ಧಾರವಾಡ: ಇವರದು ಬಿಡಿಸಲಾಗದ ಗಟ್ಟಿ ಸ್ನೇಹ. ನಾಲ್ಕು ಜನ ನ್ಯಾಯಾಧೀಶರು, ಒಬ್ಬರು ಮಾಜಿ ಸಚಿವರು, ಒಬ್ಬರು ಕಸಾಪ ಮಾಜಿ ಅಧ್ಯಕ್ಷರು, ಇಬ್ಬರು ನಿವೃತ್ತ ಐಎಎಸ್ ಅಧಿಕಾರಿಗಳು, ಅಷ್ಟೇ ಯಾಕೆ, ಇಂದಿನ ಕರ್ನಾಟಕದ ಲೋಕಾಯುಕ್ತರು ಕೂಡ, ಈ ಸ್ನೇಹ ತಂಡದ ಭಾಗವಾಗಿದ್ದಾರೆ!
ಹೌದು, ಬರೋಬ್ಬರಿ 46 ವರ್ಷಗಳ ನಂತರ ಒಂದೇ ಕಾಲೇಜಿನಲ್ಲಿ ಓದಿದ್ದ 75ಕ್ಕೂ ಹೆಚ್ಚು ಜನ ಸ್ನೇಹಿತರು ಒಟ್ಟಾಗಿ ಸೇರಿ, ತಾವು ಓದಿದ ಧಾರವಾಡದ ಸರ್ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನ ಕ್ಯಾಂಪಸ್‌ನಲ್ಲಿ ಸುತ್ತಾಡಿದರು. ತಾವು ಕಲಿಯುವಾಗ ಕೂರುತ್ತಿದ್ದ ಜಾಗೆಗಳಲ್ಲಿ ಕುಳಿತು ಹರಟೆ ಹೊಡೆದರು, ತಾವು ಓಡಾಡಿದ ಕೆಸಿಡಿ ರಸ್ತೆಯಲ್ಲಿ ಓಡಾಡಿ ಸಂಭ್ರಮಿಸಿದರು.
1976ರಲ್ಲಿ ಸರ್ ಸಿದ್ದಪ್ಪ ಕಂಬಳಿ ಕಾನೂನು ವಿದ್ಯಾಲಯದ ವಿದ್ಯಾರ್ಥಿಳಾಗಿ ಪದವಿ ಪಡೆದುಕೊಂಡು ವಿಶಾಲ ಜಗತ್ತಿನ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸುವಷ್ಟು ಸಾಧನೆ ಮಾಡಿದ ಈ ಗೆಳೆಯರ ಬಳಗ ಇತ್ತೀಚೆಗೆ ಧಾರವಾಡದಲ್ಲಿ ಸೇರಿ, ತಮ್ಮ ವಿದ್ಯಾರ್ಥಿ ಜೀವನದ ಸುವರ್ಣ ಕಾಲದ ನೆನಪುಗಳನ್ನು ಮೆಲುಕು ಹಾಕಿ ಖುಷಿಪಟ್ಟಿತು.
ಅಂದಿನ ಧಾರವಾಡ, ಇಂದಿನ ಧಾರವಾಡಕ್ಕೂ ಅಜಗಜಾಂತರ ವ್ಯತ್ಯಾಸವಾಗಿದ್ದು, ತಾವು ಬಸ್ ನಿಲ್ದಾಣದಿಂದ ನಡೆದುಕೊಂಡೇ ಕಾಲೇಜಿಗೆ ಬರುತ್ತಿದ್ದ ದಿನಗಳು, ಬುತ್ತಿಕಟ್ಟಿಕೊಂಡು ಬರುತ್ತಿದ್ದ ಹಳ್ಳಿ ಹುಡುಗರು, ಅಷ್ಟೇಯಲ್ಲ, ಬುತ್ತಿ ಹಂಚಿ ತಿನ್ನುತ್ತಿದ್ದ ಜೀವದ ಗೆಳೆಯರ ಮಧ್ಯದ ಸ್ನೇಹ ಎಲ್ಲವನ್ನು ಯಾರೂ ಇಂದಿಗೂ ಮರೆತಿಲ್ಲ ಎಂಬುದನ್ನು ಪುನಃ ಪುನಃ ಗೆಳೆಯರ ಮಧ್ಯೆ ಮಾತಾಡಿಕೊಂಡು ಹರಟೆ ಹೊಡೆದು ಆನಂದಿಸಿದರು.
ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ತಮಗೆ ಕಲಿಸಿದ ಗುರುಗಳಾದ ಪ್ರೊ|ಎಸ್.ಎಸ್. ಆಲೂರ, ಪ್ರೊ| ಎ.ಆರ್. ದೇಸಾಯಿ, ಪ್ರೊ| ಎಸ್.ಸಿ. ದಳವಾಯಿ ಹಾಗೂ ನಿವೃತ್ತ ಅಧೀಕ್ಷಕರಾಗಿರುವ ಬಿ.ಜಿ. ಪಾಟೀಲ ಅವರನ್ನು ಖಾಸಗಿ ಹೋಟೆಲ್ ವೊಂದರಲ್ಲಿ ಕಾರ್ಯಕ್ರಮ ನಡೆಸಿ ಗೌರವಿಸಿದರು.
ನಿವೃತ್ತ ನ್ಯಾಯಾಧೀಶರಾದ ರವೀಂದ್ರ ವೈದ್ಯ, ನಿವೃತ್ತ ಐಎಎಸ್ ಅಧಿಕಾರಿ ಎಸ್.ಜಿ. ಹೆಗಡೆ, ಮಾಜಿ ಸಚಿವರಾದ ಎ.ಬಿ. ಪಾಟೀಲ್, ಎನ್. ಎಸ್. ದೇವರವರ, ವಿ.ಕೆ. ಪಾಟೀಲ, ಕಸಾಪ ಮಾಜಿ ಅಧ್ಯಕ್ಷ ಮನು ಬಳಿಗಾರ, ಜಿ.ಎಂ. ವಾಲಿ, ಜಿ.ಆರ್. ತಲಗೇರಿ ಸೇರಿದಂತೆ ಇದೇ ಸಾಲಿನ 70ಕ್ಕೂ ಹೆಚ್ಚು ಜನ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಾವು ಕಲಿತ ಕಾಲೇಜಿಗೆ ಏನಾದರೂ ಕೊಡುಗೆ ಕೊಡಬೇಕು ಎಂದು ಸ್ನೇಹ ಸಮ್ಮಿಲನದ ದಿನ ನಾವೆಲ್ಲರೂ ನಿರ್ಣಯ ತೆಗೆದುಕೊಂಡಿದ್ದೇವೆ. ಅದೇ ಪ್ರಕಾರ ಸಹಾಯ ಮಾಡುತ್ತೇವೆ.
ಸಿ.ವಿ. ಕೋಟಿ,
1976ನೇ ಸಾಲಿನ ಕಾನೂನು ಕಾಲೇಜು
ವಿದ್ಯಾರ್ಥಿ, ಹಿರಿಯ ವಕೀಲರು