ಉಡುಪಿ ಜಿಲ್ಲೆಯ 100 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 120 ಗ್ರಾ.ಪಂ.ಗಳಲ್ಲಿ ಪ್ರತ್ಯೇಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವಿಲ್ಲ. ಆದರೆ ಬಹುತೇಕ ಸಂಘಗಳು 2-3 ಅಥವಾ ಅದಕ್ಕಿಂತ ಹೆಚ್ಚಿನ ಗ್ರಾ.ಪಂ.ಗಳಲ್ಲಿ ಶಾಖೆಯನ್ನು ಹೊಂದಿವೆ. ಈ ಹೊಸ ಆದೇಶದಿಂದ ಪ್ರಧಾನ ಕಚೇರಿ ಹೊಂದಿರುವ ಗ್ರಾ.ಪಂ. ಹೊರತುಪಡಿಸಿ ಬೇರೆ ಗ್ರಾ.ಪಂ.ಗಳಲ್ಲಿ ತಮ್ಮ ಶಾಖೆಗಳನ್ನು ಹೊಂದುವಂತಿಲ್ಲ. ಹಾಗಾಗಿ ಇರುವುದನ್ನು ಮುಚ್ಚಬೇಕಿದೆ.
Advertisement
ಉಡುಪಿ, ದ.ಕ., ಚಾಮರಾಜನಗರ, ಮಂಡ್ಯ, ಚಿಕ್ಕಮಗ ಳೂರು, ಕೊಡಗು, ಹಾಸನ ಹಾಗೂ ಮೈಸೂರು ಜಿಲ್ಲೆ ಒಳ ಗೊಂಡಿರುವ ಮೈಸೂರು ಪ್ರಾಂತದ 8 ಜಿಲ್ಲೆಗಳ 646ಗ್ರಾ.ಪಂ.ಗಳಲ್ಲಿ ಪ್ರತ್ಯೇಕ ಸಹಕಾರಿ ಸಂಘಗಳು ಇಲ್ಲದೇ ಇರುವುದನ್ನು ಸಹಕಾರಿ ಇಲಾಖೆ ಪಟ್ಟಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮೈಸೂರು, ಹುಣಸೂರು, ಚಾಮರಾಜನಗರ, ಮಂಡ್ಯ, ಪಾಂಡವಪುರ, ಹಾಸನ, ಸಕಲೇಶಪುರ, ಚಿಕ್ಕ ಮಗಳೂರು, ತರೀಕೆರೆ, ಮಡಿಕೇರಿ, ಮಂಗಳೂರು, ಪುತ್ತೂರು ಹಾಗೂ ಕುಂದಾಪುರ ಉಪ ವಿಭಾಗದ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಿಗೆ ಗ್ರಾ.ಪಂ.ಗೊಂದು ಪ್ರತ್ಯೇಕ ಸಂಘ ರಚಿಸಲು ಸೂಚಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ 54 ಹಾಗೂ ದ.ಕ. ಜಿಲ್ಲೆಯಲ್ಲಿ 170 ಕೃಷಿ ಪತ್ತಿನ ಸಹಕಾರಿ ಸಂಘಗಳಿವೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಪ್ರಧಾನ ಕಚೇರಿ ಇರುವ ಗ್ರಾ.ಪಂ. ಹೊರತುಪಡಿಸಿ ಬೇರೆ ಗ್ರಾ.ಪಂ.ಗಳಲ್ಲಿ ಇರುವ ಶಾಖೆಗಳನ್ನು ತೆರವು ಮಾಡಲು ಆ. 25ರ ಗಡುವು ನೀಡಲಾಗಿದೆ. ಸೆ. 9ರೊಳಗೆ ಹೊಸ ಸಂಘ ರಚನೆಗೆ ಷೇರು ಸಂಗ್ರಹ ಪ್ರಸ್ತಾವನೆಗೆ ಅನುಮತಿ ನೀಡುವುದು, ಸೆ. 16ರೊಳಗೆ ಸಂಘದ ನೋಂದಣಿಗೆ ಪ್ರಸ್ತಾವನೆ ಪಡೆಯುವುದು ಹಾಗೂ ಅಕ್ಟೋಬರ್ 31ರೊಳಗೆ ನೂತನ ಸಂಘದ ಆಡಳಿತ ಮಂಡಳಿ ರಚಿಸಲು ಸಹಕಾರಿ ಸಂಘಗಳ ಉಪ ನಿಬಂಧಕರು ಹಾಗೂ ಸಹಾಯಕ ನಿಬಂಧಕರಿಗೆ ಮೈಸೂರು ಪ್ರಾಂತದ ಜಂಟಿ ನಿಬಂಧಕರು ಸೂಚಿಸಿದ್ದಾರೆ. ಕರಾವಳಿಯಲ್ಲಿ ಸಮಸ್ಯೆ ಹೆಚ್ಚು
ಕರಾವಳಿ ಜಿಲ್ಲೆಗಳಲ್ಲಿ ಪ್ರತಿ ಸಂಘವು 3-4 ಗ್ರಾ.ಪಂ. ಗಳಲ್ಲಿ ಶಾಖೆ ಹೊಂದಿವೆ. ತತ್‌ಕ್ಷಣವೇ ಬೇರ್ಪಡಿಸಲಾಗದು. ಇದರಿಂದ ಸಾಕಷ್ಟು ಸಮಸ್ಯೆ ಎದುರಾಗಲಿದೆ ಎನ್ನುತ್ತಾರೆ ಹಿರಿಯ ಸಹಕಾರಿಯೊಬ್ಬರು.
