Advertisement
ಸುತ್ತಲೂ ನೀಲಿ ಸಮುದ್ರ, ಹಸಿರು ತುಂಬಿದ ಗಿಡಗಳು, ಸುಂದರ ವಾತಾವರಣ… ದ್ವೀಪ ಎಂದಾಕ್ಷಣ ಕಣ್ಮುಂದೆ ಸುಳಿಯುವ ಚಿತ್ರಣವಿದು. ಅದಕ್ಕೆಂದೇ ದ್ವೀಪ, ಪ್ರಕೃತಿ ಪ್ರಿಯರ, ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಆದರೆ, ಪ್ರವಾಸಿಗರನ್ನು ಬೆಚ್ಚಿಬೀಳಿಸುವಂತ ದ್ವೀಪವೊಂದಿದೆ. ಅದಿರುವುದು ಮೆಕ್ಸಿಕೋದ ಕ್ಯಾನೊನ್ ಎಂಬ ಪುಟ್ಟ ಹಳ್ಳಿಯಲ್ಲಿ. ಈ ಪ್ರದೇಶ ಭಯ ಹುಟ್ಟಿಸುವಂತಿರುವುದಕ್ಕೆ ಮುಖ್ಯ ಕಾರಣ ಇಲ್ಲಿನ ಮರಗಳಲ್ಲಿ ನೇತಾಡುವ ಗೊಂಬೆಗಳು!
ಈ ಗೊಂಬೆಗಳ ಹಿಂದೊಂದು ರೋಚಕ ಕಥೆಯಿದೆ. ಜೂಲಿಯನ್ ಸಂತಾನ ಬರೆರಾ ಎಂಬುವವರು ಒಮ್ಮೆ ಈ ದ್ವೀಪದಲ್ಲಿ ಸುತ್ತಾಡುತ್ತಿದ್ದರು. ಹೆಣ್ಣುಮಗುವೊಂದು ನೀರಿನಲ್ಲಿ ತೇಲಿಕೊಂಡು ಹೋಗುವುದು ಅವರ ಕಣ್ಣಿಗೆ ಬಿತ್ತು. ಜೊತೆಗೇ ಒಂದು ಗೊಂಬೆಯೂ ತೇಲುತ್ತಿತ್ತು. ಪ್ರಯತ್ನಪಟ್ಟರೂ ಅವರಿಗೆ ಆ ಮಗುವನ್ನು ಕಾಪಾಡಲು ಸಾಧ್ಯವಾಗಲಿಲ್ಲ, ಗೊಂಬೆ ಮಾತ್ರ ಅವರ ಕೈಗೆ ಸಿಕ್ಕಿತು. ಮಗುವನ್ನು ರಕ್ಷಿಸಲಾಗದ ಕೊರಗು ಅವರನ್ನು ಕಾಡಿದಾಗ, ಜೂಲಿಯನ್ ಆ ಗೊಂಬೆಯನ್ನು ಮೇಲಕ್ಕೆತ್ತಿ ತಂದು ಮರಕ್ಕೆ ನೇತು ಹಾಕಿದರು. ಮುಂದೆ ಇದೇ ಪರಿಪಾಠವನ್ನು ಸ್ಥಳೀಯರು ಮುಂದುವರಿಸಿಕೊಂಡು ಬಂದರು. ಇಲ್ಲಿರುವ ಗೊಂಬೆಗಳೆಲ್ಲವೂ ಜನರ ಆಪ್ತರ ನೆನಪನ್ನು ತಮ್ಮಲ್ಲೇ ಉಳಿಸಿಕೊಂಡಿವೆ. ನೀರಿನಲ್ಲಿ ಮುಳುಗಿದ ಜೂಲಿಯನ್
ಅವರು ಅಷ್ಟಕ್ಕೇ ಸುಮ್ಮನಾಗುವುದಿಲ್ಲ. ಎಲ್ಲೇ ಹಳೆಯ ಗೊಂಬೆಗಳನ್ನು ಕಂಡರೂ ಅವುಗಳನ್ನು ತಂದು ಈ ದ್ವೀಪದ ಮರಗಳಿಗೆ ನೇತು ಹಾಕುವುದು ಜೂಲಿಯನ್‌ರ ಹವ್ಯಾಸವಾಗಿಬಿಟ್ಟಿತು. ಅವರು ಐವತ್ತು ವರ್ಷಗಳಿಂದ ಸಂಗ್ರಹಿಸಿದ ಗೊಂಬೆಗಳೆಲ್ಲಾ ಈ ಮರಗಳಲ್ಲಿವೆಯಂತೆ. ವಿಚಿತ್ರವೆಂದರೆ, 2001ರಲ್ಲಿ ಜೂಲಿಯನ್ ಕೂಡ ಇದೇ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದು. ಅಲ್ಲಿಂದ ಇಲ್ಲಿಯವರೆಗೂ ಇದೊಂದು ಜನಪ್ರಿಯ ಸ್ಥಳವಾಯಿತು.
Related Articles
Advertisement
– ಪುರುಷೋತ್ತಮ್