Advertisement

ಅಮೃತಮತಿಯ ಮರುವ್ಯಾಖ್ಯಾನ

10:13 AM Feb 08, 2020 | Lakshmi GovindaRaj |

ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶನದ “ಅಮೃತಮತಿ’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ನಟ ರಾಘವೇಂದ್ರ ರಾಜ್‌ಕುಮಾರ್‌ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಇದೇ ವೇಳೆ ಅತ್ಯುತ್ತಮ ನಟ ರಾಜ್ಯಪ್ರಶಸ್ತಿಗೆ ಭಾಜನರಾಗಿರುವ ರಾಘಣ್ಣ ಅವರನ್ನು “ಅಮೃತಮತಿ’ ಚಿತ್ರತಂಡ ಆತ್ಮೀಯವಾಗಿ ಸನ್ಮಾನಿಸಿತು.

Advertisement

“ಅಮೃತಮತಿ’ ಚಿತ್ರದ ಬಗ್ಗೆ ದೀರ್ಘ‌ವಾಗಿ ವಿವರಣೆ ನೀಡಿದ ನಿರ್ದೇಶಕ ಬರಗೂರು ರಾಮಚಂದ್ರಪ್ಪ, “ಇದು ಜನ್ನಕವಿಯ ಯಶೋಧರ ಚರಿತೆ ಆಧರಿತವಾಗಿರುವ ಸಿನಿಮಾ. ಯಶೋಧರ ಚರಿತೆಯಲ್ಲಿ ಬರುವ ಅಮೃತಮತಿ ಪ್ರಸಂಗವನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಅನೇಕರಿಗೆ ಒಂದು ಕುತೂಹಲವಿದೆ. ಅದೇನೆಂದರೆ ಮೂಲಕೃತಿಯಲ್ಲಿ ಅಮೃತಮತಿ ಕೊನೆಯಲ್ಲಿ ಎಲ್ಲರಿಗೂ ವಿಷಕೊಟ್ಟು ಸಾಯಿಸ್ತಾಳೆ.

ಹಾಗಾಗಿ, ಇಲ್ಲಿ ಬರಗೂರು ಸಾಯಿಸ್ತಾರೆ, ಏನ್‌ ಮಾಡಿದ್ದಾರೆಂಬ ಕುತೂಹಲವಿದೆ. ಅದನ್ನು ಸಿನಿಮಾದಲ್ಲೇ ನೋಡಿದಾಗ ಗೊತ್ತಾಗುತ್ತದೆ. ಪುನರ್‌ಸೃಷ್ಟಿ, ಮರುಹುಟ್ಟಿನ ಪರಂಪರೆಯಲ್ಲಿ ಇಡೀ ಭಾರತದ ಸಾಂಸ್ಕೃತಿಕ ಪರಂಪರೆಯಲ್ಲಿ ಇದೆ. ನಾನು ಕೂಡಾ ಆ ಪರಂಪರೆಯನ್ನು ಮುಂದುವರೆಸುತ್ತಾ, ಅಮೃತಮತಿಗೆ ಸಿನಿಮಾ ಮುಖಾಂತರವಾಗಿ ಮರುಹುಟ್ಟು ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಇದು ಬರೀ ಮರುಹುಟ್ಟು ಅಲ್ಲ.

ಇದೊಂದು ಪುನರ್‌ ವ್ಯಾಖ್ಯಾನ ಎನ್ನಬಹುದು. ಅರಮನೆಯಲ್ಲಿ ಇರುವ ರಾಣಿ, ಆನೆ ಲಾಯದವನತ್ತ ಹೋಗುತ್ತಾಳೆ. ನಾನಿಲ್ಲಿ ಆನೆ ಬದಲು ಕುದುರೆ ಲಾಯ ಎಂದು ಬದಲಿಸಿಕೊಂಡಿದ್ದೇನೆ. ಅದಕ್ಕೆ ಕಾರಣ ನಮ್ಮ ಕಲಾಕೃತಿಗಳಲ್ಲಿ, ಸಾಹಿತ್ಯಗಳಲ್ಲಿ ಕುದುರೆ ಕಾಮದ ಸಂಕೇತ. ಹಾಗಾಗಿ, ಕುದುರೆಯನ್ನು ಬಳಸಿಕೊಂಡಿದ್ದೇನೆ. ಅರಮನೆ ಭೋಗ ಆದರೆ, ಕುದುರೆ ಲಾಯ ಸುಖ. ಹಾಗಾಗಿ, ನನ್ನ ಚಿತ್ರ ಭೋಗ ಮತ್ತು ಸುಖ ಇವುಗಳಲ್ಲಿನ ವ್ಯತ್ಯಾಸಗಳನ್ನು ಹೇಳುತ್ತಾ ಹೋಗುತ್ತದೆ.

