ಸಿಂಧನೂರು: ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಆಚರಿಸುವುದನ್ನು ನೋಡಿದ್ದ ತಾಲೂಕಿನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪೂರ್ವಭಾವಿಯಾಗಿ ಹಮ್ಮಿಕೊಂಡಿದ್ದ ತಿರಂಗಾ ಜಾಗೃತಿ ರ್ಯಾಲಿ ಐತಿಹಾಸಿಕ ದಾಖಲೆ ಬರೆಯಿತು.
ಪೂರ್ವಭಾವಿ ಸಭೆಯಲ್ಲಿ ತಾಲೂಕಾಡಳಿತ ಐದಾರು ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆಂಬ ನಿರೀಕ್ಷೆಯನ್ನು ಹುಸಿಗೊಳಿಸುವುದರೊಂದಿಗೆ ಸಾಗರೋಪಾದಿಯಲ್ಲಿ ವಿದ್ಯಾರ್ಥಿಗಳು ರಾಷ್ಟ್ರ ಬಾವುಟ ಹಿಡಿದು ರ್ಯಾಲಿಗೆ ಆಗಮಿಸಿದರು. ದೇಶ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆಗೆ ಸನ್ನದ್ಧವಾಗುತ್ತಿರುವ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗಾ ಕಾರ್ಯಕ್ರಮ ಯಶಸ್ವಿಗೊಳಿಸಲು ನಡೆದ ರ್ಯಾಲಿಯೇ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಕಳೆಗಟ್ಟಿಸಿತು.
ಎಲ್ಲೆಡೆ ರಾರಾಜಿಸಿದ ಬಾವುಟ: ನಗರದ 40ಕ್ಕೂ ಹೆಚ್ಚು ಕಾಲೇಜುಗಳಿಂದ ವಿದ್ಯಾರ್ಥಿಗಳನ್ನು ರಾಷ್ಟ್ರಧ್ವಜದೊಂದಿಗೆ ರ್ಯಾಲಿಗೆ ಕರೆದುಕೊಂಡು ಬರಲಾಗಿತ್ತು. ಬೆಳಗ್ಗೆ 10ಗಂಟೆಯೊತ್ತಿಗೆ ಇಲ್ಲಿನ ತಹಶೀಲ್ ಕಚೇರಿಯ ಮಿನಿ ವಿಧಾನಸೌಧ ಮುಂಭಾಗ, ಗೇಟ್ ಹೊರಗೆ ಸೇರಿದಂತೆ ರಸ್ತೆಯ ಎಲ್ಲೆಡೆಯೂ ವಿದ್ಯಾರ್ಥಿಗಳ ಸರದಿ ಸಾಲು ಕಂಡುಬಂತು.
ಕಾರ್ಯಕ್ರಮಕ್ಕೆ ಚಾಲನೆ ನೀಡಲು ಆಗಮಿಸಿದ ಶಾಸಕ ವೆಂಕಟರಾವ್ ನಾಡಗೌಡ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ತಹಶೀಲ್ದಾರ್, ಪೌರಾಯುಕ್ತರು, ವಿದ್ಯಾರ್ಥಿ ಸಮೂಹವನ್ನು ನೋಡಿ ಸಂತಸಗೊಂಡರು. ವಂದೇ ಮಾತರಂ ಗೀತೆಗೆ ಧ್ವನಿಗೂಡಿಸಿದ ಬಳಿಕ ವಿದ್ಯಾರ್ಥಿಗಳು ಅಲ್ಲಿಂದ ರ್ಯಾಲಿಯನ್ನು ಆರಂಭಿಸಿರು.
3 ಕಿ.ಮೀ. ಉದ್ದಕ್ಕೂ ರ್ಯಾಲಿ: ತಹಶೀಲ್ ಕಚೇರಿ ಮುಂಭಾಗದ ಮಹಾತ್ಮಗಾಂಧಿ ವೃತ್ತದ ಮೂಲಕ ವಿದ್ಯಾರ್ಥಿಗಳನ್ನು ರ್ಯಾಲಿಗೆ ತಂಡೋಪ ತಂಡವಾಗಿ ಕಳುಹಿಸಲಾಯಿತು. ಸಾವಿರಾರು ವಿದ್ಯಾರ್ಥಿಗಳು ತಾಸಿನ ಕಾಲ ತಹಶೀಲ್ ಕಚೇರಿ ಆವರಣ ಖಾಲಿ ಮಾಡಲು ಸರದಿ ನಿಲ್ಲಬೇಕಾಯಿತು. ಗಾಂಧಿ ವೃತ್ತದಿಂದ ಆರಂಭವಾದ ರ್ಯಾಲಿಯು ಬಸವ ಸರ್ಕಲ್, ಬಡಿಬೇಸ್, ಹಳೇಬಜಾರ್, ಕಿತ್ತೂರು ಚನ್ನಮ್ಮ ಸರ್ಕಲ್ ದಾಟಿ ತಹಶೀಲ್ ಕಚೇರಿಗೆ ಬಂದಾಗಲೂ ತಹಶೀಲ್ ಕಚೇರಿಯಲ್ಲಿ ಸರದಿಗೆ ನಿಂತಿದ್ದ ವಿದ್ಯಾರ್ಥಿಗಳನ್ನು ಕಂಡು ನಗರದ ಜನ ಅಚ್ಚರಿಗೊಂಡರು. 3 ಕಿ.ಮೀ.ನಷ್ಟು ನಗರವನ್ನು ಸುತ್ತುವರಿದ ವಿದ್ಯಾರ್ಥಿಗಳು ರಾಷ್ಟ್ರ ಪ್ರೇಮದ ಕಹಳೆ ಮೊಳಗಿಸಿದರು.
ನಾನೆಂದು ಇಂತಹ ರ್ಯಾಲಿಯನ್ನು ನೋಡಿರಲಿಲ್ಲ. ಇದು ಐತಿಹಾಸಿಕ. 75ನೇ ವರ್ಷದ ಸ್ವಾತಂತ್ರ್ಯೋತ್ಸವಕ್ಕೆ ಯುವ ಸಮೂಹ ಕಳೆ ತಂದಿದೆ. ಇದೊಂದು ದಾಖಲೆಯ ದಿನ.
-ವೆಂಕಟರಾವ್ ನಾಡಗೌಡ, ಶಾಸಕರು, ಸಿಂಧನೂರು
ನಭೋತೋ ನ ಭವಿಷ್ಯತಿ ಎನ್ನುವಂತೆ ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು, ಕಾಲೇಜಿನ ಮುಖ್ಯಸ್ಥರು, ಸಾರ್ವಜನಿಕರು ಯಶಸ್ವಿಗೊಳಿಸಿದ್ದಾರೆ. ಮುಂದಿನ ಕಾರ್ಯಕ್ರಮಕ್ಕೂ ಜನರ ಸಹಕಾರ ಅಗತ್ಯ.
-ಮಂಜುನಾಥ ಗುಂಡೂರು, ಪೌರಾಯುಕ್ತರು, ನಗರಸಭೆ ಸಿಂಧನೂರು