Advertisement

ಭವಿಷ್ಯದ ಶಾಸಕರಿಗೆ ಮಾದರಿ

01:06 AM Feb 25, 2023 | Team Udayavani |

ವಿಧಾನಸಭೆಯಲ್ಲಿ ಇನ್ನು ಮುಂದೆ ಬಿ.ಎಸ್‌.ಯಡಿಯೂರಪ್ಪ ಅವರ ಕಂಚಿನ ಕಂಠ ಕೇಳುವುದಿಲ್ಲ; ತಮ್ಮದೇ ಆದ ಶೈಲಿಯಲ್ಲಿ ವಿಚಾರವನ್ನು ಮಂಡಿಸುವ ಅವರ ಸಂಸದೀಯ ಪಟುತ್ವ ಇನ್ನು ಕಾಣಿಸುವುದಿಲ್ಲ. ಕರ್ನಾಟಕ ಕಂಡ ಅಪರೂಪದ ಹೋರಾಟಗಾರ, ಸಂಸದೀಯ ಪಟು ಬಿ.ಎಸ್‌. ಯಡಿಯೂರಪ್ಪ ಅವರು ಚುನಾವಣ ರಾಜಕೀಯದಿಂದ ನಿವೃತ್ತರಾಗಿರುವುದು ಸಹಜವಾಗಿಯೇ ಒಂದು ನಿರ್ವಾತವನ್ನು ಸೃಷ್ಟಿಸಲಿದೆ.

Advertisement

ಅತ್ಯದ್ಭುತ ಸಂಸದೀಯ ಪಟುಗಳನ್ನು ದೇಶಕ್ಕೆ ನೀಡಿದ ಕರ್ನಾಟಕ ವಿಧಾನಮಂಡಲಕ್ಕೆ ತನ್ನದೇ ಆದ ಇತಿಹಾಸವಿದೆ. ಅಂಥವರ ಸಾಲಿನಲ್ಲಿ ಬಿಎಸ್‌ವೈ ಸೇರಿದ್ದಾರೆ ಎನ್ನುವುದರಲ್ಲಿ ಅನುಮಾನ ಇಲ್ಲ. ಚರ್ಚೆ ಎಂದರೆ ಅಲ್ಲಿ ಆಕ್ರೋಶ ಇದೆ, ಆವೇಶ ಇದೆ, ಛಲ ಇದೆ, ಹೋರಾಟ ಇದೆ ಎಂದು ತೋರಿಸಿಕೊಟ್ಟ ಯಡಿಯೂರಪ್ಪ ವಿಧಾನಸಭೆಯ ಕಲಾಪಕ್ಕೆ ಹೊಸ ದಿಕ್ಕನ್ನೂ ಕೊಟ್ಟವರು. ಮುಂದಿನ ತಲೆಮಾರಿನ ಜನಪ್ರತಿನಿಧಿಗಳಿಗೂ ಮಾದರಿ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲದಿಂದ ಬಂದ ಯಡಿಯೂರಪ್ಪ, ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ರಾಜಕಾರಣಿಗಳ ಸಂಘಟನ ಚಾತುರ್ಯಕ್ಕೆ ಸದಾ ಮಾದರಿ. ಶಿಕಾರಿಪುರ ಪುರಸಭೆಯ ಚುನಾವಣೆಯಿಂದ ಹಿಡಿದು, ಇತ್ತೀಚಿನ ಶಿಕಾರಿಪುರ ವಿಧಾನಸಭೆ ಚುನಾವಣೆವರೆಗೂ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಶಿಕಾರಿಪುರದ ಜತೆಗೆ ಶಿವಮೊಗ್ಗ ಲೋಕಸಭೆ ಚುನಾವಣೆಗೂ ಸ್ಪರ್ಧಿಸಿ, ಗೆದ್ದು ಲೋಕಸಭೆಗೂ ಒಮ್ಮೆ ಹೋಗಿಬಂದರು.

