ಬೆಂಗಳೂರು: ರಾಜಕಾಲುವೆ ಒತ್ತುವರಿಯಿಂದ ಮಳೆಗಾಲದಲ್ಲಿ ಆಗುತ್ತಿರುವ ಅನಾಹುತಗಳ ತಡೆಗೆ ಮುಂದಾಗಿರುವ ಬೆಂಗಳೂರು ಮಹಾನಗರ ಕಾರ್ಯಾಚರಣೆ ಪಡೆ (ಬಿಎಂಟಿಎಫ್) ಒತ್ತುವರಿದಾರರ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಲು ವಿಶೇಷ ತಂಡ ರಚಿಸಿದೆ.
ಕಳೆದ ಕೆಲ ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೆಲ ಪ್ರದೇಶಗಳು ಜಲಾವೃತಗೊಳ್ಳುತ್ತಿವೆ. ರಾಜಕಾಲುವೆಗಳ ಒತ್ತುವರಿಯಿಂದಾಗಿ ಮಳೆನೀರು ಮನೆಗಳಿಗೆ ನುಗ್ಗುತ್ತಿದ್ದು, ಜನರು ತೊಂದರೆ ಅನುಭವಿಸುವಂತಾಗಿದೆ. ಆ ಹಿನ್ನೆಲೆಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡವರನ್ನು ಗುರುತಿಸಿ ದೂರು ದಾಖಲಿಸಲು ತೀರ್ಮಾನಿಸಿದೆ.
ಮಳೆಯಿಂದ ಇತ್ತೀಚೆಗೆ ಹಾನಿಗೊಳಗಾದ ಪ್ರದೇಶಗಳಲ್ಲಿನ ರಾಜಕಾಲುವೆ ಒತ್ತುವರಿ ಗುರುತಿಸಲು ಆರು ತಂಡಗಳನ್ನು ರಚನೆ ಮಾಡಲಾಗಿದೆ. ಈ ಆರು ತಂಡಗಳಿಗೆ ಒತ್ತುವರಿ ಗುರುತಿಸಲು ಸ್ಥಳಗಳನ್ನು ನೀಡಲಾಗಿದ್ದು, ಅದರಂತೆ ಸ್ಥಳಗಳ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಪಾಲಿಕೆಯ ಮಳೆ ನೀರುಗಾಲುವೆ ಅಧಿಕಾರಿಗಳು ದೂರು ನೀಡಿದರೆ ಸ್ವೀಕರಿಸಲಿದ್ದು, ಇಲ್ಲದಿದ್ದರೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು.
ಡಿವೈಎಸ್‌ಪಿ ಬಿ.ಜಗನ್ನಾಥ ರೈ ಅವರ ತಂಡ ಕೋರಮಂಗಲ ವ್ಯಾಪ್ತಿಯ ಎಸ್.ಟಿ.ಬೆಡ್, 4ನೇ, 5ನೇ, 7ನೇ ಬ್ಲಾಕ್ ಹಾಗೂ ಖೊಡೆ ಸರ್ಕಲ್ ಭಾಗಗಳಲ್ಲಿ ಆಗಿರುವ ಒತ್ತುವರಿಯನ್ನು ಗುರುತಿಸಿ ದೂರು ದಾಖಲಿಸಿಕೊಳ್ಳಲಿದ್ದಾರೆ. ಉಳಿದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಎಚ್.ಎಸ್.ಪರಮೇಶ್ವರ ನೇತೃತ್ವದ ತಂಡ ಜೆ.ಪಿ.ನಗರ ವ್ಯಾಪ್ತಿಯ ಡಾಲರ್ ಕಾಲೋನಿ, ಪೊಲೀಸ್ ಇನ್ಸ್‌ಪೆಕ್ಟರ್ ಸವಿತಾ ಅವರ ನೇತೃತ್ವದ ತಂಡ ಶಾಂತಿನಗರ ವ್ಯಾಪ್ತಿಯ ಆಸ್ಟಿನ್ ಟೌನ್, ಆಲಿ ಆಸ್ಕರ್ ರಸ್ತೆ, ಫ್ರೆಜರ್ ಟೌನ್ ಹಾಗೂ ವಿಲ್ಸನ್ ಗಾರ್ಡನ್ ಪೊಲೀಸ್ ವಸತಿ ಗೃಹ ಭಾಗಗಳಲ್ಲಿ ಪರಿಶೀಲನೆ ನಡೆಸಲಿದ್ದಾರೆ.
