ರಾಯಚೂರು: ರಾಷ್ಟ್ರಗೀತೆ ಕೇಳುವಾಗ ಶಿಕ್ಷಿತರೇ ಅಗೌರವ ತೋರುತ್ತಿರುವ ಕಾಲದಲ್ಲಿ ಚಿಂದಿ ಆಯುವ ಬಾಲಕನೊಬ್ಬ ಗೌರವ ಸಲ್ಲಿಸಿ ನಿಂತು ದೇಶಭಕ್ತಿ ಪ್ರದರ್ಶಿಸಿರುವ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ಘಟನೆ ನಡೆದಿರುವುದು ತಾಲೂಕಿನ ದೇವಸೂಗೂರು ಗ್ರಾಮದಲ್ಲಿ. ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ರಾಷ್ಟ್ರಗೀತೆ ಮೊಳಗುತ್ತಿರುವುದನ್ನು ಗಮನಿಸಿದ ಚಿಂದಿ ಆಯುವ ಬಾಲಕ ಸಂತೋಷ ತನ್ನ ಚೀಲ ಬಿಟ್ಟು ಒಂದು ಕ್ಷಣ ಸ್ಥಬ್ಧವಾಗಿ ನಿಂತಿದ್ದಾನೆ. ರಾಷ್ಟ್ರಗೀತೆ ಮುಗಿಯುತ್ತಿದ್ದಂತೆ ತನ್ನ ಚೀಲ ಮತ್ತೆ ಹೆಗಲೇರಿಸಿಕೊಂಡು ಮುನ್ನಡೆಯುತ್ತಾನೆ.
ಈ ದೃಶ್ಯವನ್ನು ಗ್ರಾಮದ ಯುವಕ ಸೆರೆ ಹಿಡಿದಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ. ಬಾಲಕ ಐದನೇ ತರಗತಿವರೆಗೆ ಶಾಲೆಗೆ ಹೋಗಿದ್ದು, ಬಡತನದ ಹಿನ್ನೆಲೆಯಲ್ಲಿ ಶಾಲೆ ಮೊಟಕುಗೊಳಿಸಿದ್ದಾನೆ. ಇರಲು ಸೂಕ್ತ ಮನೆ ಕೂಡ ಇಲ್ಲ. ಎಲ್ಲಿ ಬೇಕಾದಲ್ಲಿ ವಾಸಿಸುತ್ತಿದ್ದು, ತಂದೆ ತಾಯಿ ಕೂಡ ಕೂಲಿ ನಾಲಿ ಮಾಡಿಯೇ ಬದುಕುತ್ತಿದ್ದು, ಅವರಿಗೆ ಬಾಲಕ ಕೂಡ ಚಿಂದಿ, ಪ್ಲಾಸ್ಟಿಕ್ ಆಯುವ ಮೂಲಕ ನೆರವಾಗುತ್ತಿದ್ದಾನೆ. ಆದರೆ, ಬಾಲಕನ ಸಮಯಪ್ರಜ್ಞೆ, ದೇಶಭಕ್ತಿ ಮಾತ್ರ ಎಂಥವರಿಗಾದರೂ ಮಾದರಿ ಎನಿಸಿದೆ. ಅಲ್ಲದೇ, ಈ ಬಾಲಕನ ವಿದ್ಯಾಭ್ಯಾಸಕ್ಕೆ ಜಿಲ್ಲಾಡಳಿತ ಸೂಕ್ತ ಕ್ರಮ ವಹಿಸಲಿ ಎಂಬ ಒತ್ತಾಯಗಳು ಕೇಳಿ ಬರುತ್ತಿವೆ.