ಚಿಕ್ಕಮಗಳೂರು: ಕೊಪ್ಪ ತಾಲೂಕು ಕುದುರೆಗುಂಡಿಯಲ್ಲಿ ಟಿಂಬರ್ ಕೆಲಸಕ್ಕೆ ತೆರಳಿದ್ದ ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರು ಮೂಲದ ವ್ಯಕ್ತಿಯಲ್ಲಿ ಕೆಎಫ್‌ಡಿ (ಮಂಗನ ಕಾಯಿಲೆ) ಸೋಂಕು ಪತ್ತೆಯಾಗಿದೆ.
ಕಳೆದ ಕೆಲವು ದಿನಗಳಿಂದ ಜ್ವರ ಕಾಣಿಸಿಕೊಂಡಿದ್ದು, ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆ ಸಿಬ್ಬಂದಿ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಿದ್ದು, ಈ ವೇಳೆ ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ವೈರಸ್ ದೃಢಪಟ್ಟಿದ್ದು ಚಿಕಿತ್ಸೆ ನೀಡಲಾಗಿದೆ. ಸದ್ಯ ಸೋಂಕಿನಿಂದ ಗುಣಮುಖರಾಗಿದ್ದಾರೆ. ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಕೊಪ್ಪ, ನರಸಿಂಹರಾಜಪುರ ತಾಲೂಕು ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತಿದ್ದು, ಕಳೆದ 2-3 ವರ್ಷಗಳಲ್ಲಿ ಕೆಲವು ಪ್ರಕರಣಗಳು ಪತ್ತೆ ಯಾ ಗಿ ದ್ದವು. ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ರೋಗ ಉಲ್ಬಣಗೊಳ್ಳುವುದನ್ನು ನಿಯಂತ್ರಿಸಿತ್ತು. ಆ ಬಳಿಕ ಸೋಂಕು ಕಂಡು ಬಂದಿರಲಿಲ್ಲ. ಬಾಳೆಹೊನ್ನೂರು ಮೂಲದ ವ್ಯಕ್ತಿಯಲ್ಲಿ ಸೋಂಕು ದೃಢ ಪ ಡುವ ಮೂಲಕ ಈ ವರ್ಷ ಮಲೆನಾಡಿನಲ್ಲಿ ಮೊದಲ ಕೆಎಫ್‌ಡಿ ಸೋಂಕು ಪತ್ತೆಯಾಗಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಸೋಂಕು ಕಾಣಿಸಿಕೊಂಡ ಪ್ರದೇಶದ ಸುತ್ತಮುತ್ತ ಆರೋಗ್ಯ ಇಲಾಖೆಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲಿನ ನಿವಾಸಿಗಳ ಸ್ಯಾಂಪಲ್ ಪಡೆದು ಪರೀಕ್ಷೆಗೆ ರವಾನಿಸಲಾಗಿದೆ. ಇದು ಕಾಡಿನಲ್ಲಿರುವ ಉಣಗಿ (ಉಣ್ಣೆ)ನಿಂದ ಹರಡುವ ಕಾಯಿಲೆಯಾಗಿದ್ದು, ಅಲ್ಲಿನ ಜನರಿಗೆ ಡಿಎಂಪಿ ಆಯಿಲ್‌ಗಳನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ| ಉಮೇಶ್ ತಿಳಿಸಿದ್ದಾರೆ.