Advertisement
ಈ ನಿಟ್ಟಿನಲ್ಲಿ ಅಡುಗೆ ಎನ್ನುವುದೊಂದು ಕಲೆ. ಯಾರಿಗೆ ತರಹೇವಾರಿ ಅಡುಗೆ ಮಾಡಲು ಬರುತ್ತದೆಯೋ ಅವರು ಹೆಚ್ಚು ಆರೋಗ್ಯಭರಿತ ಆಯ್ಕೆಗಳನ್ನು ಮಾಡಲು ಸಾಧ್ಯ. ಹಣ್ಣು, ತರಕಾರಿ, ಮೊಳಕೆಕಾಳು, ಸಿಪ್ಪೆ, ಬೀಜ ಎಂದೆಲ್ಲ ಸರಿಯಾಗಿ ಸತ್ವಭರಿತ ಆಹಾರ ಅವರಿಗೆ ತಯಾರಿಸಲು ಸಾಧ್ಯ. ಸೊಪ್ಪಿನಿಂದ ತರಹೇವಾರಿ ಅಡುಗೆ, ಕಾಳುಗಳಿಂದ ವೈವಿಧ್ಯ, ತಂದ ದಿನಸಿ ಎಲ್ಲ ಖಾಲಿಯಾದರೆ ಕಿತ್ತಳೆ ಸಿಪ್ಪೆಯಿಂದಲೋ, ಬಾಳೆದಿಂಡು ಮೊದಲುಗೊಂಡು ಯಾವುದೋ ಚಿಗುರು, ಎಲೆ, ಕಾಯಿಯಿಂದಲೂ ಅಡುಗೆಯ ಮಾಡಲು ಸಾಧ್ಯ ಪ್ರಯೋಗ ಮಾಡುತ್ತಿರುತ್ತಾರೆ.ಅಡುಗೆ ಗೊತ್ತಿರುವವರು ಸಣ್ಣ ಮಟ್ಟಿಗೆ ವೈದ್ಯರೂ ಆಗುವುದೊಂದು ಚೋದ್ಯ. ಸಣ್ಣಪುಟ್ಟ ಕಷಾಯ, ಸಾರು ಎಂದೆಲ್ಲ ಜ್ವರದ ಲಕ್ಸುರಿಯನ್ನು ಅನುಭವಿಸಲು, ಡಯಟ್‌ಎಂದು ಹಲವು ವಿಧದ ಸಲಾಡ್, ಸೂಪ್, ಮೊಳಕೆ ಕಾಳು ಕೋಸಂಬರಿ ಎಂದೆಲ್ಲ ವೆರೈಟಿ ಆಗಿರಲು ಅಡುಗೆ ಗೊತ್ತಿರಬೇಕು. ಹಳೆಯ ಸಿನಿಮಾಗಳನ್ನು ಹೊರತುಪಡಿಸಿದರೆ ಈಗಿನ ವಿಭಕ್ತ ಕುಟುಂಬಗಳಲ್ಲಿ ಅಡುಗೆಯವರು ನೋಡಿದ ಹಾಗಿಲ್ಲ. (ಮನೆಗೆ ಬಂದು ಚಪಾತಿ ಲಟ್ಟಿಸಿಕೊಡುವ, ಒಂದೆರಡು ಹೊತ್ತಿನ ಬೇಸಿಕ್ ಅಡುಗೆ ಮುಗಿಸುವ ಹೆಲ್ಪರ್‌ಗಳಿದ್ದಾರೆ). ಹಿಂದಿನ ಕಾಲದ ಅವಿಭಕ್ತ ಕುಟುಂಬಗಳಲ್ಲಿ ರೊಟ್ಟಿ ಬಡಿಸುವ, ಬಾವಿಯಿಂದ ನೀರು ಸೇದುವ, ಒಲೆಯಲ್ಲಿ ಅನ್ನ ಬೇಯಿಸುವ, ರಾಗಿ ಮುದ್ದೆ ಮಾಡುವ, ಮರಳಿ ರಾತ್ರಿಯ ಅಡುಗೆ ಎಂದೆಲ್ಲ ಎಷ್ಟೊಂದು ದುಡಿಯುತ್ತಿದ್ದರು ಎಂದರೆ ಮರುಕವಾಗುತ್ತದೆ.ಅದರಲ್ಲೇ ಸಂತೃಪ್ತಿ ಕಂಡುಕೊಳ್ಳುವವರು ಇದ್ದಾರೆನ್ನಿ. ಈಗಿನ ಫಾಸ್ಟ್‌ಫುಡ್ ಜಮಾನಾದಲ್ಲಿ ಸ್ವಿಗ್ಗಿ, ಝಮೊಟೋ, ಪಿಜ್ಜಾ ಹಟ್ ಎಂದು ಮನೆಗೇ ಫುಡ್‌ಡೆಲಿವರಿ ಇರುವುದು ಹೌದಾದರೂ, ಹೋಮ್ಲಿಫುಡ್, ಕೇಟರಿಂಗ್‌ನವರು ಕೂಡ ಇದ್ದರೂ ಇವನ್ನೆಲ್ಲ ದಿನಾ ತರಿಸಿಕೊಳ್ಳಲಾಗುವುದಿಲ್ಲ ಹಾಗೂ ಅಗತ್ಯವಿಲ್ಲ ಕೂಡ.