ಅದೇ ರೀತಿ ಪಿಎಸ್‌ಐ ವಿ.ಆರ್.ದೀಪಕ್ ನೇತೃತ್ವದ ತಂಡ ಮಹದೇವಪುರ ವ್ಯಾಪ್ತಿಯ ಎಚ್.ಎ.ಎಲ್. ವಿಮಾನ ನಿಲ್ದಾಣ ವಾರ್ಡ್, ಮಾರುತಿನಗರ ವಾರ್ಡ್, ಮಾಧವನಗರ ವೈಟ್‌ಫೀಲ್ಡ್ ವಾರ್ಡ್, ವಿಜ್ಞಾನ ನಗರ 1ನೇ ಅಡ್ಡರಸ್ತೆ, ಗುಳ್ಳಪ್ಪ ಬಡಾವಣೆಗಳಿಗೆ ಭೇಟಿ ನೀಡಲಿದೆ. ಪಿಎಸ್‌ಐ ವಿ.ಶಿವಕುಮಾರ್ ನೇತೃತ್ವದ ತಂಡ ಬೆಳ್ಳಂದೂರು ವ್ಯಾಪ್ತಿಯ ಸರ್ಜಾರಪು ರಸ್ತೆ, ಬಿ.ಅಂಬೇಡ್ಕರ್ ನಗರ, ಬೆಳ್ಳಂದೂರು ತಲಕಾವೇರಿ ಬಡಾವಣೆ,
ಹೊಸನಗರ 1ನೇ ಮುಖ್ಯ ರಸ್ತೆ, 5ನೇ ಅಡ್ಡರಸ್ತೆ, ಕಾಳಪ್ಪ ಬಡಾವಣೆ, ಹೊಸನಗರ ಗುರುರಾಜ್ ಬಡಾವಣೆ, 1ನೇ ಮುಖ್ಯ ರಸ್ತೆ ದೊಡ್ಡನೆಕ್ಕುಂದಿ, ಕಾಜಾಗ್ರಾಂಡ್ ಅಪಾರ್ಟ್‌ಮೆಂಟ್, ಪ್ರಸ್ಟೀಜ್ ವ್ಯಾಲಿ ಹತ್ತಿರ, ಯಮಲೂರು ರಸ್ತೆಗೆ ಭೇಟಿ ನೀಡಲಿದ್ದಾರೆ. ಪಿಎಸ್‌ಐ ಎ.ಅಮರೇಶ್‌ಗೌಡ ನೇತೃತ್ವದ ತಂಡ ಜ್ಯೋತಿ ನಗರ 1ನೇ ಮುಖ್ಯ ರಸ್ತೆ, ತಿಪ್ಪಯ್ಯ ಬಡಾವಣೆ, ಬಸವನಗರ ವಾರ್ಡ್‌ನ ಎಂ.ಎಕೆ.ಡಿ.ಫ್ರೆಂಟ್ ಮೆಸ್ ಅಪಾರ್ಟ್‌ಮೆಂಟ್, ಶಿರಡಿಸಾಯಿ ಬಡಾವಣೆ, ಭಟ್ಟರಹಳ್ಳಿಗೆ ಭೇಟಿ ನೀಡಲಿದ್ದಾರೆ.
ಜಂಟಿ ಆಯುಕ್ತರಿಗೆ ಸೂಚನೆ
ಪಾಲಿಕೆಯ ಎಂಟು ವಲಯದ ಜಂಟಿ ಆಯುಕ್ತರಿಗೆ ಈಗಾಗಲೇ ಬಿಎಂಟಿಎಫ್ ಅಧಿಕಾರಿಗಳು ರಾಜಕಾಲುವೆ ಪರಿಶೀಲನೆಯ ಕುರಿತು ಮಾಹಿತಿ ನೀಡಿದ್ದಾರೆ. ರಾಜಕಾಲುವೆ ಹಾಗೂ ಕೆರೆ ಒತ್ತುವರಿ ಸಂಬಂಧಿಸಿದಂತೆ ದೂರುಗಳು ಅಥವಾ ಮಾಹಿತಿ ಇದ್ದಲ್ಲಿ ಬಿಎಂಟಿಎಫ್ ಅಧಿಕಾರಿಗಳಿಗೆ ಅಥವಾ ಕೇಂದ್ರ ಕಚೇರಿಗೆ ನೀಡುವಂತೆ ಬಿಎಂಟಿಎಫ್ ಎಡಿಜಿಪಿ ಪ್ರಶಾಂತ ಕುಮಾರ್ ಠಾಕೂರ್ ಸೂಚಿಸಿದ್ದಾರೆ.