಯ ಹಳೆಯ ಕಟ್ಟಡದ ಒಂದು ಭಾಗವನ್ನು ಕೆಡವಿ ಅಲ್ಲಿ ಪ್ರತ್ಯೇಕ ತಾಯಿ ಮತ್ತು ಶಿಶು ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ಒಂದೂವರೆ ವರ್ಷಗಳಲ್ಲಿ ಇದರ ಕಾಮಗಾರಿ ಮುಗಿಯಬಹುದು. ಆಸ್ಪತ್ರೆಯ ಹೊಸ ಕಟ್ಟಡದಲ್ಲಿರುವಂತೆ ಎಲ್ಲ ಸೌಲಭ್ಯಗಳು ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡದಲ್ಲಿಯೂ ಇರಲಿದೆ.
– ಡಾ| ಸವಿತಾ, ವೈದ್ಯಕೀಯ ಅಧೀಕ್ಷಕಿ ಜಿಲ್ಲಾ ಸರಕಾರಿ ಲೇಡಿಗೋಷನ್‌ ಆಸ್ಪತ್ರೆ, ಮಂಗಳೂರು

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next