Related Articles
ಸರಕಾರದ ಬಡ್ಡಿ ರಹಿತ/ ಕಡಿಮೆ ಬಡ್ಡಿದರದ ಸಾಲ ಸಹಿತ ರಾಜ್ಯ ಹಾಗೂ ಕೇಂದ್ರ ಸರಕಾರ ವಿವಿಧ ಸೌಲಭ್ಯವನ್ನು ಗ್ರಾ.ಪಂ. ವ್ಯಾಪ್ತಿಯ ಎಲ್ಲ ಕೃಷಿಕರಿಗೂ ಪರಿಣಾಮಕಾರಿಯಾಗಿ ತಲುಪಿಸಲು ರಾಜ್ಯ ಸರಕಾರ ಪ್ರತಿ ಗ್ರಾ.ಪಂ.ಗಳಲ್ಲೂ ಪ್ರತ್ಯೇಕ ಸಹಕಾರಿ ಸಂಘ ರಚನೆಗೆ ಆದೇಶಿಸಿದೆ. ಸದ್ಯ ಇರುವ ಪತ್ತಿನ ಸಹಕಾರಿ ಸಂಘಗಳಲ್ಲಿ ಸೌಲಭ್ಯಗಳು ಎಲ್ಲ ಕೃಷಿಕರಿಗೂ ತಲುಪುತ್ತಿಲ್ಲ. ಒಮ್ಮೆ ಪಡೆದವರೇ ಮತ್ತೆ ಮತ್ತೆ ಸೌಲಭ್ಯ ಪಡೆಯುತ್ತಿದ್ದಾರೆಂಬ ಆರೋಪವಿದೆ. ಈ ಕಾರಣ ಕ್ಕಾಗಿಯೇ ಪ್ರತ್ಯೇಕ ಸಂಘ ರಚನೆಯ ನಿರ್ಧಾರ ಎಂಬುದು ಅಧಿಕಾರಿಯೊಬ್ಬರ ವಿವರಣೆ.
Advertisement
ಕಾನೂನು ಹೋರಾಟಕ್ಕೆ ಚಿಂತನೆಕರಾವಳಿಯಲ್ಲಿ ಗ್ರಾ.ಪಂ.ಗೊಂದು ಸಂಘ ಸ್ಥಾಪನೆ ಅಸಾಧ್ಯ. ನಮ್ಮ ಹಲವು ಕೃಷಿ ಪತ್ತಿನ ಸಹಕಾರಿ ಸಂಘಗಳು ನಾಲ್ಕೈದು ಗ್ರಾ.ಪಂ.ಗಳಲ್ಲಿ ಶಾಖೆ ಹೊಂದಿರುತ್ತವೆ. ಸರಕಾರದ ಈ ಆದೇಶವನ್ನು ರದ್ದು ಮಾಡುವಂತೆ ನ್ಯಾಯಾಲಯದ ಮೆಟ್ಟಿಲೇರುವ ಸಂಬಂಧ ಸಹಕಾರಿಗಳ ಅಭಿಪ್ರಾಯವನ್ನು ಸಂಗ್ರಹಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾ ಗುವುದು.
