Advertisement

Sagara ಒಂದು ಹೆಬ್ಬಾವಿನ ಕಥೆ; ಬಾಯಿಗೆ ಸಿಕ್ಕಿದ್ದು ಹೊಟ್ಟೆಗಿಲ್ಲ!

06:15 PM Oct 01, 2023 | Shreeram Nayak |

ಸಾಗರ: ಸಾಗರದ ಹೊರವಲಯದ ರಾಮನಗರದ ಪಕ್ಕದ ಕಾಡಿನಲ್ಲಿ ಅಪರೂಪದ ಹೆಬ್ಬಾವೊಂದು ಭರ್ಜರಿ ನರಿಯೊಂದನ್ನು ಭೇಟಿ ಮಾಡಿ ನುಂಗಲು ಹೊರಟ ಕ್ಷಣದಲ್ಲಿ ಜನ ಗುಂಪು ಸೇರಿದ್ದರಿಂದ ಭಯಗೊಂಡ ಹಾವು ತನ್ನ ಬೇಟೆಯನ್ನು ತ್ಯಜಿಸುವಂತಾದ, ಇತ್ತ ನರಿಯೂ ಸಾವು ಕಂಡ ಹಾಗೂ ಇದರಿಂದ ಆಹಾರ ಸರಪಳಿಯಲ್ಲಿ ಹೆಬ್ಬಾವಿನ ನಾಲ್ಕು ತಿಂಗಳ ಆಹಾರ ಕಳೆದುಕೊಂಡಂತಹ ಪ್ರಸಂಗದಿಂದ ಪರಿಸರ ಪ್ರೇಮಿಗಳು ಬೇಸರಗೊಂಡ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.

Advertisement

ಹೆಬ್ಬಾವು ಮಲೆನಾಡಿನಲ್ಲಿ ಅಪರೂಪದ ನರಿಯೊಂದನ್ನು ಹಿಡಿದು ಉಸಿರುಗಟ್ಟಿಸುತ್ತಿದ್ದ ಸಂದರ್ಭದಲ್ಲಿ ಕೆಲವು ಜನರು ಗಮನಿಸಿದ್ದಾರೆ. ಇನ್ನೇನು ಅದು ತನ್ನ ಭೋಜನವನ್ನು ತಿನ್ನಬೇಕು ಅನ್ನುವಷ್ಟರಲ್ಲಿ ನಿಧಾನವಾಗಿ ಅಲ್ಲಿ ಜನ ಸೇರಿದ್ದಾರೆ. ಗುಂಪಿನ ಗೌಜಿಗೆ ವಿಚಲಿತವಾದ ಹಾವು ಬೇಟೆಯನ್ನು ಬಿಟ್ಟಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಸ್ಥಳಕ್ಕೆ ಬಂದವರು ಹೆಬ್ಬಾವನ್ನು ಹಿಡಿಯುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ಹೆಬ್ಬಾವು ಅಲ್ಲಿಂದ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಪ್ಪಳಿ ಲಿಂಗದಹಳ್ಳಿಯ ಸಿ.ಗುರುಮೂರ್ತಿ ಅವರ ಅಡಿಕೆ ತೋಟದಲ್ಲಿ ಕಾಣಿಸಿಕೊಂಡಿದೆ. ತೋಟದ ಮಾಲೀಕರು ಅರಣ್ಯ ಇಲಾಖೆಗೆ ಫೋನ್ ಮಾಡಿ ರಕ್ಷಣೆಗೆ ಕೋರಿದ ಹಿನ್ನೆಲೆಯಲ್ಲಿ ಅವರು ಅದನ್ನು ಹಿಡಿಸಿ ಕಾಡಿಗೆ ಬಿಟ್ಟಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ, ಅಕ್ಟೋಬರ್ ಎರಡರಿಂದ ಎಂಟರವರೆಗೆ ವಿಶ್ವ ವನ್ಯಜೀವಿ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಇಂತಹ ಸಂದರ್ಭಲ್ಲಿ ರಾಮನಗರದಲ್ಲಿ ಜನರ ಗುಂಪು ಸುಮ್ಮನೆ ಇದ್ದಿದ್ದರೆ ಹೆಬ್ಬಾವು ತನ್ನ ಬೇಟೆಯನ್ನು ಭಕ್ಷಣೆ ಮಾಡುತ್ತಿತ್ತು ಹಾಗೂ ಮತ್ತೆ ನಾಲ್ಕು ತಿಂಗಳು ಅದಕ್ಕೆ ಆಹಾರದ ಅವಶ್ಯಕತೆ ಇರುತ್ತಿರಲಿಲ್ಲ. ಗುಂಪು ಗಲಾಟೆ ಮಾಡಿದ್ದರಿಂದ ಹೆಬ್ಬಾವು ತನ್ನ ಬೇಟೆಯನ್ನು ಬಿಟ್ಟು ಹೊರಟಿತು. ಆ ಹೆಬ್ಬಾವಿಗೆ ಇನ್ನೊಂದು ಬೇಟೆ ಸಿಗಲು ಅದೆಷ್ಟು ದಿನ ಕಾಯಬೇಕೋ ಗೊತ್ತಿಲ್ಲ. ಸತ್ತು ಹೋದ ನರಿಯನ್ನು ಇಲಾಖೆಯವರು ಸುಟ್ಟು ಹಾಕಿದರು.

ವನ್ಯಜೀವಿಗಳ ಕುರಿತಾಗಿ ನಮ್ಮಲ್ಲಿ ಇನ್ನೂ ಜಾಗೃತಿ ಇಲ್ಲವೆಂದು ಈ ಘಟನೆ ತೋರಿಸುತ್ತದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next