Related Articles
Advertisement
ಯಾವುದೇ ಆಹಾರ ಸಂಸ್ಕೃತಿ ಆಯಾ ಭಾಗದಲ್ಲಿನ ಸಂಪನ್ಮೂಲಗಳು, ಹವಾಮಾನಗಳನ್ನು ಅವಲಂಬಿಸಿರುವುದರಿಂದ, ಅನೇಕ ತಲೆಮಾರುಗಳ ಶ್ರೀಮಂತ ಅನುಭವವೂ ಅವರಲ್ಲಿ ಇರುವುದರಿಂದ ಎಲ್ಲ ಆಹಾರ ಪದ್ಧತಿಯನ್ನೂ ನಾವು ಗೌರವಿಸಬೇಕು. ಹೀಗಾಗಿಯೇ, ದಕ್ಷಿಣಕನ್ನಡದವರಿಗೆ ವಾರಕ್ಕೊಮ್ಮೆಯಾದರೂ ಕುಚ್ಚಲಕ್ಕಿ ಗಂಜಿ ಇಲ್ಲದಿದ್ದರೆ ಸಮಾಧಾನ ಇಲ್ಲ. “ಮುದ್ದೆ ತಿನ್ನಲ್ವಾ ನೀವು’ ಎಂದು ಬಯಲು ಸೀಮೆಯ ಗೆಳತಿ ಇಷ್ಟಗಲ ಕಣ್ಣರಳಿಸಿ ಅಚ್ಚರಿ ವ್ಯಕ್ತಪಡಿಸಿದ್ದು ಈಗಲೂ ನೆನಪಿದೆ. ಬಾಣಂತಿಯರ ಪಥ್ಯದ ಅಡುಗೆ, ಎಳೆ ಶಿಶುಗಳ ಆಹಾರ ಜಾತ್ರೆ, ಮದುವೆ, ಸಮ್ಮೇಳನ ಇತ್ಯಾದಿ ದೊಡ್ಡ ಮಟ್ಟದ ಅಡುಗೆ, ಫೈವ್‌ಸ್ಟಾರ್ ಹೊಟೇಲ್ ಲಕ್ಸುರಿ- ಹೀಗೆ ಅಡುಗೆಯದು ವಿಶ್ವರೂಪ.
ಇತ್ತೀಚೆಗೆ ಹೊಟೇಲ್ ಮ್ಯಾನೇಜ್‌ಮೆಂಟ್ ಕಾಲೇಜ್ ಒಂದಕ್ಕೆ ಹೋಗಿದ್ದಾಗ ವಿದ್ಯಾರ್ಥಿಗಳು ನೀಟಾಗಿ ಭಿತ್ತಿಪತ್ರಿಕೆಯಲ್ಲಿ ಕೊತ್ತಂಬರಿ, ಜೀರಿಗೆ, ಎಳ್ಳು ಹೀಗೆ ಕಾಳುಗಳನೆಲ್ಲ ಜೋಡಿಸಿಟ್ಟಿದ್ದರು.ಅದೇ ರೀತಿ ಸ್ಪೂನ್, ಫೋರ್ಕ್ ಇತ್ಯಾದಿಗಳನ್ನು ಕೂಡ. ಇನ್ನೊಂದು ಕಡೆಯಲ್ಲಂತೂ ಎಲ್ಲ ತರದ ಬಾಟಲಿಗಳೂ (ಖಾಲಿಯಾದ) ನೀಟಾಗಿ ಜೋಡಿಸಲ್ಪಟ್ಟಿದ್ದವು. ಅಡುಗೆಯನ್ನೂ ಕಾಲೇಜುಗಳಲ್ಲಿ ಕಲಿಸುತ್ತಾರೆ ಎಂದರೆ ನಮ್ಮ ಅಜ್ಜಿ ಬೆರಗಾಗುತ್ತಿದ್ದರು. ಬ್ಯಾಚುರಲ್ ಆಫ್ ಫುಡ್ ಎಂಡ್ ನ್ಯೂಟ್ರಿಶನ್‌ನಂತಹ ಕೋರ್ಸ್‌ಗಳನ್ನು ಇಷ್ಟಪಟ್ಟು ಮಾಡಿ ಉನ್ನತ ಹುದ್ದೆಗಳಲ್ಲಿ ಇರುವವರಿದ್ದಾರೆ. ಡಯಟೀಶಿಯನ್ ಮಾತ್ರವಲ್ಲದೆ ಕಾಫಿ, ಚಾಕೊಲೇಟ್ ಇತ್ಯಾದಿಗಳನ್ನು ಟೇಸ್ಟ್ ಮಾಡುವ ಹುದ್ದೆಯೂ ಇದೆ ಎಂಬ ರುಚಿಕರ ಮಾಹಿತಿ ತಿಳಿಯಿತು.