-ಜಯಕರ ಶೆಟ್ಟಿ ಇಂದ್ರಾಳಿ, ಸಹಕಾರಿ ಯುನಿಯನ್ ಅಧ್ಯಕ್ಷ, ಉಡುಪಿ ಜಿಲ್ಲೆ ಚರ್ಚಿಸಿ ತೀರ್ಮಾನ
ಜಿಲ್ಲಾ ವ್ಯಾಪ್ತಿಯ ಒಂದು ಸಂಘ ಈಗಾಗಲೇ ನ್ಯಾಯಾ ಲಯದ ಮೆಟ್ಟಿಲೇರಿದ್ದು, ವಿಚಾರಣೆ ಹಂತದಲ್ಲಿದೆ. ಗ್ರಾ.ಪಂ. ಗೊಂದು ಪ್ರತ್ಯೇಕ ಸಂಘ ರಚಿಸುವುದರಿಂದ ಆರ್ಥಿಕ ಸಂಕಷ್ಟ ಎದುರಾಗುವ ಬಗ್ಗೆ ಹಾಗೂ ಪ್ರಧಾನ ಕಚೇರಿ/ ಶಾಖಾ ಕಚೇರಿಯಲ್ಲಿ ಒಂದೇ ರೀತಿಯ ಕಾರ್ಯಾಚರಣೆ ಇರುವುದರಿಂದ ಪ್ರತ್ಯೇಕ ಸಂಘ ಏಕೆ ಎಂಬ ಅಭಿಪ್ರಾಯ ಇದೆ. ಹೀಗಾಗಿ ಎಲ್ಲವನ್ನೂ ಪರಿಶೀಲಿಸಿ, ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇವೆ.
– ಪ್ರಸಾದ್ ಕೌಶಲ್, ಸಹಕಾರಿ ಯುನಿಯನ್ ಅಧ್ಯಕ್ಷ, ದ.ಕ. ಸದಸ್ಯತ್ವಕ್ಕೆ ತೊಂದರೆ ಇದೆಯೇ?
ಕರಾವಳಿ ಜಿಲ್ಲೆಯಲ್ಲಿ ಪ್ರಧಾನ ಕಚೇರಿಯ ಶಾಖೆಗಳು ಕೆಲವು ಗ್ರಾ.ಪಂ. ವ್ಯಾಪ್ತಿಯಲ್ಲಿ ಇರುವುದು ನಮ್ಮ ಗಮನಕ್ಕೆ ಬಂದಿದೆ. ಒಂದಕ್ಕಿಂತ ಹೆಚ್ಚು ಗ್ರಾ.ಪಂ.ಗಳಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದ ಶಾಖಾ ಕಚೇರಿ (ಪ್ರಧಾನ ಕಚೇರಿ ಇರುವ ಗ್ರಾ.ಪಂ. ಹೊರತುಪಡಿಸಿ)ಯಲ್ಲಿ ಖಾತೆ ಹೊಂದಿದ್ದು, ಹೂಡಿಕೆ ಮಾಡಿರುವ/ ಸಾಲ ಸೌಲಭ್ಯ ಪಡೆದಿರುವ ಸದಸ್ಯರಿಗೆ ಸರಕಾರದ ಆದೇಶದಿಂದ ಯಾವುದೇ ಸಮಸ್ಯೆಯಾಗದು. ಗ್ರಾ.ಪಂ.ನಲ್ಲಿ ಹೊಸ ಸಂಘ ಆರಂಭವಾಗುತ್ತಿದ್ದಂತೆ ಎಲ್ಲವೂ ಅದಕ್ಕೆ ವರ್ಗಾವಣೆಯಾಗಲಿದೆ. ಸದಸ್ಯತ್ವ ಒಂದು ಸಂಘದಿಂದ ಇನ್ನೊಂದು ಸಂಘಕ್ಕೆ ವರ್ಗಾವಣೆಯಾಗಲಿದೆ.
-ಡಾ| ಜಿ. ಉಮೇಶ್, ಸಹಕಾರಿ ಸಂಘಗಳ ಜಂಟಿ ನಿಬಂಧಕರು. ರಾಜು ಖಾರ್ವಿ ಕೊಡೇರಿ/ಎಂ.ಎಸ್. ಭಟ್