ಅರಮನೆ ಅಮೃತಮತಿಗೆ ಸೆರೆಮನೆಯಾಗಿರುತ್ತದೆ. ಹಾಗಾಗಿ, ಆಕೆ ಹೊರಮನೆಯನ್ನು ಹುಡುಕುತ್ತಾ ಹೋಗುತ್ತಾಳೆ. ಅರಮನೆ, ಸೆರೆಮನೆ ಮತ್ತು ಹೊರಮನೆ ಈ ಮೂರರ ಅಂತರಗಳನ್ನು, ತಳಮಳಗಳನ್ನು ಅಮೃತಮತಿ ಪಾತ್ರದ ಮೂಲಕ ಪುನರ್‌ರೂಪಿಸುವ ಪ್ರಯತ್ನವನ್ನು ನಾನು ಮತ್ತು ನನ್ನ ಚಿತ್ರತಂಡ ಮಾಡಿದೆ. ಅಮೃತ ಮತಿಯ ಆತ್ಮಸಾಕ್ಷಿಯ ಶೋಧವನ್ನು ನಡೆಸುವ ಪ್ರಯತ್ನವೂ ಹೌದು.

Advertisement

ಒಬ್ಬ ಯುವರಾಣಿಯಾಗಿರುವವಳು ಒಬ್ಬ ಸಾಮಾನ್ಯ ಸೇವಕನ ಬಳಿ ಯಾಕೆ ಹೋಗುತ್ತಾಳೆ, ಕೇವಲ ಕಾಮಕ್ಕಾಗಿಯೇ- ಈ ಪ್ರಶ್ನೆಯನ್ನು ಹಾಕಿಕೊಂಡು ಹೆಣ್ಣಿನ ಘನತೆಯನ್ನು ಎತ್ತಿಹಿಡಿಯುವ ರೀತಿಯಲ್ಲಿ ಮರುವ್ಯಾಖ್ಯಾನ ಮಾಡಿದ್ದೇವೆ’ ಎಂದು ಚಿತ್ರದ ಬಗ್ಗೆ ವಿವರ ನೀಡಿದರು. ಈ ಚಿತ್ರವನ್ನು ನಿರ್ಮಿಸಿರುವ ಪುಟ್ಟಣ್ಣ ಕೂಡಾ ಒಳ್ಳೆಯ ಸಿನಿಮಾ ಮಾಡಿರುವ ಖುಷಿ ಹಾಗೂ ಬರಗೂರು ರಾಮಚಂದ್ರಪ್ಪನವರ ವ್ಯಕ್ತಿತ್ವದ ಬಗ್ಗೆ ಮಾತನಾಡಿದರು.

ಚಿತ್ರದಲ್ಲಿ ಅಮೃತಮತಿಯಾಗಿ ನಟಿಸಿರುವ ಹರಿಪ್ರಿಯಾಗೆ ಇದು ಹೊಸಬಗೆಯ ಪಾತ್ರವಂತೆ. “ನಾನು ಈ ಸೆಟ್‌ಗೆ ಮಗುವಾಗಿ ಹೋಗಿದ್ದೆ. ನಿರ್ದೇಶಕರು ಏನು ಹೇಳುತ್ತಾರೋ ಅದನ್ನಷ್ಟೇ ಮಾಡಿದ್ದೇನೆ. ಬರಗೂರು ಅವರ ಸಿನಿಮಾದಲ್ಲಿ ನಟಿಸಿದ್ದರಿಂದ ಸಾಕಷ್ಟು ಹೊಸ ವಿಷಯಗಳನ್ನು ಕಲಿತುಕೊಂಡೆ’ ಎಂದರು. ಹಿರಿಯ ನಟ ಸುಂದರ್‌ ರಾಜ್‌ ಸಿನಿಮಾ, ಪಾತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರೆ, ಸಂಗೀತ ನಿರ್ದೇಶಕಿ ಶಮಿತಾ ಮಲಾ°ಡ್‌ ಹಾಡುಗಳ ಬಗ್ಗೆ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next