ಬಿಎಸ್‌ವೈ ಅವರು ಮೊದಲ ಬಾರಿಗೆ ಶಿಕಾರಿಪುರದಿಂದ ವಿಧಾನಸಭೆ ಪ್ರವೇಶಿಸಿದ್ದು 1983ರಲ್ಲಿ. 23 ವರ್ಷಗಳ ಕಾಲ ವಿಪಕ್ಷದ ಸಾಲಿನಲ್ಲಿ ಕುಳಿತು 2007ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಅಧಿಕಾರ ಸ್ವೀಕಾರ ಮಾಡಿದರು. ಯಡಿಯೂರಪ್ಪ ಅವರು ಎರಡನೇ ಬಾರಿಗೆ ಸಿಎಂ ಆಗಿದ್ದು 2008ರಲ್ಲಿ. ಆಗ ಬಿಜೆಪಿ 110 ಸ್ಥಾನದಲ್ಲಿ ಗೆದ್ದು ಬಹುಮತಕ್ಕೆ ಕೇವಲ 3 ಶಾಸಕರ ಕೊರತೆ ಕಂಡಿತ್ತು. ಆಗಲೂ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಸರಕಾರ ರಚಿಸಿದ್ದ ಬಿಎಸ್‌ವೈ, ಉತ್ತಮ ಆಡಳಿತವನ್ನೇ ನೀಡಿದ್ದರು. 2018ರಲ್ಲಿ ಮತ್ತೆ 104 ಸ್ಥಾನಗಳಲ್ಲಿ ಗೆದ್ದು ಸಿಎಂ ಸ್ಥಾನಕ್ಕೇರಿದರೂ ಬಹುಮತಕ್ಕೆ ಬೇಕಾದ ಶಾಸಕರನ್ನು ಹೊಂದಿಸಿಕೊಳ್ಳಲು ಆಗದೇ ಇದ್ದುದರಿಂದ ರಾಜೀನಾಮೆ ನೀಡಬೇಕಾಯಿತು. ಆದರೆ 2019ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ನಿಂದ 17 ಶಾಸಕರು ಬಂದು, 4ನೇ ಬಾರಿಗೆ ಸರಕಾರ ರಚನೆ ಮಾಡಿದ್ದರು.

ಸಂಘಟನೆ ವಿಚಾರದಲ್ಲಿ ಬಿಎಸ್‌ವೈ ಅವರನ್ನು ಮೀರಿಸಲು ಯಾರಿಗೂ ಸಾಧ್ಯವಿಲ್ಲದ ವಿಚಾರ. ರೈತಾಪಿ ವಿಚಾರ ಮತ್ತು ರೈತ-ನೀರಾವರಿ ವಿಚಾರಗಳ ಹೋರಾಟದಿಂದಾಗಿಯೇ ರಾಜ್ಯಾದ್ಯಂತ ಬಿಜೆಪಿಗೆ ಕಾರ್ಯಕರ್ತರ ಪಡೆಯನ್ನೇ ಕಟ್ಟಿದರು. ಶಿಕಾರಿಪುರದಲ್ಲಿ ಜೀತಮುಕ್ತರ ಪರಿಹಾರಕ್ಕಾಗಿ 5 ತಿಂಗಳ ಹಗಲು ರಾತ್ರಿ ಧರಣಿ, 2002ರಲ್ಲಿ ಶಿವಮೊಗ್ಗದಲ್ಲಿ ಬಗರ್‌ಹುಕುಂ ಸಾಗುವಳಿದಾರರನ್ನು ಸರಕಾರ ಒಕ್ಕಲೆಬ್ಬಿಸಲು ನೋಡಿದಾಗ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಪಾದಯಾತ್ರೆ ಮಾಡಿ ಅಹೋರಾತ್ರಿ ಧರಣಿಯನ್ನೂ ನಡೆಸಿದ್ದರು.

ಕೃಷಿಕರ ಮನೆತನದಿಂದಲೇ ಬಂದವರಾಗಿದ್ದರಿಂದ ಬಿಎಸ್‌ವೈ ಅವರಿಗೆ ರೈತರ ಕಷ್ಟಗಳು ಗೊತ್ತಿತ್ತು. ಹೀಗಾಗಿಯೇ ರಾಜ್ಯದಲ್ಲಿ ಪ್ರತ್ಯೇಕ ಕೃಷಿ ಬಜೆಟ್‌ ಮಂಡಿಸುವ ಕೆಲಸ ಮಾಡಿದ್ದರು. ಹಾಗೆಯೇ ಹೆಣ್ಣು ಮಕ್ಕಳಿಗಾಗಿ ಭಾಗ್ಯಲಕ್ಷ್ಮಿ, ಉಚಿತ ಸೈಕಲ್‌ ನೀಡುವ ಯೋಜನೆಗಳನ್ನೂ ಮಾಡಿದ್ದರು. ಈ ರೀತಿ ಹೋರಾಟಗಳಿಂದಲೇ ರಾಜ್ಯದಲ್ಲಿ ಜನಜನಿತವಾಗಿದ್ದ ಬಿಎಸ್‌ವೈ ಅವರು, ಶುಕ್ರವಾರ ಚುನಾವಣ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ. ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದಿರುವ ಅವರು, ರಾಜಕೀಯದಲ್ಲಿ ಸಕ್ರಿಯವಾಗಿರುತ್ತೇನೆ ಎಂದೂ ಹೇಳಿದ್ದಾರೆ. ಬಿಎಸ್‌ವೈ ಹೆಸರು ರಾಜ್ಯ ರಾಜಕೀಯ ಇತಿಹಾಸದಲ್ಲಿ ಎಂದಿಗೂ ಅಳಿಯದೇ ಉಳಿದಿರುತ್ತದೆ. ಇವರ ಹೋರಾಟದ ಅನುಭವ ಮುಂದಿನ ಪೀಳಿಗೆಗೂ ಆದರ್ಶವಾಗಿರುತ್ತದೆ ಎಂದು ಹೇಳಲು ಅಡ್ಡಿಯೇನಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next