ಕೆಲವು ವರ್ಷಗಳ ಹಿಂದೆ ಅಡುಗೆ ಪುಸ್ತಕಗಳನ್ನು ಟಿವಿ ಪ್ರೋಗ್ರಾಮ್‌ಗಳನ್ನು ನೋಡಿ ಅಡುಗೆ ಕಲಿಯುತ್ತಿದ್ದೆವು. ಈಗಂತೂ ಅಡುಗೆಯ ಹಲವಾರು ಗ್ರೂಪ್‌ಗ್ಳು, ವಿಡಿಯೋಗಳು ಇತ್ತೀಚೆಗೆ ನಿಧನರಾದ ನಾರಾಯಣ ರೆಡ್ಡಿಯವರ ಗ್ರಾಂಡ್ ಪಾ ಕಿಚನ್ ಎನ್ನುವ ಯೂಟ್ಯೂಬ್ ವಿಡಿಯೋಕ್ಕೆ 60 ಲಕ್ಷಕ್ಕೂ ಮೀರಿ ವೀಕ್ಷಕರು ಇದ್ದರಂತೆ. ಸ್ಲೋಕುಕಿಂಗ್, ಪುಟ್ಟ ಪುಟ್ಟ ಪಾತ್ರೆಗಳಲ್ಲಿ ಅಡುಗೆ, ಹಳ್ಳಿಗಳಲ್ಲಿ ನದಿತೀರಗಳಲ್ಲಿ ಅಡುಗೆ ಹೀಗೆ ಅವುಗಳ ಆಕರ್ಷಣೆ ಹೆಚ್ಚಿಸುತ್ತಿರುತ್ತಾರೆ. ಇನ್ನು ಆಹಾರ ಎನ್ನುವುದು ದೇಶ, ಧರ್ಮ, ಮತ, ಒಳಪಂಗಡಗಳ ಸಂಸ್ಕೃತಿಯೇ ಆಗಿದ್ದು ಆಹಾರದ ಆಧಾರದ ಮೇಲೆಯೇ ಗಲಭೆಗಳಾಗುವುದಿದೆ. ಅದೇ ಜಗತ್ತಿನ ಅರಿವು ಜಾಸ್ತಿ ಆಗುತ್ತಿದ್ದಂತೆ ಆಹಾರದ ಮಡಿವಂತಿಕೆ ಕಡಿಮೆಯಾಗಿ ವ್ಯತ್ಯಾಸಗಳನ್ನು ಗೌರವಿಸುತ್ತಾರೆ. ಒಂದು ರೀತಿಯ ಕಾಸ್ಮೋಪಾಲಿಟನ್ ಅಭಿರುಚಿಯೂ ಬೆಳೆಯುತ್ತಿದೆ. ಬೇರೆ ಬೇರೆ ದೇಶಗಳ, ಪ್ರದೇಶಗಳ ಅಡುಗೆಗಳನ್ನು ಜನರು ಸವಿಯಲಿಚ್ಛಿಸುತ್ತಾರೆ. ಹಾಗೂ ಅವು ಲಭಿಸುವ ಮಾಲ್‌ಗಳು ಜನಪ್ರಿಯವಾಗಿರುವುದನ್ನೂ ನಾವಿಲ್ಲಿ ಗಮನಿಸಬೇಕು. ಅದೇ ಸಮಯ ವಿದೇಶದ ಅಡುಗೆಗಳು ಭಾರತೀಯತೆಗೆ ಒಗ್ಗಿಕೊಳ್ಳುವುದನ್ನೂ ಗಮನಿಸಬೇಕು- ಮಸಾಲೆ ಹಚ್ಚಿಕೊಂಡ ಚೈನೀಸ್ ಖಾದ್ಯಗಳ ಹಾಗೆ.
ಹೆಣ್ಣು¡ಮಕ್ಕಳಿಗೂ ಅಡುಗೆಗೂ ಗಾಢವಾದ ಸಂಬಂಧ. ಮೊದಲಿನಂತೆ ಗಂಟೆಗಟ್ಟಲೆ ಅಡುಗೆಮನೆಯಲ್ಲೇ ಕಾಲ ಕಳೆಯಬೇಕಾದ ಆವಶ್ಯಕತೆ ಇಲ್ಲದಿದ್ದರೂ ಮನೆಕೆಲಸ, ಅಡುಗೆಯ ಶ್ರಮವನ್ನು ಹಂಚಿಕೊಂಡರೆ ಅದೆಷ್ಟೋ ಗೃಹಣಿಯರು,ಉದ್ಯೋಗಸ್ಥ ಮಹಿಳೆಯರು ಒಂದಿಷ್ಟು ಹಗುರವಾಗಬಹುದು.
ಜಯಶ್ರೀ ಬಿ. ಕದ್ರಿ