ಉಡುಪಿ: ವಿದ್ಯಾವಾಚಸ್ಪತಿ, ಪದ್ಮಶ್ರೀ ಪುರಸ್ಕೃತ, ಡಾ ಬನ್ನಂಜೆ ಗೋವಿಂದಾಚಾರ್ಯ ಇಂದು (ಡಿ.13) ವಿಧಿವಶರಾಗಿದ್ದಾರೆ. ಸಾಹಿತ್ಯ-ಸಂಶೋಧಕ, ಕವಿ, ಅನುವಾದಕ, ಉಪನ್ಯಾಸಕ, ಪ್ರವಚನ ವಿದ್ವಾಂಸ ಮುಂತಾದ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಇವರು ಪ್ರತಿಷ್ಠಿತ ಉದಯವಾಣಿ ದಿನಪತ್ರಿಕೆಯಲ್ಲಿ ಪತ್ರಕರ್ತ, ಸಾಪ್ತಾಹಿಕ ವಿಭಾಗ ಸಂಪಾದಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು.
ಇವರ ಸಾಹಿತ್ಯಿಕ ಸಾಧನೆಗಳನ್ನು ಗಮನಿಸುವುದಾದರೆ, ಅನೇಕ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಬಾಣಭಟ್ಟನ ಕಾದಂಬರಿ, ಕಾಳೀದಾಸನ ಶಾಕುಂತಲಾ, ಶೂದ್ರಕನ ’ಮೃಚ್ಛಕಟಿಕ’ ಇತ್ಯಾದಿ ಚಾರಿತ್ರಿಕ ಕೃತಿಗಳು ಇವರ ಅನುವಾದಿತ ಕೃತಿಗಳಲ್ಲಿ ಪ್ರಮುಖವಾದುವು.
ಭಾರತದ ಪ್ರಾಚೀನ ಜ್ಞಾನ ಶಾಖೆಗಳಾದ ವೇದ, ಉಪನಿಷತ್ತು, ಪುರಾಣ, ರಾಮಾಯಣ, ಮಹಾಭಾರತ ಇತ್ಯಾದಿಗಳ ಕುರಿತು ದೇಶ ವಿದೇಶಗಳಲ್ಲಿ ಈ ತನಕ ಸುಮಾರು 30,000 ಸಾವಿರ ಗಂಟೆಗಳಷ್ಟು ಉಪನ್ಯಾಸ ಪ್ರವಚನಗೈದ ದಾಖಲೆ ಬರೆದಿದ್ದಾರೆ. ಇವರ ಸಾಧನೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಇದನ್ನೂ ಓದಿ: ಬನ್ನಂಜೆ ಗೋವಿಂದಾಚಾರ್ಯ ನಿಧನಕ್ಕೆ ಮುಖ್ಯಮಂತ್ರಿ ಬಿಎಸ್ ವೈ ಸಂತಾಪ
ರಾಜ್ಯ ಮಟ್ಟದ ಪ್ರಶಸ್ತಿಗಳು :
ಉಡುಪಿ ಶ್ರೀ ಕೃಷ್ಣ ಮಠ ಅಷ್ಟಮಠಗಳು ಸೇರಿದಂತೆ ಅನೇಕ ಪ್ರಸಿದ್ಧ ಮಠ ಸಂಸ್ಥಾನಗಳಿಂದ ವಿದ್ಯಾ ವಾಚಸ್ಪತಿ, ವಿದ್ಯಾರತ್ನಾಕ , ಪಂಡಿತರತ್ನ, ಸಂಶೋಧನಾ ವಿಚಕ್ಷಣ ಪಂಡಿತಾಚಾರ್ಯ ಇತ್ಯಾದಿ ಬಿರುದು ಪ್ರದಾನವಾಗಿದೆ.
ಉಡುಪಿ ಶ್ರೀ ಕೃಷ್ಣ ಮಠದ ಆಸ್ಥಾನ ವಿದ್ವಾನ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-1974, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.
ರಾಷ್ಟ್ರೀಯ ಪ್ರಶಸ್ತಿಗಳು :
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತ ಸರಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ 2009
ಅಂತಾರಾಷ್ಟ್ರೀಯ ಮಾನ್ಯತೆ: 2008 ರಲ್ಲಿ ಅಮೇರಿಕಾದಲ್ಲಿ ( ಪ್ರಿನ್ಸ್ಟನ್) ನಡೆದ ವಿಶ್ವಶಾಂತಿ ಸಮ್ಮೇಳನಕ್ಕೆ ವಿಶೇಷ ಆಹ್ವಾನಿತರಾಗಿ ಭಾಗಿಯಾಗಿದ್ದರು.
ಸಾಮಾಜಿಕ ಸೇವೆ: ನೆರೆ ಪ್ರವಾಹಗಳ ಸಂದರ್ಭಗಳಲ್ಲಿ ಸಂತ್ರಸ್ತರ ನೆರವಿಗಾಗಿ ಮಾನವೀಯತೆಯ ನೆಲೆಯಲ್ಲಿ ರಾಜ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಲಕ್ಷಕ್ಕೂ ಮಿಕ್ಕಿದ ಆರ್ಥಿಕ ದೇಣಿಗೆ ನೀಡಿದ್ದರು. ಮಾತ್ರವಲ್ಲದೆ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಸಂತ್ರಸ್ತರಾದ ಬಡವರಿಗೆ ಆಹಾರ ಸಾಮಗ್ರಿ ವಿತರಣೆ ಮಾಡಿದ್ದರು.
ಇದನ್ನೂ ಓದಿ: ಹಿರಿಯ ವಿದ್ವಾಂಸ, ಪದ್ಮಶ್ರೀ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯ ನಿಧನ