ಅಂತೂ ಇಂತೂ ವರ್ಷದ ಹೊಸತನ ಮೂಡಿಸುವ ಸಮಯ ಬಂದೇ ಬಿಟ್ಟಿತು. ಹಳ್ಳಿಗಳಲ್ಲಂತೂ ಮುಗಿಯದ ಸಂಭ್ರಮ. ಹಬ್ಬದ ವಾತಾವರಣ. ಎಲ್ಲಿ ನೋಡಿದರಲ್ಲಿ ಎತ್ತುಗಳು ನೇಗಿಲೊಡನೆ ಹುರಿದುಂಬಿ ಹೊಲಗಳಿಗೆ ಹೋಗುತ್ತಿರುವ ಜನರು. ಈ ಸಮಯವೇ ಒಂದು ಅದ್ಭುತವಾದದ್ದು. ಹಳ್ಳಿಯಲ್ಲಿ ಸಂಭ್ರಮ ತುಂಬಿದ ವಾತಾವರಣವೆಂದರೆ ಅದೇ ಬಿತ್ತನೆಯ ಸಮಯ.
ಎತ್ತಿನ ಗಾಡಿಯಲ್ಲಿ ಮನೆ ಮಂದಿಯೆಲ್ಲ ಹೊಲಗಳಿಗೆ ಹೋಗುವುದು ಎಂದರೆ ಎಲ್ಲಿಲ್ಲದ ಖುಷಿ. ಅದರಲ್ಲೂ ಬಿತ್ತನೆಯ ಸಮಯ ಜಿಟಿ ಜಿಟಿ ಮಳೆಯಲ್ಲಿ ಎಲ್ಲರೊಡನೆ ಪ್ರಕೃತಿಯ ಮಡಿಲಲ್ಲಿ ಕೆಲಸ ಮಾಡುವುದೇ ಆನಂದ. ಅಣ್ಣ ತಮ್ಮಂದಿರೊಡನೆ ಜಗಳವಾಡುತ್ತಾ ನಾ ಮುಂದು ತಾ ಮುಂದು ಎಂದು ಹಠ ಹಿಡಿದು ಕೆಲಸದಲ್ಲಿ ತಲ್ಲೀನರಾಗುವಂತ ಘಳಿಗೆ. ಅಮ್ಮ ಮಾಡಿದ ಬಿಸಿ ರೊಟ್ಟಿ, ಕೆಂಪು ಚಟ್ನಿ, ಮೊಸರು, ಬುತ್ತಿ ರೊಟ್ಟಿಯೊಡನೆ ತಿನ್ನಲು ಸೊಪ್ಪು ಸೆದೆ… ಆಹಾ! ಯಾವ ಹೊಟೇಲ್‌ಗಳಲ್ಲೂ ದೊರಕದ ಸವಿ ರುಚಿ ಅಡುಗೆ.
ಇನ್ನು ಅಪ್ಪನೊಂದಿಗೆ ಎತ್ತುಗಳ ಹಿಂದೆ ಹೊಲ ಉಳುತ್ತ ಹೊಲದ ತುಂಬೆಲ್ಲ ಓಡಾಡುವ ಈ ಸುಂದರ ಸಮಯವೇ ಮನಮೋಹಕ. ಅಮ್ಮನ ತಿಂಡಿ ತಿನಿಸು ಒಂದೆಡೆ ಹೊಲಗಳಿಗೆ ಕೈ ಬೀಸಿ ಕರೆಯುತ್ತವೆ. ಜತೆಗೆ ಹೊಲದಲ್ಲಿ ಬಿತ್ತಿ ಬಂದ ಅನಂತರ ಹಬ್ಬಕ್ಕೆ ಬಟ್ಟೆ ತರಲು ಪೇಟೆಗೆ ಹೋಗೋಣ ಎಂಬ ಅಪ್ಪನ ಮಾತು ನಮ್ಮಲ್ಲಿ ಆಸೆ ಹುಟ್ಟಿಸಿದ ಕಾರಣ ಅಪ್ಪನೊಂದಿಗೆ ಹೊಲಕ್ಕೆ ಹೋಗುತ್ತಿದ್ದೆವು.
ಅಂದು ಶಾಲೆಗೆ ಚಕ್ಕರ್ ಹೊಡೆದು ಹೊಲಗಳಿಗೆ ಹೋಗ್ತಿದ್ದ ನೆನಪು. ಮರುದಿನ ಶಾಲೆಯ ಬಾಗಿಲ ಹೊರಗೆ ನಿಂತು ಟೀಚರ್ ಕೇಳಿದ ಪ್ರಶ್ನೆ, ಎರಡು ದಿನ ಯಾಕೆ ಶಾಲೆಗೆ ಬಂದಿಲ್ಲ?, ಎಂದೊಡನೆ ತಡವರಿಸುತ್ತಾ ಹುಷಾರಿರಲಿಲ್ಲ ಎಂಬ ಉತ್ತರ ನೀಡಿ ಟೀಚರ್‌ಗೆ ಟೋಪಿ ಹಾಕಿ ಕ್ಲಾಸ್ ಒಳಗೆ ಹೋಗುತ್ತಿದ್ದೆವು.
ಹೊಲದಲ್ಲಿ ಅಪ್ಪ ಅಮ್ಮ ಯಾವುದೋ ತಪ್ಪಿಗೆ ಗದರಿದೊಡನೆ ಅವರಿಗೆ ಪ್ರತಿವಾದಿಸುತ್ತಾ ಒಂದೇ ಗುಣಿಯಲ್ಲಿ ಹತ್ತಾರು ಬೀಜ ಹಾಕಿ ಏನು ಗೊತ್ತಿಲ್ಲದಂತೆ ಸುಮ್ಮನಿರುತ್ತಿದ್ದ ಆ ಸಮಯ ಮತ್ತೆ ಮುಂದೆ ಯಾವತ್ತಾದರೂ ಬರಬಹುದೇ ಎಂಬ ನಿರೀಕ್ಷೆಯೇ ಮನಸ್ಸನ್ನು ಪುಳಕಗೊಳಿಸುತ್ತದೆ. ಹೊಲದಲ್ಲಿ ಪೂಜೆ ಮಾಡಿ ಕಾಯಿ ಒಡೆದು ನೈವೇದ್ಯ ಹಿಡಿದ ಬೆಲ್ಲಕ್ಕಾಗಿ ಕಾಯುತ್ತಿದ್ದ ಆ ಘಳಿಗೆ, ಕೊಬ್ಬರಿ ಬೆಲ್ಲ ತಿನ್ನುವ ಆ ಸಮಯವೇ ಮಜಾದಾಯಕ. ಕೃಷಿ ಎಂಬುದು ಒಂದು ಸಂಸ್ಕೃತಿ, ಜತೆಗೆ ಅದೊಂದು ಸಂಸ್ಕಾರ ಕೂಡ.
ಫಾತಿಮಾ
ಬ್ಯಾಡಗಿ ಕಾಲೇಜು, ಹುಬ್ಬಳ್ಳಿ